

ದೇಶದ ವಿವಿಧ ರಂಗಗಳ ಅಭಿವೃದ್ಧಿಯ ಕುರಿತು ತಾಜಾಚಿಂತನೆ ಮತ್ತು ಹೊಸ ಸಾಧ್ಯತೆಗಳ ಕುರಿತು ವಿಚಾರ ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡುವ ಮಹತ್ವದ ವಿಚಾರವನ್ನು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಆತ್ಮನಿರ್ಭರ ಭಾರತದ ಆಶಯಕ್ಕೆ ಮತ್ತಷ್ಟು ಒತ್ತು ನೀಡಿದ್ದಾರೆ. ‘ಆಟಿಕೆ ಉದ್ಯಮದಲ್ಲಿ ಭಾರತವು ಮುಂಚೂಣಿಗೆ ಬರಬೇಕಾದ ಅಗತ್ಯವಿದೆ’ ಎಂದಿರುವ ಪ್ರಧಾನಿ, ಇದಕ್ಕೆ ರಾಜ್ಯದ ಚನ್ನಪಟ್ಟಣ ತಾಲೂಕಿನ ಗೊಂಬೆ ಉದ್ಯಮದ ಉದಾಹರಣೆ ನೀಡಿದ್ದಾರೆ.
‘ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವ ಶಕ್ತಿ ಭಾರತಕ್ಕಿದೆ. ಮುಂದೊಂದು ದಿನ ಜಾಗತಿಕವಾಗಿ ಆಟಿಕೆ ಪೂರೈಸುವ ತಾಣ ಆಗುವ ಅವಕಾಶವೂ ಇದೆ’ ಎನ್ನುವ ಮೂಲಕ ಚೀನಾದಿಂದ ಆಟಿಕೆ ಆಮದನ್ನು ಕಡಿಮೆಗೊಳಿಸುವ ಪರೋಕ್ಷ ಸೂಚನೆ ನೀಡಿದ್ದಾರೆ. ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿ ಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯವಾಗಿ ಆಟಿಕೆಗಳನ್ನು ತಯಾರಿಸಲು ನವೋದ್ಯಮಗಳನ್ನು ಆರಂಭಿಸಬೇಕೆಂಬ ಅವರ ಕರೆ ಸಕಾಲಿಕವೂ ಆಗಿದೆ. ಕರೊನಾದಿಂದ ನೆಲ ಕಚ್ಚಿರುವ ಆರ್ಥಿಕತೆಯ ಹೊತ್ತಲ್ಲಿ ಉದ್ಯೋಗಸೃಷ್ಟಿಗೆ ಇದು ನೆರವಾಗಲಿದೆ. ಜಾಗತಿಕ ಮಟ್ಟದಲ್ಲಿ ಆಟಿಕೆಗಳ ಉದ್ಯಮದಲ್ಲಿ 7 ಲಕ್ಷ ಕೋಟಿ ರೂ. ವ್ಯವಹಾರ ನಡೆಯುತ್ತಿದ್ದು, ಇದರಲ್ಲಿ ಭಾರತದ ಪಾಲು ತುಂಬ ಕಡಿಮೆ ಇದೆ ಎಂಬ ವಾಸ್ತವದತ್ತ ಗಮನ ಸೆಳೆದಿರುವ ಪ್ರಧಾನಿ, ಈ ಪಾಲನ್ನು ಹೆಚ್ಚಿಸಲು ಸಂಕಲ್ಪ ಮಾಡಬೇಕಿದೆ ಅಲ್ಲದೆ ಆಟಿಕೆ ಉದ್ಯಮಕ್ಕೆ ಹೊಸ ರೂಪ ಕೊಡಲು ಕೇಂದ್ರ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದಿದ್ದಾರೆ. ಪ್ರಧಾನಿಗಳ ಈ ಕರೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಕ್ಲಸ್ಟರ್ ನಿರ್ವಿುಸುವ ಘೋಷಣೆಯನ್ನು ಟ್ವೀಟ್ ಮೂಲಕ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಈ ಟ್ವೀಟ್ನ್ನು ಶ್ಲಾಘಿಸಿ, ಭಾರತವನ್ನು ಆಟಿಕೆ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಕರೆಗೆ ರಾಜ್ಯಗಳು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿರುವುದು, ಸಂತೋಷ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಂದ ಮತ್ತೊಮ್ಮೆ ಟ್ರೋಲ್ ಆದ ಸಿಎಸ್‌ಕೆ ಆಲ್ರೌಂಡರ್ ರವೀಂದ್ರ ಜಡೇಜಾ..!
ಕೊಪ್ಪಳದ 400 ಎಕರೆ ಜಾಗದಲ್ಲಿ ಆಟಿಕೆ ನಿರ್ಮಾಣ ಕ್ಲಸ್ಟರ್ ನಿರ್ವಿುಸಲು ಖಾಸಗಿ ಸಂಸ್ಥೆ ಈ ಯೋಜನೆಗೆ 5 ಸಾವಿರ ಕೋಟಿ ರೂ.ವಿನಿಯೋಗಿಸಲು ಮುಂದಾಗಿದೆ. ಇದರಿಂದ 40 ಸಾವಿರ ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ. ದೇಶ-ವಿದೇಶಗಳ ಆಟಿಕೆ ತಯಾರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಸ್ವಾವಲಂಬಿ ಭಾರತ ನಿರ್ಮಾಣ ಯೋಜನೆಗೆ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭಾರತ ಈಗಲೂ ಆಟಿಕೆಗಳನ್ನು ದೊಡ್ಡಪ್ರಮಾಣದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಆಟಿಕೆ ತಯಾರಿಕೆಯ ರಂಗದಲ್ಲಿ ಭಾರತದಲ್ಲೇ ಹೇರಳ ಅವಕಾಶಗಳಿರುವಾಗ, ಅದಕ್ಕೆ ಉತ್ತೇಜನ ಸಿಗಬೇಕಾದ ವಾತಾವರಣ ರೂಪುಗೊಳ್ಳಬೇಕಿದೆ. ಅಲ್ಲದೆ, ಈ ಕ್ಷೇತ್ರದಂತೆಯೇ ಇತರ ರಂಗಗಳು, ವಲಯಗಳು ಕೂಡ ಸ್ವಾವಲಂಬಿ ಮತ್ತು ಸಶಕ್ತವಾಗಲು ಸೂಕ್ತ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕಿದೆ. ಆಗಲೇ, ನಿಜಾರ್ಥದಲ್ಲಿ ದೇಶ ಸ್ವಾವಲಂಬನೆಯ ಮಾರ್ಗದಲ್ಲಿ ಸಾಗಲು ಸಾಧ್ಯ.