ಮರಳಿ ಬನ್ನಿ ಶಾಲೆಗೆ; ಶೈಕ್ಷಣಿಕ ರಂಗದಲ್ಲಿ ಮರಳಿದ ಉತ್ಸಾಹ...

Editorial
Published on

ಕರೊನಾ ಸಂಕಟ ಎಲ್ಲ ವಲಯಗಳಿಗೂ ಕಾಡುತ್ತಿರುವುದು ನಿಜ. ಆದರೆ, ಹೆಚ್ಚು ತೊಂದರೆಗೆ ಒಳಗಾಗಿದ್ದು ಶಾಲಾಮಕ್ಕಳು, ಅವರ ಪಾಲಕರು ಮತ್ತು ಶಿಕ್ಷಕರು. ಕಳೆದ 10 ತಿಂಗಳುಗಳಿಂದ ಮಕ್ಕಳು ಮನೆಯಲ್ಲೇ ಇದ್ದಾರೆ. ಕಲಿಕೆ ಸ್ತಬ್ಧಗೊಂಡಿದೆ. ಆನ್​ಲೈನ್ ಪಾಠಕ್ಕಿಂತ ನೇರ ಪಾಠವೇ ಉತ್ತಮ ಎಂದು ಬಹುತೇಕರು ಹೇಳುತ್ತಿದ್ದಾರೆ. ದಿನಚರಿಯ ವ್ಯತ್ಯಾಸ ಮತ್ತು ಒಂಟಿತನದಿಂದ ಮಕ್ಕಳು ಖಿನ್ನತೆಗೆ ಜಾರಿದ, ಅನಾರೋಗ್ಯಕ್ಕೆ ತುತ್ತಾದ ಘಟನೆಗಳು ನಡೆದವು. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ತೆರಳುವ ಮನೆಗಳಲ್ಲಂತೂ ಮಕ್ಕಳು ದಿಕ್ಕುಕಾಣದಂತೆ ಆದರು. ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯ. ಶಾಲೆ ಇಲ್ಲದೆ ಕೆಲವು ಕಡೆ ಮಕ್ಕಳು ಅಡ್ಡದಾರಿ ಹಿಡಿದರೆ, ಮತ್ತೆ ಹಲವೆಡೆ ಪಾಲಕರೇ ಕೂಲಿಗೆ ಕಳುಹಿಸಿದರು. ಲಾಕ್​ಡೌನ್ ಮುಗಿದು ಎಲ್ಲ ರಂಗಗಳು ಸಾಮಾನ್ಯ ಸ್ಥಿತಿಗೆ ಮರಳಿರುವಾಗ ಶಾಲೆಗಳ ಆರಂಭ ಯಾವಾಗ ಎಂಬ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಿತ್ತು. ಶಿಕ್ಷಣ ಸಚಿವ ಸುರೇಶಕುಮಾರ್ ಇತ್ತೀಚೆಗೆ ಪ್ರಯಾಣದಲ್ಲಿದ್ದಾಗ ವ್ಯಕ್ತಿಯೊಬ್ಬರು ಹೆದ್ದಾರಿಯಲ್ಲೇ ಅವರನ್ನು ಭೇಟಿ ಆಗಿ, ‘ಶಾಲೆ ಯಾವಾಗ ಆರಂಭಿಸುತ್ತೀರಿ?’ ಎಂದು ಪ್ರಶ್ನಿಸಿದ್ದು, ಶಾಲೆ ಪುನರಾರಂಭದ ಅಗತ್ಯವನ್ನು ಬಿಂಬಿಸಿತ್ತು.

ಕೊನೆಗೂ, ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 1ರಿಂದ ಶಾಲೆಗಳು ತೆರೆಯಲಿದ್ದು, 9 ರಿಂದ 12ನೇ ತರಗತಿಗಳಿಗೆ ಪಾಠ ಆರಂಭವಾಗಲಿದೆ. ಇದಕ್ಕೆ ಬೇಕಾದ ಪೂರಕ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾಗಮ ದಿನ ಬಿಟ್ಟು ದಿನ ಮುಂದುವರಿಯಲಿದೆ. ಫೆಬ್ರವರಿ 2ನೇ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಉಳಿದ ತರಗತಿಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ನೇರ ಮತ್ತು ಆನ್​ಲೈನ್ ತರಗತಿಗಳೆರಡಕ್ಕೂ ಅವಕಾಶ ಕಲ್ಪಿಸಲಾಗಿದ್ದು ಹಾಜರಿ ಕಡ್ಡಾಯವಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕರೊನಾ ಪ್ರಕರಣಗಳು ರಾಜ್ಯದಲ್ಲಿ ಗಣನೀಯವಾಗಿ ತಗ್ಗಿರುವುದರಿಂದ ಶಾಲೆ ಪುನರಾರಂಭದ ನಿರ್ಧಾರ ಸೂಕ್ತವಾಗಿಯೇ ಇದೆ. ಇದರಿಂದ ಮಕ್ಕಳು ಉತ್ಸಾಹದಿಂದ ಮತ್ತೆ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಇತರ ರಾಜ್ಯಗಳಲ್ಲೂ ಹಂತ-ಹಂತವಾಗಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಸಿನಿಮಾ ಹಾಲ್ ಮತ್ತು ಈಜುಕೊಳಗಳು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

ಜನವರಿ 1ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳು ದಿನಬಿಟ್ಟು ದಿನ ಆರಂಭಿಸಿದ ಬಳಿಕ ದ್ವಿತೀಯ ಪಿಯುಗೆ ಶೇಕಡ 75, 10ನೇ ತರಗತಿಗೆ ಶೇಕಡ 70 ಸರಾಸರಿ ಹಾಜರಿ ಇರುವುದು, ಕಲಿಕೆಯಲ್ಲಿನ ಆಸಕ್ತಿ ಹೆಚ್ಚಿರುವುದಕ್ಕೆ ಸಾಕ್ಷಿ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುವುದು ಶಿಕ್ಷಣ ಇಲಾಖೆ ಮುಂದಿರುವ ದೊಡ್ಡ ಸವಾಲಾಗಿದೆ. ಹಾಸ್ಟೆಲ್ ಅಥವಾ ದುಡಿಯಲು ಹೋದ ಊರಿನಲ್ಲಿರುವ ಶಾಲೆಯಲ್ಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ನಿರ್ಧಾರ ಕೈಗೊಂಡಿರುವುದು ಸೂಕ್ತವಾಗಿದೆ.

ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ಕರೊನಾ ಬಗ್ಗೆ ಭೀತಿ ಪೂರ್ಣಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಹಾಗಾಗಿ, ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಬೇಕು. ಶಿಕ್ಷಕರು ಮಕ್ಕಳಿಗೆ ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಸಿ, ಕಲಿಕೆಯತ್ತ ಆಸಕ್ತಿ ತೋರುವಂತೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net