ಸಂಪಾದಕೀಯ: ಅನಪೇಕ್ಷಿತ ನಡೆ

v
Published on

ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದೆ. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದ ಶೇಕಡ 24ರಷ್ಟು ಹಣ ವಿನಿಯೋಗ ಮಾಡುವುದನ್ನು ಕಡ್ಡಾಯಗೊಳಿಸಿ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವೇ ಕಾನೂನು ತಿದ್ದುಪಡಿ ಮಾಡಿತ್ತು. ಈ ಹಣ ವೆಚ್ಚ ಮಾಡಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವ ಕ್ರಾಂತಿಕಾರಿ ನಿರ್ಣಯವೂ ಆ ತಿದ್ದುಪಡಿ ಮಸೂದೆಯಲ್ಲಿತ್ತು. ಇಂತಹ ಐತಿಹಾಸಿಕ ಹೆಜ್ಜೆ ಇಟ್ಟ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು (ಮೊದಲನೆಯದು ಆಂಧ್ರಪ್ರದೇಶ). ಈಗ ಅದೇ ಸಿದ್ದರಾಮಯ್ಯ ಅವರು, ‘ಪರಿಶಿಷ್ಟ ಜಾತಿ/ಪಂಗಡಗಳ ಉಪಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಏಕೆ ಬಳಸಬಾರದು?’ ಎಂದು ಮಾಧ್ಯಮಗಳ ಮುಂದೆ ಪ್ರಶ್ನಿಸುತ್ತಿದ್ದಾರೆ.

ಎಸ್​ಸಿಪಿ/ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸುವುದಕ್ಕೆ ಸರ್ಕಾರಕ್ಕೆ ಯಾವ ಹಿಂಜರಿಕೆ, ಮುಚ್ಚುಮರೆಯೂ ಇಲ್ಲ ಎಂಬುದು ಅದರ ಅರ್ಥ. ಹಾಗಾದರೆ, ಈ ಜನಾಂಗಗಳ ಹಿಂದುಳಿದಿರುವಿಕೆಯನ್ನು ಗಂಭೀರವಾಗಿ ಪರಿಗಣಿಸಿ ಇತರರ ಸರಿಸಮಾನವಾಗಿ ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢಗೊಳಿಸಲು ಮೀಸಲಾತಿ ನೀಡಿದ್ದ ಸಂವಿಧಾನದ ಆಶಯಕ್ಕೆ ರಾಜ್ಯ ಸರ್ಕಾರ ಎಳ್ಳುನೀರು ಬಿಟ್ಟಿತೇ? ಆ ಕಾಳಜಿ, ಬದ್ಧತೆ ಇಲ್ಲವಾಯಿತೆ? ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸಕ್ಕೆ ಭಾರವಾಗುತ್ತದೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ ಎಂಬ ಆರ್ಥಿಕ ತಜ್ಞರ ಅಭಿಪ್ರಾಯವನ್ನು ಧಿಕ್ಕರಿಸಿದ್ದ ರಾಜ್ಯ ಸರ್ಕಾರ ಈ ವಿಷಯದಲ್ಲಿ ಈಗ ಮತ್ತೆ ಮತ್ತೆ ಎಡವುತ್ತಿರುವುದು ಸ್ಪಷ್ಟ.

ಮಹತ್ವದ ಬೆಳವಣಿಗೆಯಲ್ಲಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಶೇಷ ಉಪಯೋಜನೆಯ 14 ಸಾವಿರ ಕೋಟಿ ರೂ. ಬಳಕೆ ಮಾಡಿಕೊಂಡಿರುವುದನ್ನು ಆಕ್ಷೇಪಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿದ್ದು, ಏಳು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವೇ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿರುವುದು ಗಮನಾರ್ಹ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಹಣವನ್ನು ಅನ್ಯ ಕಾರ್ಯಗಳಿಗೆ ಯಾವ ಕಾರಣಕ್ಕಾಗಿ ಬಳಸಲಾಗಿದೆ ಎಂಬುದನ್ನು ಪ್ರಶ್ನಿಸಿದೆ. ವಿವೇಚನೆಯ ಕೊರತೆಯಿಂದ ಅನ್ಯ ಯೋಜನೆಯ ಹಣವನ್ನು ಇನ್ನಾವುದಕ್ಕೋ ಬಳಸಿಕೊಂಡರೆ ಇಂಥ ಸಂದಿಗ್ಧ ಪರಿಸ್ಥಿತಿ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಸ್ವತಃ ವಿತ್ತ ಖಾತೆಯನ್ನು ನಿರ್ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೇನು ತಿಳಿಯದ ವಿಷಯವಲ್ಲ. ಆದರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿಲ್ಲ ಎಂಬುದನ್ನು ದರ್ಶಿಸುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ಎಸ್​ಸಿಪಿ, ಟಿಎಸ್​ಪಿ ಹಣವನ್ನು ಯಾವುದೇ ಕಾರಣಕ್ಕಾಗಿ ಅನ್ಯ ಉದ್ದೇಶಕ್ಕಾಗಿ ಬಳಸಬಾರದು. ಅಭಿವೃದ್ಧಿ ಯೋಜನೆಗಳಿಗೆ ಹಿಡಿದಿರುವ ಗ್ರಹಣ ನಿವಾರಿಸಲು ಕೂಡ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net