

ಕಳಪೆ ಮತ್ತು ನಕಲಿ ಉತ್ಪನ್ನಗಳ ಹಾವಳಿ ಈಗ ಔಷಧ ಉದ್ಯಮದಲ್ಲೂ ತೀವ್ರಗೊಂಡಿರುವುದು ಚಿಂತಾಜನಕ ಸಂಗತಿ. ದೇಶದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆ ಕಂಪನಿಗಳು ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿದ್ದು, ಸರ್ಕಾರದ ನಿಯಮಗಳು, ಸುರಕ್ಷಾ ಮಾನದಂಡಗಳು ಯಾವುದನ್ನೂ ಪಾಲಿಸುತ್ತಿಲ್ಲ. ಆದರೆ, ಭ್ರಷ್ಟ ವ್ಯವಸ್ಥೆಯು ಇಂಥ ಕಂಪನಿಗಳ ವಿರುದ್ಧ ಕ್ರಮ ಸಾಧ್ಯವಾಗದಂತೆ ಪೋಷಣೆ ಮಾಡುತ್ತಿರುವುದು ನಿಜಕ್ಕೂ ದುರ್ದೈವಕರ. ಕಾಯಿಲೆ ವಾಸಿಯಾಗಲೆಂದು ಬಡವರು, ಮಧ್ಯಮವರ್ಗದವರು ಸಾಲ ಮಾಡಿಯಾದರೂ ಔಷಧ ಖರೀದಿಸಿ, ಸೇವಿಸುತ್ತಾರೆ. ಆದರೆ, ಜೀವ ರಕ್ಷಿಸಬೇಕಾದ ಔಷಧಗಳೇ ಜೀವ ತೆಗೆಯುವ ಸ್ಥಿತಿಗೆ ಬಂದಿರುವುದು ಕಳವಳದ ಸಂಗತಿ.
ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೆಮ್ಮಿನ ನಿಯಂತ್ರಣಕ್ಕೆ ಸಿರಪ್ ಸೇವಿಸಿದ ಒಂಟು 11 ಮಕ್ಕಳು ಮೃತಪಟ್ಟ ಘಟನೆ ಪಾಲಕರಲ್ಲಿ ತೀವ್ರ ಆತಂಕವನ್ನು ಉಂಟು ಮಾಡಿದೆ. ಸಾಮಾನ್ಯ ಶೀತ, ಕೆಮ್ಮಿಗೆ ವೈದ್ಯರು ಸೂಚಿಸಿದ ಔಷಧವನ್ನೇ ನೀಡಿದರೂ, ಸಿರಪ್ ಸೇವಿಸಿದ ಕೆಲ ಸಮಯದಲ್ಲೇ ಮಕ್ಕಳು ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕಿಡ್ನಿ ವೈಫಲ್ಯದಿಂದ 11 ಸಾವುಗಳು ಸಂಭವಿಸಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಸಂಕಷ್ಟ ಹೇಳತೀರದಂತಿದೆ. ಮಕ್ಕಳು ಬೇಗ ಚೇತರಿಸಿಕೊಳ್ಳಲಿ ಎಂಬ ಕಾಳಜಿಯಿಂದ ಆಸ್ಪತ್ರೆಗೆ ಕೊಂಡೊಯ್ದು, ಔಷಧ ಕೊಡಿಸಿದ ಪಾಲಕರ ಆಕ್ರಂದನ ಜಡ್ಡುಗಟ್ಟಿದ ವ್ಯವಸ್ಥೆಗೆ ಕೇಳಿಸುತ್ತಿಲ್ಲವೆ? ಪಾಲಕರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಲು ಸಿರಪ್ ಸೇವಿಸಿದ ರಾಜಸ್ಥಾನದ ಒಬ್ಬ ಹಿರಿಯ ವೈದ್ಯರು ಕೂಡ ಪ್ರಜ್ಞಾಹೀನರಾಗಿದ್ದು, ಔಷಧ ವಿಷಯುಕ್ತವಾಗಿದೆ ಎಂಬ ಅನುಮಾನಕ್ಕೆ ಇಂಬು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಹಲವು ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ ಮತ್ತು ಮಕ್ಕಳ ಸಾವಿಗೆ ಕಾರಣ ಪತ್ತೆ ಹಚ್ಚಲು ಸಮಿತಿ ರಚಿಸಿದೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಜ್ವರ, ಶೀತ, ಕೆಮ್ಮು ತುಂಬ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಮೇಲಂತೂ ಬಹುಬೇಗ ಪರಿಣಾಮ ಬೀರುತ್ತದೆ. ಆದರೆ, ಕಾಯಿಲೆ ನಿವಾರಿಸಬೇಕಾದ ಔಷಧಗಳೇ ಮಕ್ಕಳ ಪಾಲಿಗೆ ಮಾರಕವಾದರೆ ಗತಿ ಏನು? ಇದು ತುಂಬ ಗಂಭೀರ ಹಾಗೂ ಶೋಚನೀಯ ಸಂಗತಿ. ಈ ಕುರಿತು ಸೂಕ್ತ ತನಿಖೆ ನಡೆಸುವುದಲ್ಲದೆ, ಕಳಪೆ ಮತ್ತು ನಕಲಿ ಔಷಧಗಳ ಜಾಲವನ್ನು ನಿಮೂಲನಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೆನೆರಿಕ್ ಔಷಧಗಳ ಗುಣಮಟ್ಟದ ಬಗ್ಗೆ ಆಗಾಗ ಆಕ್ಷೇಪದ ದನಿಗಳು ಕೇಳಿಬರುತ್ತಲೇ ಇವೆ. ಆದರೂ ಜೆನರಿಕ್ ಔಷಧಗಳ ಉತ್ಪಾದನೆಗೆ ಕಡಿವಾಣ ಬಿದ್ದಿಲ್ಲ. ಕೆಮ್ಮು ನಿಯಂತ್ರಣಕ್ಕೆ ನೀಡಲಾಗುವ ಸಿರಪ್ನಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸಲಾಗಿದೆ ಇಲ್ಲವೆ ಕಳಪೆ ದರ್ಜೆಯ ಔಷಧ ತಯಾರಿಸಲಾಗಿದೆ ಎಂದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜನರು ಆರೋಪಿಸಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್ ಮತ್ತು ಬದ್ಧಿ ಕ್ಷೇತ್ರದಲ್ಲಿ ಕಳಪೆ ಮತ್ತು ನಕಲಿ ಔಷಧ ತಯಾರಿಸುವ ಹಲವಾರು ಕಂಪನಿಗಳಿದ್ದು, ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಕಂಪನಿಗಳು ತಯಾರಿಸುವ ಕಳಪೆ ಔಷಧಗಳು ದೇಶದ ಹಲವು ರಾಜ್ಯಗಳಿಗೆ ಪೂರೈಕೆಯಾಗುತ್ತಿವೆ. ಔಷಧ ಕಂಪನಿಗಳ ಗುಣಮಟ್ಟದ ಬಗ್ಗೆ ನಿರಂತರ ತಪಾಸಣೆ ನಡೆಯದಿರುವುದು, ಔಷಧ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳ ಕುರಿತಾದ ದಾಖಲೆಗಳ ನಿರ್ವಹಣೆ ಇಲ್ಲದಿರುವುದು, ಲೇಬಲಿಂಗ್ನಲ್ಲೂ ಅಕ್ರಮ ಮಾಡುವುದು ಸೇರಿದಂತೆ ಹಲವು ಅಕ್ಷಮ್ಯ ಚಟುವಟಿಕೆಗಳು ನಡೆಯುತ್ತಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಕಲಿ ಔಷಧ ಕಂಪನಿಗಳನ್ನು ಮುಚ್ಚಬೇಕು ಮತ್ತು ಅಧಿಕೃತವಾಗಿ ನೋಂದಣಿಯಾಗಿರುವ ಔಷಧ ಕಂಪನಿಗಳು ತಯಾರಿಸುವ ಉತ್ಪನ್ನಗಳ ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡುವಂಥ ಬಿಗಿ ವ್ಯವಸ್ಥೆ ಜಾರಿಗೆ ತರಬೇಕು.