

ಸಮಾಜದ ಸ್ವಾಸ್ಥ್ಯ ರಕ್ಷಣೆಗೆ ಮತ್ತು ಆದರ್ಶಪೂರ್ಣ ವ್ಯವಸ್ಥೆ ರೂಪುಗೊಳ್ಳಲು ಅಲ್ಲಿ ಮಹಿಳೆಗೆ ಸೂಕ್ತ ಸುರಕ್ಷೆ, ಭರವಸೆ ಮೂಡಿಸುವಂಥ ವಾತಾವರಣ ಅತ್ಯಗತ್ಯ. ಇದನ್ನು ಕೇಂದ್ರ, ರಾಜ್ಯ ಸರ್ಕಾರಗಳು ಕೂಡ ಅರ್ಥಮಾಡಿಕೊಂಡಿವೆ. ಹಾಗಾಗಿಯೇ, ಮಹಿಳಾ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಹಲವು ಕಾನೂನು, ನಿಯಮಗಳು ರೂಪುಗೊಂಡಿವೆ. ದೆಹಲಿಯ ನಿರ್ಭಯಾ ಪ್ರಕರಣವಂತೂ ರಾಷ್ಟ್ರಾದ್ಯಂತ ಜಾಗೃತಿಯ ಆಂದೋಲನವನ್ನೇ ಸೃಷ್ಟಿಸಿತು ಮತ್ತು ಕಾನೂನನ್ನು ಮತ್ತಷ್ಟು ಬಿಗಿಯಾಗಿಸಲು ಕಾರಣವಾಯಿತು. ಇಂಥ ಕ್ರಮಗಳು ಮಹಿಳೆಯರಲ್ಲಿ ಭರವಸೆ ಮೂಡಿಸಲು ನೆರವಾದವು ಎಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕಾನೂನು, ನಿಯಮವಾಗಲಿ ಅದನ್ನು ಸೂಕ್ತ, ಸಮರ್ಪಕವಾಗಿ ಅನುಷ್ಠಾನಕ್ಕೆ ತಂದರೆ, ಅದರಿಂದ ಸಮಾಜಕ್ಕೆ ಒಳಿತಾಗುವ ಜತೆಗೆ, ಸಮಸ್ಯೆಗಳಿಗೆ ಪರಿಣಾಮಕಾರಿ ಮದ್ದೆರೆಯಲು ಸಾಧ್ಯ. ಆದರೆ, ಒಳ್ಳೆಯ ಉದ್ದೇಶದಿಂದ ರೂಪಿತವಾದ ಕಾನೂನುಗಳು ಅಥವಾ ವ್ಯವಸ್ಥೆಯ ಇತರ ನಿಯಮಗಳನ್ನು ದುರುಪಯೋಗ ಪಡಿಸಿಕೊಂಡಲ್ಲಿ, ಅದರಿಂದ ಸಮುದಾಯಕ್ಕೆ ದೊಡ್ಡ ಹಾನಿ ಒದಗಬಲ್ಲದು ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು.
ಎಷ್ಟೋ ಬಾರಿ ವೈಯಕ್ತಿಕ ದ್ವೇಷ, ಹಗೆತನ, ವೈಮನಸ್ಸುಗಳ ಭರದಲ್ಲಿ ಸುಖಾಸುಮ್ಮನೆ ಪ್ರಕರಣಗಳನ್ನು ದಾಖಲಿಸುವುದು, ಮಹಿಳೆಯರು ಕೌಟುಂಬಿಕ ದೌರ್ಜನ್ಯದ ಆರೋಪ ಮಾಡುವಂಥ ಘಟನೆಗಳು ನಡೆಯುತ್ತವೆ. ಪ್ರಕರಣವೊಂದರಲ್ಲಿ ಪತಿಯ ಘನತೆಗೆ ಧಕ್ಕೆ ತಂದಿದ್ದ ಮಹಿಳೆಯೊಬ್ಬರಿಗೆ ಹೈಕೋರ್ಟ್ -ಠಿ; 15 ಸಾವಿರ ದಂಡ ವಿಧಿಸಿದೆ. ಅಲ್ಲದೆ, ಕೌಟುಂಬಿಕ ಪ್ರಕರಣಗಳಲ್ಲಿ ಮಾಡಲಾಗುವ ಆಧಾರರಹಿತ ಆರೋಪಗಳೂ ಕ್ರಿಮಿನಲ್ ಮಾನಹಾನಿ ಎನಿಸಿಕೊಳ್ಳಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಆಧಾರರಹಿತ ಆರೋಪ ಮಾಡುವವರಿಗೆ ಎಚ್ಚರಿಕೆ ಗಂಟೆಯನ್ನು ಬಾರಿಸಿದೆ. ಪತಿ ಕುಡಿದು ಬಂದು ಹಲ್ಲೆ ಮಾಡುತ್ತಾರೆ, ಅವರಿಗೆ ಅನೈತಿಕ ಸಂಬಂಧ ಇದೆ ಎಂಬೆಲ್ಲ ಆರೋಪ ಮಾಡಿದ್ದ ಮಹಿಳೆ, ಅದಕ್ಕೆ ಸಂಬಂಧಿಸಿ ಯಾವುದೇ ಸಾಕ್ಷ್ಯಾಧಾರ ನೀಡಲು ವಿಫಲರಾದರು.
ಇದು ಒಂದು ಪ್ರಕರಣದ ನಿದರ್ಶನವಷ್ಟೇ ಅಲ್ಲ. ಸಂಸಾರದ ಸಮತೋಲನದಲ್ಲಿ ಸ್ವಲ್ಪ ಏರುಪೇರಾದರೂ ಅದನ್ನು ತಾಳ್ಮೆ ಮತ್ತು ಪರಸ್ಪರ ಸಂವಾದದಿಂದ ಬಗೆಹರಿಸಿಕೊಳ್ಳುವುದು ಕಷ್ಟವೇನಲ್ಲ. ಆ ನಿಟ್ಟಿನಲ್ಲಿ ಪತಿ, ಪತ್ನಿ ಇಬ್ಬರೂ ಪ್ರಯತ್ನಿಸಬೇಕು. ಆದರೆ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳದ ವಿಷಯಗಳಲ್ಲಿ ಎಷ್ಟೋ ಮಹಿಳೆಯರು ಮಿಥ್ಯಾರೋಪ ಹೊರಿಸಿ, ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸುತ್ತಾರೆ. ಅಲ್ಲದೆ, ತಪು್ಪ ಮಾಡದಿದ್ದರೂ ಎದುರಿನವರ ಮಾನಹಾನಿಗೆ ಕಾರಣರಾಗುತ್ತಾರೆ. ಇಂಥ ಮಾನಸಿಕತೆ ತುಂಬ ಅಪಾಯಕಾರಿ. ನಿಜಕ್ಕೂ ದೌರ್ಜನ್ಯ ಅಥವಾ ಕಿರುಕುಳ ಎದುರಿಸುತ್ತಿರುವವರು ನ್ಯಾಯಕ್ಕಾಗಿ ಕೋರ್ಟ್ ಕಟಕಟೆ ಹತ್ತಿದರೆ ತಪ್ಪಲ್ಲ. ಆದರೆ, ಮಹಿಳಾಪರ ಕಾನೂನುಗಳಿವೆ, ಇದನ್ನೇ ಇರಿಸಿಕೊಂಡು ಬುದ್ಧಿ ಕಲಿಸುತ್ತೇನೆ, ದ್ವೇಷ ಸಾಧಿಸುತ್ತೇನೆ ಎಂಬ ಮನೋಭಾವವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಾಗುವುದಿಲ್ಲ. ಯಾರೋ ಕೆಲವರು ಹೀಗೆ ಕಾನೂನಿನ ದುರುಪಯೋಗಕ್ಕೆ ಯತ್ನಿಸಿದರೆ, ಜನರಿಗೆ ಕಾನೂನಿನ ಮೇಲಿನ ನಂಬಿಕೆಯೇ ನಶಿಸಬಹುದು ಅಥವಾ ಕಾನೂನು ರೂಪಿಸಿದ ಮೂಲೋದ್ದೇಶವೇ ಮರೆಯಾಗಬಹುದು. ಹಾಗಾಗದಂತೆ ತಡೆಯುವ ಪ್ರಜ್ಞಾವಂತಿಕೆ ಮತ್ತು ನೈತಿಕತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ.