ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಒಸಿ ಕಡ್ಡಾಯವಾಗಿದ್ದರಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕ ಪ್ರಕ್ರಿಯೆಗಳು ಈಗ ಮರುಚಾಲನೆ ಪಡೆದುಕೊಂಡಿವೆ. ಆದರೆ, ನೆಲಮಹಡಿಯಲ್ಲಿ ವಾಣಿಜ್ಯ ಮಳಿಗೆಗಳಿದ್ದು (ಅಂಗಡಿ) ಮೇಲ್ಭಾಗದಲ್ಲಿ ಮನೆ ಹೊಂದಿರುವ ಕಟ್ಟಡಗಳು, ಪಿಜಿಗಳು ಮತ್ತು ಸಂಪೂರ್ಣ ವಾಣಿಜ್ಯ ಸಂಕೀರ್ಣಗಳಿಗೆ ಈ ಆದೇಶದಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಹಾಗಾಗಿ ಆ ವರ್ಗದ ಮಾಲೀಕರು ಇನ್ನೂ ಗೊಂದಲದಲ್ಲೇ ಉಳಿದಿದ್ದಾರೆ. ಅಲ್ಲದೆ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ.) ಇಲ್ಲ ಎಂಬ ಕಾರಣಕ್ಕೆ ಸುಮಾರು ಮೂರೂವರೆ ಲಕ್ಷ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ನಿರಾಕರಿಸಿ, ತಾತ್ಕಾಲಿಕ ಸಂಪರ್ಕದ ಹೆಸರಿನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಬೆಸ್ಕಾಂ ಮತ್ತಿತರ ವಿದ್ಯುತ್ ಕಂಪನಿಗಳ ದಬ್ಬಾಳಿಕೆಗೆ ಕೈಗನ್ನಡಿಯಾಗಿದೆ. ಸಾಮಾನ್ಯ ಗ್ರಾಹಕರು ಪ್ರತಿ ಯೂನಿಟ್‌ಗೆ ₹5.80 ಪಾವತಿಸಿದರೆ, ಇವರಿಂದ ₹10.50 ವಸೂಲಿ ಮಾಡಲಾಗುತ್ತಿರುವುದು ತೀರಾ ಅನ್ಯಾಯ. ಮನೆ ನಿರ್ಮಾಣ ಮುಗಿದಿದ್ದರೂ ನಿಯಮಗಳ ಗೊಂದಲದಿಂದಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಬಿಲ್ ಕಟ್ಟುವುದು ಮಧ್ಯಮ ವರ್ಗದವರ ಬದುಕನ್ನು ದುಸ್ತರಗೊಳಿಸಿದೆ. ಆದ್ದರಿಂದ, ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡ ಸೇರಿ ಎಲ್ಲ ರೀತಿಯ ಕಟ್ಟಡಗಳಿಗೆ ಒಂದು ಬಾರಿಯ ವಿನಾಯಿತಿಯನ್ನು ಅನ್ವಯಗೊಳಿಸುವುದು ಸೂಕ್ತ.