ಸಂಪಾದಕೀಯ: ಜಿಲ್ಲಾಡಳಿತದ ಬಳಿ ಇರುವ ತುರ್ತು ನಿಧಿಯ ಸದ್ಬಳಕೆ ಈಗ ಆಗಲಿ...

Editoria 13 Oct 2020
Published on

ಮಳೆಯ ಅಬ್ಬರಕ್ಕೆ ರಾಜ್ಯದ ಬಹುತೇಕ ಭಾಗಗಳು ಅದರಲ್ಲೂ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಬೆಳೆದು ನಿಂತ ಬೆಳೆಗಳೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಚಿಂತಾಕ್ರಾಂತರಾಗಿದ್ದಾರೆ. ಜುಲೈ-ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯ ಅಬ್ಬರದಿಂದ ರೈತರು ನಿಧಾನವಾಗಿ ಚೇತರಿಸಿಕೊಂಡು ಮತ್ತೊಮ್ಮೆ ಆಶಾವಾದದೊಂದಿಗೆ ಕೃಷಿ ಚಟುವಟಿಕೆಗೆ ಮರಳಿದ್ದರು. ಇನ್ನೇನು ಬೆಳೆಗಳು ಕೈಗೆ ಬರುತ್ತವೆ ಎಂಬ ಸ್ಥಿತಿಯಲ್ಲಿ ವಾಯುಭಾರ ಕುಸಿತದಿಂದ ಮತ್ತೊಮ್ಮೆ ಸುರಿದ ಮಳೆ ಭಾರಿ ಪ್ರಮಾಣದ ಹಾನಿಯನ್ನು ತಂದೊಡ್ಡಿದೆ. ಮೂರು ದಿನದ ವರ್ಷಧಾರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೂರಾರು ಎಕರೆ ಬೆಳೆ ನಾಶವಾಗಿದೆ, ನೂರಾರು ಮನೆಗಳ ಗೋಡೆಗಳು ಬಿರುಕು ಬಿಟ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿ 6 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಸಂಬಂಧಪಟ್ಟ ಜಿಲ್ಲಾಡಳಿತಗಳು ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

‘ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಮಾಡಿ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದು, ಸೂಕ್ತವಾಗಿಯೇ ಇದೆ. ಇಂಥ ಸ್ಥಿತಿಯಲ್ಲಿ ರೈತರಿಗೆ ಆತ್ಮಸ್ಥೈರ್ಯದ ಜತೆಗೆ, ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆಯನ್ನೂ ತುಂಬಬೇಕಿದೆ. ರಾಜ್ಯದ ಕೆಲವೆಡೆ ಉಪಚುನಾವಣೆ ನಡೆಯುತ್ತಿದ್ದು, ರಾಜಕಾರಣಿಗಳು ಅದರ ಭರಾಟೆಯಲ್ಲಿ ಮುಳುಗಿದ್ದಾರೆ. ಆದರೆ, ಜನರ ಬದುಕನ್ನು ರಕ್ಷಿಸುವ, ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸುವ ಅಗತ್ಯವಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಆಯಾ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅರ್ಥಮಾಡಿಕೊಳ್ಳಬೇಕಿದೆ. ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಎಲ್ಲೆಲ್ಲಿ ತಕ್ಷಣ ನೆರವಿನ ಅಗತ್ಯವಿದೆ, ಎಲ್ಲೆಲ್ಲಿ ಮಾನವೀಯ ಸಂಕಷ್ಟಗಳು ಉದ್ಭವಿಸಿವೆ ಎಂಬುದನ್ನು ಅರಿತುಕೊಂಡು ಸ್ಪಂದಿಸುವ ಕಾರ್ಯ ಆಗಬೇಕಿದೆ. ಜಿಲ್ಲಾಡಳಿತಗಳ ಬಳಿ ಇರುವ ತುರ್ತು ನಿಧಿಯ ಸದ್ಬಳಕೆ ಇಂಥ ಹೊತ್ತಲ್ಲಿ ಆಗಬೇಕು.

ಮಳೆಯ ಅಬ್ಬರ ಇನ್ನೂ ಪೂರ್ಣಪ್ರಮಾಣದಲ್ಲಿ ನಿಂತಿಲ್ಲವಾದ್ದರಿಂದ ಹಾನಿಯ ಪ್ರಮಾಣವನ್ನು ಈಗಲೇ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅಲ್ಲದೆ, ಮತ್ತೆ ಹಲವು ದಿನಗಳ ಕಾಲ ಮಳೆ ಮುಂದುವರಿಯಲಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ‘ಅತಿವೃಷ್ಟಿ ಹಾನಿ ಮತ್ತು ಪರಿಹಾರೋಪಾಯ ಕ್ರಮಗಳ ಬಗ್ಗೆ ವರದಿ ತರಿಸಿಕೊಂಡು ಮೇಲುಸ್ತುವಾರಿ ಮಾಡಬೇಕು’ ಎಂದು ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದಾರೆ. ಅತಿವೃಷ್ಟಿ ತಂದೊಡ್ಡಿರುವ ಸಮಸ್ಯೆಗಳು ಒಂದೆರಡಲ್ಲ. ಕರೊನಾ ವಿರುದ್ಧದ ಹೋರಾಟದ ಜತೆಗೆ ಇದನ್ನೆಲ್ಲ ಪರಿಣಾಮಕಾರಿಯಾಗಿ ನಿಭಾಯಿಸಬೇಕಿದೆ. ಅಧಿಕಾರಶಾಹಿ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ಅಧ್ಯಯನ ತಂಡವು ಕೆಲ ದಿನಗಳ ಹಿಂದೆ ಹಾನಿಯ ಪ್ರಮಾಣವನ್ನು ಸಮೀಕ್ಷಿಸಿದ್ದು, ಅದರ ಆಧಾರದ ಮೇಲೆ ಕೇಂದ್ರ ಅಗತ್ಯ ನೆರವನ್ನು ಘೋಷಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net