ಸಂಪಾದಕೀಯ; ದಿಕ್ಕು ತಪ್ಪಿಸುತ್ತಿರುವ ಅಮೆರಿಕ

india vs pakistan
Published on

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶತಾಯಗತಾಯವಾಗಿ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲೇ ಬೇಕು ಎಂಬ ಹಠಕ್ಕೆ ಬಿದ್ದಂತಿದೆ. ಹಾಗಾಗಿಯೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ್ಕ ಅವರೊಂದಿಗೂ ಇತ್ತೀಚೆಗೆ ಚರ್ಚೆ ನಡೆಸಿದ್ದಾರೆ. ಈ ಎರಡೂ ಸಭೆಗಳಿಂದ ಫಲಪ್ರದವಾದ ಫಲಿತಾಂಶ ಹೊರಬಿದ್ದಿಲ್ಲ. ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವಿಗೆ ಪುತಿನ್ ಬದ್ಧರಾಗಿದ್ದು, ಹೀಗಾಗಿ ಸಮರವನ್ನು ಮುಂದುವರಿಸುವ ಅನಿವಾರ್ಯತೆ ಝೆಲೆನ್ಸ್ಕಿ  ಅವರಿಗೆ. ಇದರಿಂದ ಟ್ರಂಪ್ ನೊಬೆಲ್ ಶಾಂತಿ ಪುರಸ್ಕಾರದ ಕನಸು ಕಮರಿದೆ. ಆದರೆ, ಅಮೆರಿಕ ತನ್ನ ವೈಫಲ್ಯಗಳನ್ನು ಮರೆಮಾಚಲು ಭಾರತದ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವುದು ಖಂಡನೀಯ. ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧವನ್ನು ಶ್ವೇತಭವನದ ಅಧಿಕಾರಿ ‘ಮೋದಿ ವಾರ್’ ಎಂದು ಕರೆದಿರುವುದು ಅವಿವೇಕದ ನಡೆ.

ಭಾರತದ ಸರಕುಗಳ ರಫ್ತಿನ ಮೇಲೆ ಅಮೆರಿಕ ಶೇಕಡ 50ರಷ್ಟು ಸುಂಕ ಜಾರಿಗೊಳಿಸಿದ ಬೆನ್ನಿಗೇ ಶ್ವೇತಭವನದ ವಹಿವಾಟು ಸಲಹೆಗಾರ ಪೀಟರ್ ನವಾರೊ, ರಷ್ಯಾ-ಯೂಕ್ರೇನ್ ಸಂಘರ್ಷವನ್ನು ‘ಮೋದಿ ಯುದ್ಧ’ ಎಂದು ಕರೆದಿದ್ದಾರೆ. ರಷ್ಯಾದಿಂದ ಇಂಧನವನ್ನು ಭಾರತ ಖರೀದಿಸುವುದನ್ನು ಮುಂದುವರಿಸಿರುವುದು ಮಾಸ್ಕೋದ ಸೇನಾ ಆಕ್ರಮಣಶೀಲತೆಯನ್ನು ಉತ್ತೇಜಿಸಿದೆ ಎಂದೂ ಪೀಟರ್ ಹೇಳಿರುವುದು ಭಾರಿ ಆಕ್ಷೇಪ, ಟೀಕೆಗೆ ಕಾರಣವಾಗಿದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕ ಭಾರತವನ್ನು ಪ್ರತ್ಯೇಕಿಸಿದ್ದಕ್ಕಾಗಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯ ಡೆಮಾಕ್ರಾಟ್​ಗಳು ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದ್ದು ಯಾವಾಗಲೂ ದ್ವಂದ್ವ ನೀತಿ. ರಷ್ಯಾದಿಂದ ಅತಿ ಹೆಚ್ಚು ಕಚ್ಚಾತೈಲ ಖರೀದಿಸುತ್ತಿರುವುದು ಡ್ರಾ್ಯಗನ್ ರಾಷ್ಟ್ರ ಚೀನಾ. ಆದರೆ, ಚೀನಾದ ಬಗೆಗೆ ಮೃದುಧೋರಣೆ ಅನುಸರಿಸುತ್ತಿರುವ ಟ್ರಂಪ್ ಆ ರಾಷ್ಟ್ರದ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ಉದ್ದೇಶಪೂರ್ವಕವಾಗಿಯೇ ಭಾರತವನ್ನು ಗುರಿಯಾಗಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇದು ಭಾರತ-ಅಮೆರಿಕ ನಡುವಿನ ಗಟ್ಟಿ ಮೈತಿಯನ್ನು ಹಾಳುಗೆಡವಲಿದೆ ಎಂಬ ಗಂಭೀರ ಸಂಗತಿಯನ್ನು ಟ್ರಂಪ್ ಮರೆತಂತಿದೆ. ಅಷ್ಟಕ್ಕೂ ಭಾರತ ರಫ್ತಿಗಾಗಿ ಕೇವಲ ಅಮೆರಿಕವನ್ನು ನೆಚ್ಚಿಕೊಂಡಿಲ್ಲ. ಭಾರತ ಪ್ರತಿವರ್ಷ ಜಗತ್ತಿನಾದ್ಯಂತ 38 ಲಕ್ಷ ಕೋಟಿ ರೂ.ಗಳ ಸರಕುಗಳನ್ನು ರಫ್ತು ಮಾಡುತ್ತಿದೆ. ಈ ಪೈಕಿ ಶೇಕಡ 20ರಷ್ಟು ಉತ್ಪನ್ನಗಳು ಅಮೆರಿಕದಲ್ಲಿ ಮಾರಾಟವಾಗುತ್ತವೆ. ಅಮೆರಿಕದ ಶೇ.50ರ ಸುಂಕನೀತಿಯಿಂದ ಭಾರತದ 4.22 ಲಕ್ಷ ಕೋಟಿ ರೂ.ಗಳ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ರಫ್ತಿಗಾಗಿ ಪರ್ಯಾಯ ಮಾರುಕಟ್ಟೆ ಕಂಡುಕೊಳ್ಳಲು ಭಾರತ ಸಮರ್ಥವಾಗಿದೆ. ಈಗಾಗಲೇ ವಾಣಿಜ್ಯ ಸಚಿವಾಲಯ 50 ದೇಶಗಳಿಗಾಗಿ ಹೊಸ ರಫ್ತು ನೀತಿಯನ್ನು ರೂಪಿಸಿದೆ. ಇದರ ಭಾಗವಾಗಿ ಚೀನಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಮಾರುಕಟ್ಟೆಗಳ ಮೇಲೆ ಫೋಕಸ್ ಮಾಡಲಿದೆ. ಆದ್ದರಿಂದ ತನ್ನ ಸ್ವಯಂಕೃತ ತಪು್ಪಗಳಿಂದ ಅಮೆರಿಕ ಆದಷ್ಟು ಬೇಗ ಪಾಠ ಕಲಿತರೆ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net