ಸಂಪಾದಕೀಯ| ಸಮರ ಕೊನೆಗೊಳ್ಳಲಿ

Russia Ukraine War
Published on

ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಶುರುವಾಗಿ ಒಂದು ಸಾವಿರ ದಿನಗಳು ದಾಟಿವೆ. ಎರಡೂ ಕಡೆ ಅಪಾರ ಸಾವುನೋವು ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅದರಲ್ಲೂ ವಿಶೇಷವಾಗಿ ಯೂಕ್ರೇನಿನಲ್ಲಿ ಲಕ್ಷಾಂತರ ಜನರು ಆಂತರಿಕವಾಗಿ ನಿರ್ವಸಿತರಾಗಿದ್ದಾರೆ ಹಾಗೂ ಸಾವಿರಾರು ಜನರು ವಿದೇಶಗಳಿಗೆ ತೆರಳಿದ್ದಾರೆ. 2022ರ ಫೆಬ್ರವರಿ 22ರಂದು ಯೂಕ್ರೇನ್ ಮೇಲೆ ಸಮರ ಸಾರುವಾಗ ಇದು ಕೇವಲ ಕೆಲ ದಿನಗಳ ಸಮರ ಎಂದು ರಷ್ಯಾ ಭಾವಿಸಿದ್ದರೆ ಅದು ಸಹಜ. ಏಕೆಂದರೆ, ರಷ್ಯಾದ ಸೇನಾ ಶಕ್ತಿಗೆ ಹೋಲಿಸಿದರೆ ಯೂಕ್ರೇನ್ ನಗಣ್ಯ. ಆದರೆ ಅಮೆರಿಕ ಮುಂದಾಳ್ತನದಲ್ಲಿ ಪಶ್ಚಿಮದ ದೇಶಗಳು ಯೂಕ್ರೇನಿಗೆ ಸೇನಾ ನೆರವು ನೀಡುವ ಮೂಲಕ ಬೆಂಬಲ ನೀಡಿದ್ದು ರಷ್ಯಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಇಷ್ಟೇ ಅಲ್ಲ, ರಷ್ಯಾದ ಮೇಲೆ ಹತ್ತುಹಲವು ನಿರ್ಬಂಧಗಳನ್ನೂ ಹೇರಲಾಯಿತು. ಅತ್ತ ಯೂಕ್ರೇನ್ ಸಹ ಆಂತರಿಕವಾಗಿ ಬಳಲಿ ಸುಸ್ತಾಗಿದೆ. ಇಷ್ಟಾದರೂ ಯುದ್ಧ ಸ್ಥಗಿತದ ಲಕ್ಷಣ ಕಾಣಿಸುತ್ತಿಲ್ಲ. ಬದಲಿಗೆ, ಮತ್ತೊಂದು ಮಜಲಿನತ್ತ ಹೊರಳುವಂತೆ ಗೋಚರಿಸುತ್ತಿದೆ. ಅಮೆರಿಕ ನೀಡುವ ದೂರಗಾಮಿ ಕ್ಷಿಪಣಿಗಳನ್ನು ರಷ್ಯಾದ ಒಳಪ್ರದೇಶಗಳಲ್ಲಿ ಬಳಸುವುದಕ್ಕೆ ಅನುಮತಿ ನೀಡುವ ಮೂಲಕ ಅಮೆರಿಕದ ಬೈಡೆನ್ ಆಡಳಿತ ಅಚ್ಚರಿಯ ನಿಲುವು ಪ್ರದರ್ಶಿಸಿತು. ಅಧ್ಯಕ್ಷ ಬೈಡೆನ್ ಯಾಕೆ ಹೀಗೆ ಮಾಡಿದರು ಎಂಬುದು ತರ್ಕಕ್ಕೆ ನಿಲುಕದ ಸಂಗತಿಯಾದರೂ ಅದರ ಪರಿಣಾಮ ಮಾತ್ರ ಗೊತ್ತಿರುವಂಥದೇ ಆಗಿತ್ತು. ಆ ಪ್ರಕಾರವೇ, ಯೂಕ್ರೇನ್ ಸೇನೆಯು ಅಮೆರಿಕ ಕ್ಷಿಪಣಿಗಳನ್ನು ಪ್ರಯೋಗಿಸಿತು. ಇದರಿಂದ ಸಹಜವಾಗಿ ಕೆರಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು, ಅಣ್ವಸ್ತ್ರ ಬಳಕೆ ಕುರಿತಾದ ರಷ್ಯಾದ ನಿಯಮವನ್ನು ಪರಿಷ್ಕರಿಸಿದರು. ಆ ಪ್ರಕಾರ, ಅಣ್ವಸ್ತ್ರರಹಿತ ದೇಶವೊಂದು ಅಣ್ವಸ್ತ್ರ ಹೊಂದಿದ ದೇಶದ ಬೆಂಬಲವನ್ನು ಪಡೆದುಕೊಂಡಲ್ಲಿ ಅದನ್ನು ರಷ್ಯಾದ ಮೇಲಿನ ಜಂಟಿ ದಾಳಿ ಎಂದು ಪರಿಗಣಿಸಲಾಗುತ್ತದೆ. ಇದರ ಅರ್ಥ ಸ್ಪಷ್ಟ. ಅಣ್ವಸ್ತ್ರ ಬಳಸಲು ದಾರಿಯನ್ನು ಪ್ರಶಸ್ತ ಮಾಡಿಕೊಂಡಂತೆ. ರಷ್ಯಾವು ಯೂಕ್ರೇನ್ ಮೇಲೆ ಅಣ್ವಸ್ತ್ರ ಬಳಸುತ್ತದೆಯೋ ಇಲ್ಲವೋ, ಆದರೆ ಈ ನಡೆ ಜಾಗತಿಕವಾಗಿ ಆತಂಕವನ್ನಂತೂ ಮೂಡಿಸಿದೆ.

ಈ ಹೊತ್ತಿನಲ್ಲಿ, ಭಾರತ ಹಾಗೂ ಅಮೆರಿಕ ಪಾತ್ರ ಕುತೂಹಲಕರ. ಈ ವಿಷಯದಲ್ಲಿ ರಾಜತಾಂತ್ರಿಕವಾಗಿ ಜಾಣನಡೆ ಅನುಸರಿಸಿದ ಭಾರತ, ಯುದ್ಧದಿಂದ ಯಾರಿಗೂ ಲಾಭವಿಲ್ಲ ಎಂಬ ಕಿವಿಮಾತನ್ನು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಶಾಂತಿಗೆ ಒತ್ತುನೀಡುತ್ತದೆ ಎಂದು ಪುತಿನ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿಯೂ ಹೇಳಿದ್ದಾರೆ. ತಾನು ಅಧಿಕಾರಕ್ಕೆ ಬಂದಲ್ಲಿ, 24 ತಾಸಿನಲ್ಲಿ ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲುಗಡೆಗೆ ತರುವುದಾಗಿ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ಹೇಳುತ್ತ ಬಂದಿದ್ದರು. ಅದು ಎಷ್ಟರಮಟ್ಟಿಗೆ ಸಾಧ್ಯ ಎಂಬುದು ಪ್ರಶ್ನಾರ್ಥಕವಾದರೂ, ಕದನ ವಿರಾಮ ಜಾರಿಗೆ ಅವರು ಯತ್ನಿಸಬಹುದೆಂಬ ನಿರೀಕ್ಷೆಯಂತೂ ವ್ಯಕ್ತವಾಗಿದೆ. ಇವತ್ತಿನ ಜಾಗತಿಕ ವಾತಾವರಣದಲ್ಲಿ ಯುದ್ಧವೆಂಬುದು ಬರೀ ಆ ಎರಡು ದೇಶಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ, ಆರ್ಥಿಕವಾಗಿ, ಸಾಮಾಜಿಕವಾಗಿ ಬೇರೆ ಬೇರೆ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಸಮರ ಕೊನೆಯಾಗುವುದು ಎಲ್ಲರಿಗೂ ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net