

ರಾಜ್ಯದ ಲಕ್ಷಾಂತರ ಕಾರ್ವಿುಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೂಲ್ ಕಿಟ್ ಮತ್ತು ಸೇಫ್ಟಿ ಕಿಟ್ಗಳನ್ನು ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅನುಮೋದನೆ ನೀಡಲಾಗಿದೆ.
ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆ ಮತ್ತು ಭೂಸುಧಾರಣೆ, ಕೈಗಾರಿಕಾ ವ್ಯಾಜ್ಯ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸುವುದು ಮುಂತಾದ ನಿರ್ಣಯಗಳನ್ನೂ ಸಂಪುಟ ತೆಗೆದುಕೊಂಡಿದೆ. ಈ ಮೂರು ಮಸೂದೆಗಳು ಈಚಿನ ವಿಧಾನಮಂಡಲ ಅಧೀವೇಶನದಲ್ಲಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದ್ದರೂ ವಿಧಾನಪರಿಷತ್ನಲ್ಲಿ ಅಂಗೀಕಾರ ಪಡೆದಿಲ್ಲವಾದ್ದರಿಂದ ಈಗ ಸುಗ್ರೀವಾಜ್ಞೆಗೆ ಸರ್ಕಾರ ಮೊರೆಹೋಗುತ್ತಿದೆ. ಇನ್ನು, ಕಟ್ಟಡ ಕಾರ್ವಿುಕರ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ, 76 ಸಾವಿರ ಮಂದಿಗೆ ಟೂಲ್ ಕಿಟ್ ಮತ್ತು 90 ಸಾವಿರ ಮಂದಿಗೆ ಸೇಫ್ಟಿ ಕಿಟ್ಗಳನ್ನು ವಿತರಿಸುವುದು ಸರ್ಕಾರದ ಉದ್ದೇಶ. ಈ ಸವಲತ್ತು ಪಡೆಯಲು ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರಬೇಕಾಗುತ್ತದೆ. ಈ ಉದ್ದೇಶವೇನೋ ಒಳ್ಳೆಯದೇ. ಅದರಲ್ಲೂ ಕರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಎಲ್ಲ ವಲಯಗಳಂತೆ ರಿಯಲ್ ಎಸ್ಟೇಟ್ ಸೇರಿದಂತೆ ನಿರ್ಮಾಣ ವಲಯವೂ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ತೊಂದರೆಗೀಡಾದವರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವೂ ಹೌದು. ಆದರೆ ಎಷ್ಟು ಪ್ರಮಾಣದಲ್ಲಿ ಇದು ಅರ್ಹ ಕಾರ್ವಿುಕರಿಗೆ ತಲುಪುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ. ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ, ಇವತ್ತು ಇಲ್ಲಿ ನಾಳೆ ಮತ್ತೊಂದೆಡೆ ಎಂಬ ರೀತಿಯಲ್ಲಿ ಕೆಲಸದ ಸ್ವರೂಪ ಹೊಂದಿರುವ ಕಟ್ಟಡ ಕಾರ್ವಿುಕರಲ್ಲಿ ಎಷ್ಟು ಮಂದಿಗೆ ಇಂಥ ಯೋಜನೆ ಬಗ್ಗೆ ಮಾಹಿತಿ ಇರುತ್ತದೆ ಎಂಬುದರ ಅವಲೋಕನವೂ ಅಗತ್ಯ. ಹೀಗಾಗಿ ಯೋಜನೆಗಳ ಬಗ್ಗೆ ಮೊದಲು ಮಾಹಿತಿ ನೀಡಿ ಜಾಗೃತಿ ಮೂಡಿಸುವ ಮತ್ತು ಯೋಜನೆನೆಯ ಪ್ರಯೋಜನ ಪಡೆಯುವ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅನರ್ಹರೂ ಯೋಜನೆಯ ಪಾಲು ಪಡೆಯುವ ಹಾಗೂ ಈ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇರುತ್ತದೆ. ಕೆಲ ತಿಂಗಳ ಹಿಂದೆ, ಕರೊನಾ ಸಮಯದಲ್ಲಿ ಕಾರ್ವಿುಕರಿಗೆ ಫುಡ್ ಕಿಟ್ ವಿತರಿಸುವಾಗ ಅಕ್ರಮ ನಡೆದಿದೆ ಎಂದು ವಿಪಕ್ಷಗಳು ಆರೋಪಿಸಿದ್ದು ಇಲ್ಲಿ ಉಲ್ಲೇಖನೀಯ. ಇಂಥ ಆಪಾದನೆಗಳಿಗೆ ಆಸ್ಪದವಾಗದಂತೆ ಪಾರದರ್ಶಕವಾಗಿ ಯೋಜನೆ ಜಾರಿಗೊಳಿಸುವ ಬದ್ಧತೆಯನ್ನು ತೋರಿಸಬೇಕಾಗುತ್ತದೆ. ಇದರ ಜತೆಗೆ, ಸರ್ಕಾರ ಇನ್ನೂ ಒಂದು ಬಗೆಯಲ್ಲಿ ಆಲೋಚಿಸಬಹುದು. ಅದೆಂದರೆ- ವಸ್ತು ಅಥವಾ ಕಿಟ್ ಕೊಡುವ ಬದಲು ನಿರ್ದಿಷ್ಟ ಮೊತ್ತದ ನಗದು ಹಣವನ್ನು ನೇರವಾಗಿ ಕಾರ್ವಿುಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು. ಇದನ್ನೂ ಓದಿ: ಸುಶಾಂತ್ ಸಿಂಗ್ ಕೇಸ್ನಲ್ಲೊಂದು ಬಿಗ್ ಟ್ವಿಸ್ಟ್; ಜೂ.13ರಂದು ನಡೆದ ಅಚ್ಚರಿಯ ಘಟನೆ ಇದು
ಇಲ್ಲಿ ಮಧ್ಯವರ್ತಿಗಳ ನುಸುಳುವಿಕೆಗೂ ಅವಕಾಶ ಇರುವುದಿಲ್ಲ. ಕಾರ್ವಿುಕರು ಹಣವನ್ನು ತಮಗೆ ಅಗತ್ಯವಿರುವ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರೊಟ್ಟಿಗೆ, ಅನೇಕ ಅಸಂಘಟಿತ ಕಾರ್ವಿುಕರು ಕಾರ್ವಿುಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿಲ್ಲ. ಆದ್ದರಿಂದ ರಾಜ್ಯದ ಕಾರ್ವಿುಕರ ನಿಖರ ಅಂಕಿಸಂಖ್ಯೆ ಸರ್ಕಾರದ ಬಳಿ ಇಲ್ಲ. ಈ ಕೆಲಸವೂ ಆದ್ಯತೆ ಮೇಲೆ ಆಗಬೇಕು. ಅಂದಾಗ, ವಿಶಾಲ ಜನಸಮುದಾಯಕ್ಕೆ ಸರ್ಕಾರದ ನೆರವು ದೊರೆಯಲು ಅನುವಾಗುತ್ತದೆ.