

ಕರೊನಾ ವಿರುದ್ಧದ ಸಮರದಲ್ಲಿ ಭಾರತ ಮತ್ತೊಂದು ಘಟ್ಟವನ್ನು ಪ್ರವೇಶಿಸಿದೆ. ಮೊದಲ ಹಂತದಲ್ಲಿ ಮುಂಚೂಣಿ ಕರೊನಾ ವಾರಿಯರ್ಗಳಿಗೆ ಲಸಿಕೆ ನೀಡಿದ ನಂತರದಲ್ಲಿ, ಇದೀಗ ಎರಡನೆಯ ಹಂತದಲ್ಲಿ, 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ, ಗಂಭೀರ ಅನ್ಯವ್ಯಾಧಿಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದೆ. ಸೋಮವಾರ ಒಂದೇ ದಿನ 20 ಲಕ್ಷ ಜನರಿಗೆ ಲಸಿಕೆ ನೀಡಿರುವುದು ದಾಖಲೆ. ಎರಡೂ ಹಂತ ಸೇರಿ ಒಟ್ಟಾರೆಯಾಗಿ ಈವರೆಗೆ 2.30 ಕೋಟಿ ಜನರಿಗೆ ಲಸಿಕೆ ನೀಡಿದಂತಾಗಿದೆ. ವಿಶ್ವದ ಬೃಹತ್ ಲಸಿಕಾ ಅಭಿಯಾನ ಭಾರತದಲ್ಲಿ ಈಗ ಚಾಲ್ತಿಯಲ್ಲಿರುವುದು ಗಮನಾರ್ಹ. ಲಾಕ್ಡೌನ್ ವಿಧಿಸುವಿಕೆ ಮುಂತಾದ ಹೆಜ್ಜೆಗಳಿಂದ ಕರೊನಾ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಹಾಗೂ ಲಸಿಕೆ ಸಂಶೋಧಿಸಿ ಜನರಿಗೆ ನೀಡುವಲ್ಲಿ- ಹೀಗೆ ಹೋರಾಟದ ವಿವಿಧ ಘಟ್ಟಗಳಲ್ಲಿ ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳು, ಅನುಸರಿಸುತ್ತಿರುವ ಹಾದಿ ವಿಶ್ವನಾಯಕರ ಶ್ಲಾಘನೆಗೆ ಪಾತ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಂತಾದ ಮುಂಚೂಣಿ ಜಾಗತಿಕ ಸಂಘಟನೆಗಳು ಕೂಡ ಭಾರತದ ಪಾತ್ರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ನೀಡಿವೆ. ಅನೇಕ ದೇಶಗಳು ಲಸಿಕೆಗಾಗಿ ಭಾರತವನ್ನು ಅವಲಂಬಿಸಿವೆ. ಅಂತೂ ಕರೊನಾ ತಹಬಂದಿಗೆ ಬಂತು ಎಂಬ ವಾತಾವರಣ ನಿರ್ವಣವಾಗುತ್ತಿರುವಾಗಲೇ ಕೆಲ ರಾಜ್ಯಗಳಲ್ಲಿ ಮತ್ತೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಸ್ವಲ್ಪಮಟ್ಟಿನ ಕಳವಳವನ್ನೂ ಉಂಟುಮಾಡಿದೆ.
ಮಹಾರಾಷ್ಟ್ರ, ಕೇರಳ, ಕರ್ನಾಟಕ, ಪಂಜಾಬ್ ಮುಂತಾಗಿ ಎಂಟು ರಾಜ್ಯಗಳಲ್ಲಿ ದೈನಿಕ ಕರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಕಳವಳಕಾರಿ ಎನ್ನುವಷ್ಟು ಮಟ್ಟಿಗೆ ಕೇಸುಗಳು ಪತ್ತೆಯಾಗುತ್ತಿವೆ. ಮುಂಬೈ ಮಹಾನಗರಿಯಲ್ಲಿ ಇನ್ನು ಕೆಲ ದಿನಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೆ ಭಾಗಶಃ ಲಾಕ್ಡೌನ್ ಮಾಡುವ ಕುರಿತೂ ಆಲೋಚನೆ ನಡೆಯುತ್ತಿದೆ. ಈ ನಡುವೆ, ಕೆಲ ಜನಪ್ರತಿನಿಧಿಗಳು ಕರೊನಾ ಸಾಂಕ್ರಾಮಿಕತೆ ಕೊನೆಗೊಳ್ಳುತ್ತ ಬಂದಿದೆ ಎಂಬ ರೀತಿಯಲ್ಲಿ ಮಾತಾಡುತ್ತಿರುವುದಕ್ಕೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಮತ್ತು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈ ರೀತಿಯ ಹೇಳಿಕೆ ನೀಡಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಸಮಾಧಾನ ವ್ಯಕ್ತಪಡಿಸಿದೆ. ‘ಸುರಕ್ಷತೆ ಬಗ್ಗೆ ಭ್ರಮೆ ಇಟ್ಟುಕೊಳ್ಳುವುದು ಬೇಡ. ಜನರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು’ ಎಂದು ಐಎಂಎ ಕಿವಿಮಾತು ಹೇಳಿದೆ. ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತ ಕರೊನಾ ವಿರುದ್ಧ ನಿರ್ಣಾಯಕ ಸಮರದ ಹಂತದಲ್ಲಿದೆ. ಈಗ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತಂದರೆ ಅರ್ಧ ಗೆದ್ದಂತೆ. ಆದರೆ ಈ ಹಂತದಲ್ಲಿ ಸರ್ಕಾರವೇ ಇರಲಿ ಅಥವಾ ಸಾರ್ವಜನಿಕರೇ ಇರಲಿ, ಯಾವುದೇ ವಲಯದಲ್ಲಿ ಅಲಕ್ಷ್ಯ ಅಥವಾ ಉದಾಸೀನತೆ ಕಂಡುಬಂದರೂ ಅಪಾಯ ಕಾದಿದೆ ಎಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಲೇ ದೈನಂದಿನ ಜೀವನ ನಡೆಸಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದೇಪದೆ ಹೇಳುವಂತೆ, ಕರೊನಾ ಮುನ್ನೆಚ್ಚರಿಕೆ ಕ್ರಮಗಳು ಇನ್ನೂ ಕೆಲ ಕಾಲ ನಮ್ಮ ಜನಜೀವನದ ಭಾಗವೇ ಆಗಬೇಕಿದೆ. ಅರಿವಿನೊಂದಿಗೆ ಮುನ್ನಡೆಯುವುದೇ ಈಗಿರುವ ಹಾದಿ.