ಸಂಪಾದಕೀಯ | ಮಹತ್ವದ ನಿರ್ಧಾರ - ಸುಳ್ಳು ಸುದ್ದಿ ತಡೆಗೆ ಸಹಕಾರ

online news
Published on

ಕೇಂದ್ರ ಸರ್ಕಾರ ಬುಧವಾರ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ, ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ. ನ್ಯೂಸ್ ವೆಬ್​ಪೋರ್ಟಲ್, ಆನ್​ಲೈನ್ ಸಿನಿಮಾ, ಆಡಿಯೋ-ವಿಶುವಲ್ ಕಾರ್ಯಕ್ರಮಗಳು ಮತ್ತು ಸಮಕಾಲೀನ ಕಂಟೆಂಟ್​ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಯಂತ್ರಣಕ್ಕೆ ಒಳಪಡಿಸಿ, ಆದೇಶ ಹೊರಡಿಸಲಾಗಿದೆ. ಈವರೆಗೆ ನ್ಯೂಸ್ ವೆಬ್​ಪೋರ್ಟಲ್ ಯಾರು ಬೇಕಾದರೂ ತೆರೆದು ತಮಗೆ ಬಂದ ಸುದ್ದಿಗಳನ್ನು ಅಪ್​ಲೋಡ್ ಮಾಡುವ ಅವಕಾಶವಿತ್ತು. ಆದ್ದರಿಂದ ಆನ್​ಲೈನ್ ಸುದ್ದಿ ವೆಬ್​ಸೈಟುಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಕಡಿವಾಣ ಇಲ್ಲದಂತಾಗಿತ್ತು. ಸುಳ್ಳು ಸುದ್ದಿ ಹರಡುವಿಕೆಗೆ ತಡೆ ಹಾಕುವುದು

ಕಷ್ಟಕರವಾಗಿ ಪರಿಣಮಿಸಿತ್ತು. ಇನ್ನೊಂದೆಡೆ, ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಸೆನ್ಸಾರ್ ಇಲ್ಲದ್ದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುವ ಸಂಗತಿಗಳು ಪ್ರಸಾರವಾಗುತ್ತಲೇ ಇವೆ. ಹಿಂಸೆ, ಅಪರಾಧವನ್ನು ವಿಜೃಂಭಿಸುವ, ವಿಕೃತ ಸಂದೇಶಗಳನ್ನು ನೀಡುವ, ವಿಭಜನಕಾರಿ ಮನಸ್ಥಿತಿ ಸೃಷ್ಟಿಸುವ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಾಗುತ್ತಿರುವುದರಿಂದ, ಇವು ಮುಕ್ತವಾಗಿ, ಸುಲಭವಾಗಿ ಎಲ್ಲರ ಕೈಗೆ ಸಿಗುವಂತಾಗಿದೆ. ಅಷ್ಟೇ ಅಲ್ಲ, ಇಂಥ ಸಿನಿಮಾಗಳ ಪ್ರಸಾರ ವಿರೋಧಿಸಿ ಹಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಸೃಜನಶೀಲತೆ, ಮಾಹಿತಿಯ ಹರಿವು, ಅರಿವಿನ ವಿಸ್ತರಣೆಗೆ ವೇದಿಕೆಯಾಗಬೇಕಿದ್ದ ಡಿಜಿಟಲ್ ಮಾಧ್ಯಮ ಈ ರೀತಿ ವಿವೇಚನಾರಹಿತವಾಗಿ ಬಳಕೆ ಆಗುತ್ತಿರುವ ಪರಿಣಾಮ ಸೃಷ್ಟಿ ಆಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ಹಾಗಾಗಿ, ಸೂಕ್ತ ನಿಯಂತ್ರಣ ವ್ಯವಸ್ಥೆಯ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಜನಾಗ್ರಹವೂ ಜೋರಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಡೆಗೂ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಯಂತ್ರಣಕ್ಕೆ ಒಳಪಡಲಿರುವುದರಿಂದ ಇನ್ನಾದರೂ ಡಿಜಿಟಲ್ ವೇದಿಕೆ ರಚನಾತ್ಮಕವಾಗಿ ಬಳಕೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕು. ಜಾಗತೀಕರಣದ ಯುಗದಲ್ಲಿ ಎಲ್ಲವೂ ಬದಲಾಗಿದೆ. ಮಾಹಿತಿಯ ಹರಿವು ಕೂಡ ಇದರಿಂದ ಹೊರತಲ್ಲ. ಜ್ಞಾನ ಪ್ರಸರಣದ ಉದ್ದೇಶದಲ್ಲಿ ಡಿಜಿಟಲ್ ಮಾಧ್ಯಮಗಳು ಅದ್ಭುತವಾಗಿ ಕಾರ್ಯನಿರ್ವಹಿಸಬಲ್ಲವು.

ಆದರೆ, ಮುಕ್ತತೆಯ ಹೆಸರಲ್ಲಿ ಸ್ವನಿಯಂತ್ರಣದ ಚೌಕಟ್ಟನ್ನು ಮೀರಿದಾಗ, ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಾಗಿ ಮಾರ್ಪಟ್ಟಾಗ ಸಮಸ್ಯೆಗಳು ಭೀಕರ ರೂಪ ತಳೆದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗಾಗಬಾರದು. ಆ ನಿಟ್ಟಿನಲ್ಲಿ ನಿಯಂತ್ರಣದ ಒಂದು ವ್ಯವಸ್ಥೆ ರೂಪುಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಇದರಿಂದ ಡಿಜಿಟಲ್ ಮಾಧ್ಯಮದ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿದೆಯೇ, ಎಲ್ಲವೂ ಸರ್ಕಾರದ ನಿರ್ದೇಶನದಂತೆ ನಡೆಯಲಿದೆಯೇ ಎಂಬ ಅನುಮಾನದ ದನಿಯೂ ಸಣ್ಣದಾಗಿ ಕೇಳಿಬರುತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಲಿ ಮತ್ತು ಅವು ಡಿಜಿಟಲ್ ಮಾಧ್ಯಮಕ್ಕೆ ಅಧಿಕೃತತೆ ತಂದುಕೊಂಡಲಿ. ಸುದ್ದಿ ವೆಬ್​ಸೈಟ್​ಗಳು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತ, ನೈಜ ಮಾಹಿತಿಯ ಅಧಿಕೃತ ದನಿಗಳಾಗಲಿ. ಒಟ್ಟಾರೆ, ಮಾಹಿತಿ ಮತ್ತು ತಂತ್ರಜ್ಞಾನ ಜನರ ಜೀವನಕ್ಕೆ ವಿಶ್ವಾಸ ತುಂಬಬೇಕೆ ಹೊರತು, ಅನಗತ್ಯ ಗೊಂದಲ, ವಿವಾದಗಳನ್ನಲ್ಲ ಎಂಬ ವಿವೇಚನೆ ಬೆಳೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net