

ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಯಾವುದೇ ವೈಯಕ್ತಿಕ ಕಾನೂನು, ಸಂಪ್ರದಾಯಗಳ ಕಾರಣಕ್ಕೆ ಬಾಲ್ಯವಿವಾಹ ನಿಷೇಧ ಕಾಯಿದೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ವೈಯಕ್ತಿಕ ಕಾನೂನುಗಳ ಮೇಲೂ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಅನ್ವಯ ಆಗುತ್ತದೆಯೇ ಎಂಬ ವಿಷಯ ಸಂಸತ್ತಿನಲ್ಲಿ ಚರ್ಚೆ ಆಗಬೇಕಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಬಾಲ್ಯವಿವಾಹದ ಮೂಲ ಕಾರಣಗಳಾದ ಬಡತನ, ಲಿಂಗ ಅಸಮಾನತೆ, ಶಿಕ್ಷಣದ ಕೊರತೆಯನ್ನು ಪರಿಹರಿಸುವತ್ತ ಗಮನಹರಿಸುವುದರ ಜೊತೆಗೆ ವಿವಿಧ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬಾಲ್ಯವಿವಾಹ ತಡೆಗಟ್ಟುವ ತಂತ್ರಗಳನ್ನು ರೂಪಿಸಬೇಕು. ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್ ಹೇಳಿದೆ. ಈ ತೀರ್ಪು ಬಾಲ್ಯವಿವಾಹದ ವಿಷಯದಲ್ಲಿ ದೂರಗಾಮಿ ಪರಿಣಾಮಗಳನ್ನು ಒಳಗೊಂಡಿದ್ದು, ಸ್ವಾಗತಾರ್ಹವಾಗಿದೆ.
ಬಾಲ್ಯವಿವಾಹ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕಿದೆ. ವೈಯಕ್ತಿಕ ಕಾನೂನಿನ ನೆಪದಲ್ಲಿ ಮಕ್ಕಳ ಹಕ್ಕು, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿರುವುದು ಬಾಂಗ್ಲಾದೇಶದಲ್ಲಿ. ದುರದೃಷ್ಟವಶಾತ್ ಆನಂತರದ ಸ್ಥಾನ ಭಾರತಕ್ಕೆ ಸಿಕ್ಕಿದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಉತ್ತರಭಾರತದಲ್ಲಿ ಬಾಲ್ಯ ವಿವಾಹಗಳು ಕಾನೂನಿನ ಭಯವಿಲ್ಲದೆ ನಡೆಯುತ್ತಿರುವುದನ್ನು ಯುನಿಸೆಫ್ ವರದಿ ಉಲ್ಲೇಖಿಸಿದೆ. ಭಾರತದಲ್ಲಿ ಶೇಕಡ 42ರಷ್ಟು ಯುವತಿಯರ ವಿವಾಹ 18 ವರ್ಷ ತುಂಬುವ ಮುಂಚೆ ನಡೆಯುತ್ತಿದೆ. ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಂತೂ ಶೇಕಡ 80ರಷ್ಟು ವಿವಾಹಗಳು 18 ವರ್ಷ ತುಂಬುವ ಮೊದಲೇ ನಡೆಯುತ್ತಿವೆ. ರಾಜಸ್ಥಾನದಲ್ಲಿ ಬಾಲಕರೂ ಬಾಲ್ಯವಿವಾಹದ ಪಾಶಕ್ಕೆ ಸಿಲುಕಿದ್ದಾರೆ. 18 ವರ್ಷದೊಳಗಿನ ಯುವತಿಯರ ವಿವಾಹ ಪ್ರಕರಣ ಹೆಚ್ಚಿರುವುದರಿಂದ ಹೆರಿಗೆ ಸಂದರ್ಭದಲ್ಲಿನ ಸಾವಿನ ಪ್ರಮಾಣ ಹೆಚ್ಚಿದೆ. 15-19 ವರ್ಷದ ಯುವತಿಯರು ಗರ್ಭಿಣಿಯರಾಗುತ್ತಿದ್ದು, ಮರಣಪ್ರಮಾಣವು ಈ ವಯೋಮಾನದವರಲ್ಲಿ ಹೆಚ್ಚಿದೆ.
ಬಾಲ್ಯವಿವಾಹ ತಡೆ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದು. ಮಧ್ಯಪ್ರದೇಶದಲ್ಲಿ ಬಾಲ್ಯವಿವಾಹ ತಡೆಯಲು ಸರ್ಕಾರ ಮಕ್ಕಳ ಸೇನೆಯನ್ನೇ ರೂಪಿಸಿದೆ. ಪ್ರೌಢಶಾಲೆಯಲ್ಲಿ ಓದುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ನಿಟ್ಟಿನಲ್ಲಿ ಸರ್ಕಾರದಿಂದ ತರಬೇತಿ ನೀಡಲಾಗುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದರೆ ‘1098’ ಸಹಾಯವಾಣಿ ಸಂಖ್ಯೆಗೆ ಆ ಮಾಹಿತಿಯನ್ನು ತಿಳಿಸುವಂತೆ ಕೋರಲಾಗಿದೆ. ಮಾಹಿತಿ ನೀಡುವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುತ್ತದೆ. ಉಳಿದ ರಾಜ್ಯಗಳಲ್ಲೂ ಬಾಲ್ಯವಿವಾಹ ತಡೆಯುವ ಪ್ರಯತ್ನಗಳು ಹೆಚ್ಚಬೇಕು.