ಗಾಯದ ಮೇಲೆ ಬರೆ: ಅಗತ್ಯ ಔಷಧಗಳ ಬೆಲೆ ಅಗಾಧ ಏರಿಕೆ

Medicine (1)
Published on

ಬರುವ ಏಪ್ರಿಲ್ ತಿಂಗಳಿನಿಂದ ಅಗತ್ಯ ಔಷಧಗಳ ಬೆಲೆಯು ಹೆಚ್ಚಳವಾಗುತ್ತಿರುವುದು ಈಗಾಗಲೇ ಬೆಲೆಯೇರಿಕೆಯಿಂದ ಬಳಲುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ಬಾರಿ ಔಷಧಗಳ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಅಂದರೆ, ಶೇ. 12ಕ್ಕಿಂತಲೂ ಹೆಚ್ಚಳವನ್ನು ಕಾಣಲಿರುವುದು ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಬಹುದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

ಭಾರತದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವೇ (ಎನ್​ಪಿಪಿಎ) ಈ ಏರಿಕೆಗೆ ಸಮ್ಮತಿಯ ಮೊಹರನ್ನು ಒತ್ತಿದೆ. ಕೇಂದ್ರ ಸರ್ಕಾರವು ಸೂಚಿಸಿದಂತೆ ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ವಾರ್ಷಿಕ ಬದಲಾವಣೆಯು 2022ರಲ್ಲಿ ಶೇ. 12.12ರಷ್ಟು ಇದೆ ಎಂದು ಎನ್​ಪಿಪಿಎ ತಿಳಿಸಿದೆ. ಇದಕ್ಕೆ ಅನುಗುಣವಾಗಿಯೇ ನೋವು ನಿವಾರಕಗಳು, ಸೋಂಕು ನಿವಾರಕಗಳು, ಹೃದಯಕ್ಕೆ ಸಂಬಂಧಿಸಿದ ಔಷಧಗಳು, ಆಂಟಿಬಯೋಟಿಕ್​ಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್​ನಿಂದ ಏರಿಕೆಯಾಗಲಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯ ಭಾಗವಾಗಿರುವ 384 ಮೂಲ ಔಷಧಗಳ (ಸಂಯುಕ್ತ ರಸಾಯನಗಳ) ಬೆಲೆಗಳನ್ನು ಎನ್​ಪಿಪಿಎ ನಿಯಂತ್ರಿಸುತ್ತದೆ. ಆದರೆ, ವಾಸ್ತವದಲ್ಲಿ ಈ 384 ಮೂಲ ಔಷಧಗಳಿಂದ 800 ಕ್ಕೂ ಹೆಚ್ಚು ಅಗತ್ಯ ಔಷಧಗಳನ್ನು ತಯಾರಿಸುವುದರಿಂದ ಇವೆಲ್ಲವುಗಳ ಬೆಲೆಯೂ ಹೆಚ್ಚಾಗುತ್ತದೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಮಧುಮೇಹ, ಕ್ಯಾನ್ಸರ್, ಹೆಪಟೈಟಿಸ್, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಗಳು ಕೂಡ ಸೇರಿವೆ.

ಉಳಿದ ನಿಗದಿತವಲ್ಲದ ಔಷಧಗಳ ಬೆಲೆಗಳು ಎನ್​ಪಿಪಿಎ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಇಲ್ಲದ ಇತರ ಔಷಧಗಳ ಬೆಲೆಗಳನ್ನು ವಾರ್ಷಿಕವಾಗಿ ಶೇಕಡಾ 10ರವರೆಗೆ ಹೆಚ್ಚಿಸಲು ಔಷಧ ತಯಾರಕ ಕಂಪನಿಗಳಿಗೆ ಅವಕಾಶ ನೀಡಲಾಗಿದೆ.

2021ರಲ್ಲಿ ಅಗತ್ಯ ಔಷಧಗಳ ದರವನ್ನು ಕೇವಲ ಶೇ 0.53 ರಷ್ಟು ಹೆಚ್ಚಿಸಲಾಗಿತ್ತು. 2020ರಲ್ಲಿ ಶೇ 1.88 ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಕಳೆದ ವರ್ಷ ಅಂದರೆ 2022ರಲ್ಲಿ ಶೇ. 10.8ರಷ್ಟು ದರ ಏರಿಕೆ ಮಾಡಿದ್ದೇ ಇದುವರೆಗಿನ ಗರಿಷ್ಠ ವಾರ್ಷಿಕ ಹೆಚ್ಚಳವಾಗಿತ್ತು. ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮವಾಗಿ ಔಷಧ ತಯಾರಿಕೆ ಅಗತ್ಯವಾದ ಕಚ್ಚಾ ವಸ್ತುಗಳ ಕೊರತೆ ಉಂಟಾಗಿ ಅವುಗಳ ಬೆಲೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಗರಿಷ್ಠ ಏರಿಕೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೀಗ, ಹಣದುಬ್ಬರ ತಕ್ಕಮಟ್ಟಿಗೆ ಹತೋಟಿಯಲ್ಲಿದ್ದರೂ ಔಷಧ ಬೆಲೆಗಳನ್ನು ಶೇ. 12ರಷ್ಟು ಏರಿಕೆ ಮಾಡಲು ಏಕೆ ಅವಕಾಶ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಳ ಮಾಡಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಅನುಸಾರ ಪ್ರಸ್ತುತ ಹಣದುಬ್ಬರ ದರವು ಶೇ. 6ರ ಒಳಗಿದೆ. ಹೀಗಿರುವಾಗ ಅಗತ್ಯ ಔಷಧಗಳ ಬೆಲೆಗಳನ್ನು ಶೇ. 12ಕ್ಕಿಂತ ಹೆಚ್ಚು ಮಾಡಲು ಅನುವು ಮಾಡಿಕೊಟ್ಟಿರುವುದು ಸಮರ್ಥನೀಯ ಕ್ರಮವಾಗಿ ಕಂಡುಬರುವುದಿಲ್ಲ.

ಪ್ಯಾರಸಿಟಮಾಲ್, ಆಂಟಿಬಯಾಟಿಕ್ ಅಜಿತ್ರೊಮೈಸಿನ್, ಬ್ಯಾಕ್ಟಿರಿಯಲ್ ಸೋಂಕು ನಿವಾರಕಗಳು ಮುಂತಾದವು ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಪ್ರಮುಖ ಔಷಧಗಳಾಗಿವೆ. ಈ ಪೈಕಿ ಕೆಲವು ಔಷಧಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲೇ ಇವುಗಳ ಬೆಲೆ ಏರಿಕೆಯಾಗುತ್ತಿರುವುದು ಕಳವಳ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net