ಸಂಪಾದಕೀಯ: ಕೃಷಿಗೆ ಪೂರಕವಾಗಲಿ

Agri
Published on

ಯಾವುದೇ ಕಾಯ್ದೆಯಿಂದ ಜನರಿಗೆ ಕಿರುಕುಳ ಅಥವಾ ತೊಂದರೆ ಉಂಟಾಗುತ್ತಿದ್ದರೆ ಅಂಥ ಕಾಯ್ದೆಯಲ್ಲಿನ ಲೋಪಗಳನ್ನು ಸರಿಪಡಿಸುವುದು ಸರ್ಕಾರದ ಪ್ರಮುಖ ಕರ್ತವ್ಯ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಆ ಬಳಿಕ ಕಾಯ್ದೆ ಜಾರಿಗೆ ತರಲು ಸಂಪುಟ ನಿರ್ಧರಿಸಿದೆ. ಮುಖ್ಯವಾಗಿ, ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸುವ ಅವಕಾಶ ದೊರೆಯಲಿದೆ. ಈ ನಿಟ್ಟಿನಲ್ಲಿ ಆದಾಯ ಮಿತಿಯನ್ನು ತೆಗೆಯಲಾಗಿದ್ದು, ಇತರ ನಿರ್ಬಂಧಗಳನ್ನು ಕೂಡ ಸಡಿಲಿಸಲಾಗಿದೆ. ಕೃಷಿ ಭೂಮಿ ಇಲ್ಲದ ಅನೇಕರಿಗೆ ಕೃಷಿ ಮಾಡುವ ಆಸಕ್ತಿ ಇದ್ದರೂ ಈಗಿರುವ ಕಾಯ್ದೆಯ ಪರಿಣಾಮ ಕೃಷಿ ಜಮೀನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ಬೇರೆ ರಂಗಗಳಲ್ಲಿ ಇರುವ ಯುವಕರು ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ಮುಖ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. ಇವರಿಗೆಲ್ಲ ಪ್ರಸಕ್ತ ಕಾಯ್ದೆ ತಿದ್ದುಪಡಿಯಿಂದ ಲಾಭವಾಗಲಿದ್ದು, ಕೃಷಿಭೂಮಿ ಖರೀದಿಗೆ ಅನುಕೂಲವಾಗಲಿದೆ.

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕೃಷಿಯೇತರರು ಕೃಷಿ ಜಮೀನು ಖರೀದಿ ಮಾಡಬಹುದು. ಕರ್ನಾಟಕದಲ್ಲಿ ಮಾತ್ರ ಇಂಥ ನಿರ್ಬಂಧ ಇರುವುದರಿಂದ ಇಲ್ಲಿಯವರು ನೆರೆಯ ರಾಜ್ಯಗಳಲ್ಲಿ ಜಮೀನು ಖರೀದಿಸುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಪ್ರಸಕ್ತ ಕಾಯ್ದೆ ತಿದ್ದುಪಡಿಯಿಂದ ಕುಟುಂಬವಿಲ್ಲದ ಒಬ್ಬ ವ್ಯಕ್ತಿ ಅಥವಾ ಐದು ಮಂದಿ ಇರುವ ಒಂದು ಕುಟುಂಬ 108 ಎಕರೆವರೆಗೆ ಜಮೀನು ಖರೀದಿಸಬಹುದು. ಈ ಕ್ರಮದಿಂದ ಹಲವು ಪ್ರಯೋಜನವಾಗಲಿದ್ದು, ಕೃಷಿಯ ಪ್ರಮಾಣ ಹೆಚ್ಚಳವಾಗಲು ನೆರವಾಗಲಿದೆ. ಅಲ್ಲದೆ, ಬೀಳು ಬಿದ್ದ ಜಮೀನಿನಲ್ಲಿಯೂ ವ್ಯವಸಾಯ ಮಾಡಲು ಸಾಧ್ಯವಾಗಲಿದೆ. ‘ಭೂ ಸುಧಾರಣಾ ಕಾಯ್ದೆಯಿಂದ ಜನರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ’ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ಸಂಪಾದಕೀಯ: ಆಹಾರದ ಕೊರತೆ ಕಾಡದಿರಲಿ

ನೆರೆಯ ರಾಜ್ಯಗಳೆಲ್ಲ ಕೃಷಿಗೆ ಒತ್ತು ನೀಡುತ್ತಿರುವಾಗ ಕರ್ನಾಟಕ ಕೂಡ ಆ ದಾರಿಯಲ್ಲಿ ಹೆಜ್ಜೆ ಇಡುವುದು ಅಗತ್ಯವಾಗಿತ್ತು. ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಅದರಿಂದ ಭತ್ತದಂಥ ಪ್ರಮುಖ ಆಹಾರ ಬೆಳೆಯುವುದೂ ಕಡಿಮೆ ಆಗಿದ್ದು, ಮುಂಬರುವ ವರ್ಷಗಳಲ್ಲಿ ಅಕ್ಕಿಯ ಕೊರತೆ ಕಾಡಬಹುದು ಎಂಬ ವಿಜ್ಞಾನಿಗಳ ವರದಿ ಎಚ್ಚರಿಕೆ ಗಂಟೆ ಬಾರಿಸಿದೆ.

ಕೃಷಿರಂಗ ಸಶಕ್ತವಾಗಬೇಕಾದರಲ್ಲಿ ಇದರಲ್ಲಿ ತೊಡಗುವವರ ಸಂಖ್ಯೆಯೂ ಹೆಚ್ಚಬೇಕಿದೆ. ಅಂತೆಯೇ, ಇಲ್ಲಿ ಸಣ್ಣ ಆತಂಕವೂ ಕಾಡುತ್ತಿದೆ. ಜಮೀನಿಗೆ ಒಳ್ಳೆ ಬೆಲೆ ಸಿಗುತ್ತದೆ ಎಂದುಕೊಂಡು ರೈತರು ಭೂಮಿಯನ್ನು ಮಾರಿ, ಕೃಷಿಯಿಂದ ವಿಮುಖವಾಗಬಹುದು. ಅಂಥ ಸ್ಥಿತಿ ಬರಬಾರದು. ಕೃಷಿಯೇತರರು ಭೂಮಿ ಖರೀದಿಸುವುದರಿಂದ ಬಂಡವಾಳವೂ ಹರಿದು ಬರಬೇಕು, ಕೃಷಿಯ ಪ್ರಮಾಣವೂ ಹೆಚ್ಚಬೇಕು. ಆಗಲೇ ನಿಜವಾದ ಅಭಿವೃದ್ಧಿ ಸಾಧ್ಯವಾಗಬಹುದು. ಇದನ್ನೂ ಓದಿ: ಸಂಪಾದಕೀಯ: ಸೂಕ್ತ ಸಿದ್ಧತೆ ಅಗತ್ಯ; ಮಳೆ ಅನಾಹುತ ತಡೆಗಟ್ಟಲು ಜನಪ್ರತಿನಿಧಿಗಳು ಕಾಳಜಿ ತೋರಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net