More

    Editorial: ದಸರಾ ಸಂಭ್ರಮದೊಂದಿಗೆ ಸುರಕ್ಷತೆಯೂ ಆದ್ಯತೆಯಾಗಲಿ

    ನಾಡಹಬ್ಬ ದಸರಾ ಎಂದರೆ ಜನರಲ್ಲಿ ವಿಶೇಷ ಸಂಭ್ರಮ, ಆನಂದ. ಅದರಲ್ಲೂ ಮೈಸೂರು ದಸರಾದ ಸೊಗಡು, ಸಾಂಸ್ಕೃತಿಕ ಶ್ರೀಮಂತಿಕೆ ಅನನ್ಯ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬರುವುದು ವಾಡಿಕೆ. ಆದರೆ, ಈ ಬಾರಿ ಪರಿಸ್ಥಿತಿ ಎಲ್ಲವೂ ತಿರುವುಮುರುವಾಗಿದೆ. ಕರೊನಾ ಎಲ್ಲ ಹಬ್ಬ, ಉತ್ಸವಗಳನ್ನು ಆಪೋಶನ ತೆಗೆದುಕೊಂಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಇಳಿಕೆ ಆಗುತ್ತಿದ್ದರೂ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅದರಲ್ಲೂ, ಮೈಸೂರು ಕರೊನಾ ಹಾಟ್​ಸ್ಪಾಟ್ ಆಗಿ ಬದಲಾಗಿರುವುದರಿಂದ, ಜನರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಅನಿವಾರ್ಯ ವಾಗಿ ದಸರಾವನ್ನು ಸರಳವಾಗಿ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ನಿಯಮಗಳನ್ನು ರೂಪಿಸಿದೆ. ಆದರೆ, ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಧಕ್ಕೆ ಆಗದಂತೆ ಈ ನಿಯಮಗಳನ್ನು ರೂಪಿಸಲಾಗಿದೆ.

    ಕರೊನಾ ಸೋಂಕಿನ ವಿರುದ್ಧ ಹೋರಾಡಿದ, ಜನರ ಪ್ರಾಣ ರಕ್ಷಿಸಿದ ಸೇನಾನಿಗಳೇ ಈ ಬಾರಿಯ ದಸರಾವನ್ನು ಉದ್ಘಾಟಿಸುತ್ತಿರುವುದು (ಅ.17) ವಿಶೇಷ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಯ ಬಳಿಕ, ಕಾರ್ಯಕ್ರಮಗಳು ಅರಮನೆಗೆ ಸೀಮಿತವಾಗಿ ನಡೆಯಲಿವೆ. ಜಂಬೂಸವಾರಿ ಕಾರ್ಯಕ್ರಮದಲ್ಲಿ 200 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಒಂಬತ್ತು ದಿನವೂ, ದಿನಕ್ಕೊಂದರಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

    20 ಕೋಟಿ ರೂ. ವೆಚ್ಚದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಎಲ್ಲಿಯೂ ಹಣ ದುರ್ಬಳಕೆ ಅಥವಾ ಪೋಲು ಆಗದೆ ಎಲ್ಲವೂ ಪಾರದರ್ಶಕವಾಗಿ ನಡೆಯುವಂತೆ ಸಂಬಂಧಪಟ್ಟವರು ಕಾಳಜಿ ತೋರಬೇಕು. ಕೆಲವೇ ಜನರ ಉಪಸ್ಥಿತಿಗೆ ಅನುಮತಿ ಇರುವುದರಿಂದ ದಸರಾ ಸಪ್ಪೆ ಆಗಲಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಾರಿಯದ್ದು ವಿಭಿನ್ನ ಮತ್ತು ಅನಿವಾರ್ಯ ಸ್ಥಿತಿ. ಜಂಬೂಸವಾರಿಗೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಿದ್ದರಲ್ಲದೆ, 9 ದಿನಗಳ ಕಾಲ ಪ್ರವಾಸಿಗರ ಕಲರವ ಇರುತ್ತಿತ್ತು. ಕರೊನಾ ಅಂತ್ಯಗೊಳ್ಳದೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವುದು ಕಷ್ಟ. ಸೋಂಕು ಪ್ರಸರಣದ ವೇಗ ಇನ್ನಷ್ಟು ತಗ್ಗಿಸಬೇಕಿದೆ. ಹೀಗಿರುವಾಗ ಕೊಂಚ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಾರ್ವಜನಿಕರ ಹಿತಕ್ಕಾಗಿಯೇ ಸರ್ಕಾರ ದಸರಾ ಆಚರಣೆಗೆ ನಿಯಮ, ನಿಬಂಧನೆಗಳನ್ನು ರೂಪಿಸಿದೆ. ಇದನ್ನು ಚಾಚೂ ತಪ್ಪದೆ ಪಾಲಿಸಬೇಕು. ಆ ಮೂಲಕ ಜವಾಬ್ದಾರಿಯುತ ನಡವಳಿಕೆಯನ್ನು ತೋರಬೇಕು. ಬಹಿರಂಗವಾಗಿ ಉತ್ಸವದ ಅದ್ದೂರಿ ಆಚರಣೆಗೆ ತೊಡಕಿದ್ದರೂ, ನಮ್ಮ ನಮ್ಮ ಮನೆಗಳಲ್ಲಿ ಹಬ್ಬ ಆಚರಿಸಲು ಯಾವುದೇ ಅಡ್ಡಿ ಇಲ್ಲ. ಅಷ್ಟಕ್ಕೂ, ದೇವಿ-ದೇವತೆಯರನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸಿ, ಶ್ರದ್ಧೆಯಿಂದ ಪೂಜಿಸುವ, ಆರಾಧಿಸುವ ಸಂಸ್ಕೃತಿಯೇ ನಮ್ಮಲ್ಲಿ ಜನಜನಿತವಾಗಿದೆ. ಹೀಗಿರುವಾಗ, ಮೈಸೂರು ದಸರಾ ಆಚರಣೆಯನ್ನು ಸರಳಗೊಳಿಸಿರುವ ಕ್ರಮವನ್ನು ಈಗಿನ ಅಗತ್ಯ ಎಂದು ಅರ್ಥ ಮಾಡಿಕೊಳ್ಳೋಣ. ಆ ಎಲ್ಲ ಶ್ರೇಷ್ಠ ಸಂಪ್ರದಾಯವನ್ನು ನೆನಪು ಮಾಡಿಕೊಳ್ಳುತ್ತ, ಮನಪೂರ್ವಕ ಪ್ರಾರ್ಥನೆಯನ್ನು ಸಲ್ಲಿಸೋಣ.

    ಅಮೆರಿಕದಲ್ಲಿ ಜಗ್ಗೇಶ್ ಅವ​ರನ್ನು ನೆನಪಿಸಿಕೊಂಡ ನಟಿ ಮೇಘನಾ; ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts