ಸಂಪಾದಕೀಯ| ಅಕ್ರಮಗಳಿಗೆ ಕಡಿವಾಣ ಅಗತ್ಯ

child labour
Published on

ಗ್ರಾಮೀಣ ಗ್ರಾಮೀಣ ಬಡ ಕುಟುಂಬಗಳ ಜೀವನ ನಿರ್ವಹಣೆ ಹಾಗೂ ಆಹಾರ ಭದ್ರತೆ ಉದ್ದೇಶದಿಂದ ಜಾರಿಗೆ ತಂದಿರುವ ಮಹಾತ್ಮಾ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಆಧಾರ್ ಆಧಾರಿತ ವೇತನ ಪಾವತಿ ವ್ಯವಸ್ಥೆ ಮತ್ತು ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿಗೆ ದಂಡ ವಿಧಿಸುವ ತೀರ್ಮಾನ ಒಳ್ಳೆಯದು.

ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನದ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿಯ (ಎಸ್​ಎಯು) ಪರಿಶೀಲನೆಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 181 ಕೋಟಿ ರೂ. ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಬೆಳಕಿಗೆ ಬಾರದ ಅಕ್ರಮಗಳ ಸಂಖ್ಯೆ ಮತ್ತು ಮೊತ್ತ ಕೂಡ ಇನ್ನೂ ದೊಡ್ಡ ಪ್ರಮಾಣದಲ್ಲಿ ಇರಬಹುದು.

ಈ ಅಕ್ರಮ ತಡೆಗೆ ಸರ್ಕಾರ ಆಧಾರ್ ಕಾರ್ಡ್ ಜೋಡಣೆ ಹಾಗೂ ಅಕ್ರಮಕ್ಕೆ ಸಹಕಾರ ನೀಡಿದ ಅಧಿಕಾರಿ,ಸಿಬ್ಬಂದಿಗೆ ದಂಡ ವಿಧಿಸುವ ಸರ್ಕಾರದ ನಿರ್ಧಾರದಿಂದ ಸ್ವಲ್ಪಮಟ್ಟಿಗಾದರೂ ಕಡಿವಾಣ ಬೀಳಬಹುದು. ಅಕ್ರಮಗಳಿಗೆ ಕಡಿವಾಣ ಬೀಳುವುದು ಅಷ್ಟೇ ಅಲ್ಲ, ವಿನಾಕಾರಣ ವಿಳಂಬವಾಗದೆ ಕಾರ್ವಿುಕರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.

ರಾಜ್ಯದಲ್ಲಿ ನರೇಗಾ ಯೋಜನೆಯಡಿ 87.23 ಲಕ್ಷ ಜನ ಜಾಬ್ ಕಾರ್ಡ್ ಹೊಂದಿದ್ದಾರೆ. ಓರ್ವ ವ್ಯಕ್ತಿ ಹಲವು ಜಾಬ್ ಕಾರ್ಡ್​ಗಳನ್ನು ಹೊಂದಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ರಮದ ಉದ್ದೇಶಕ್ಕಾಗಿಯೇ ನಕಲಿ ಜಾಬ್ ಕಾರ್ಡ್​ಗಳನ್ನು ಸೃಷ್ಟಿ ಮಾಡಲಾಗಿದ್ದು, ಈ ಕೃತ್ಯಕ್ಕೆ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಇಲ್ಲವೇ ಸಿಬ್ಬಂದಿ ಸಹಕಾರದ ಶಂಕೆಯೂ ಇಲ್ಲದಿಲ್ಲ. ಕೆಲವು ಕಡೆಗಳಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಹೀಗಾಗಿಯೇ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸಂಯೋಜನೆ ಕಡ್ಡಾಯ ಮಾಡಲು ನಿರ್ಧರಿಸಿದೆ. 67.64 ಲಕ್ಷ ಕಾರ್ವಿುಕರು ಆಧಾರ್ ಆಧಾರಿತ ವ್ಯವಸ್ಥೆಯಡಿ ವೇತನ ಪಡೆಯಲು ಅರ್ಹತೆ ಪಡೆದಿದ್ದಾರೆ. ಇನ್ನೂ 20.4 ಲಕ್ಷ ಕಾರ್ವಿುಕರು ಎಬಿಪಿಎಸ್​ಗೆ ಸೇರ್ಪಡೆಯಾಗಿಲ್ಲ ಎಂಬುದು ಸರ್ಕಾರದ ಅಂಕಿ ಅಂಶದಿಂದ ವ್ಯಕ್ತವಾಗಿದೆ. ಆಧಾರ್ ಜೋಡಣೆಯಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಒಂದು ವೇಳೆ ಆಧಾರ್ ಲಿಂಕ್ ಆಗದೆ ಬ್ಯಾಂಕ್ ಖಾತೆಗೆ ವೇತನ ಜಮೆಯಾಗುವ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಹಣ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಹೆಚ್ಚಿವೆ.

ಹಣ ದುರ್ಬಳಕೆ ಪ್ರಕರಣಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಂದಲೇ ಅವ್ಯವಹಾರದ ಹಣ ವಸೂಲಿ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಈಗಾಗಲೇ ಹಲವು ಬಾರಿ ನೋಟಿಸ್ ಜಾರಿಗೊಳಿಸಲಾಗಿದೆ. ಆಧಾರ್ ಜೋಡಣೆಯಿಂದ ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ಉದ್ದೇಶದಿಂದ ಎಬಿಪಿಎಸ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ. ಸರ್ಕಾರದ ಉದ್ದೇಶ ಒಳ್ಳೆಯದೆ. ಪರಿಣಾಮಕಾರಿ ಅನುಷ್ಠಾನ ಆದಾಗ ಮಾತ್ರ ಉದ್ದೇಶ ಫಲ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net