ಸಂಪಾದಕೀಯ| ಸೂಕ್ತ ಎಚ್ಚರಿಕೆ ಅಗತ್ಯ; ಅವಘಡಗಳನ್ನು ತಪ್ಪಿಸಬೇಕಿದೆ

Gas Leak
Published on

ಆಂಧ್ರಪ್ರದೇಶದ ವಿಶಾಖಪಟ್ಟಣ ಹೊರವಲಯದ ವೆಂಕಟಾಪುರದಲ್ಲಿನ ಎಲ್​ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಗುರುವಾರ ಸ್ಟೈರಿನ್ ವಿಷಾನಿಲ ಸೋರಿಕೆ ಆಗಿ 11 ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಕ್ಕೂ ಅಧಿಕ ಜನರು ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹಲವು ಜಾನುವಾರುಗಳು, ಪ್ರಾಣಿ ಪಕ್ಷಿಗಳು ಸಹ ಅಸುನೀಗಿವೆ. ಈ ಇಡೀ ಘಟನೆ ಭೋಪಾಲ್ ಅನಿಲ ದುರಂತದ ಕರಾಳ ನೆನಪನ್ನು ಮರುಕಳಿಸುವಂತೆ ಮಾಡಿತು. ಅಲ್ಲದೆ, ವಿಷಾನಿಲದ ಸೋರಿಕೆಯಿಂದ ವಿಶಾಖಪಟ್ಟಣದಲ್ಲಿ ಸೃಷ್ಟಿಯಾದ ವಿಚಿತ್ರ ಸ್ಥಿತಿ, ಅಲ್ಲಿನ ಜನರ ಅಸಹಾಯಕತೆಯ ದೃಶ್ಯಗಳನ್ನು ಕಂಡು ಇಡೀ ದೇಶ ಮರುಗಿತು. ವಿಷಾನಿಲ ಸೇವನೆ ಬಳಿಕ ಉಸಿರಾಟ ಮತ್ತು ಮುಖ ಉರಿಯಂಥ ಸಮಸ್ಯೆಗೆ ಒಳಗಾದ ಜನರು ರಸ್ತೆ ಮಧ್ಯೆಯೇ ಬಿದ್ದು ಒದ್ದಾಡುತ್ತಿದ್ದ ದೃಶ್ಯಗಳು ದುರಂತದ ತೀವ್ರತೆಗೆ ಸಾಕ್ಷಿ.

ಪರಿಸ್ಥಿತಿ ಶುಕ್ರವಾರದ ಹೊತ್ತಿಗೆ ನಿಯಂತ್ರಣಕ್ಕೆ ಬಂದಿದೆ. ಕಾರ್ಖಾನೆಯ ಎರಡು ಕಿಲೋಮೀಟರ್ ವ್ಯಾಪ್ತಿಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಏಕಾಏಕಿ ಸ್ಟೈರಿನ್ ವಿಷಾನಿಲ ಸೋರಿಕೆ ಆಗಲು ಕಾರಣವೇನು, ಈ ಘಟನೆಗೆ ನಿರ್ಲಕ್ಷ್ಯ ಕಾರಣವೇ, ಇಡೀ ನಗರವನ್ನು ಅಪಾಯಕ್ಕೆ ಒಡ್ಡಿದ ದುರಂತ ಸಂಭವಿಸಿದ್ದಾದರೂ ಹೇಗೆ ಎಂಬ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ತನಿಖಾವರದಿ ಸಲ್ಲಿಕೆಯ ಬಳಿಕ ನಿಖರವಾದ ಕಾರಣ ತಿಳಿದು ಬರಲಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆ ಕಳೆದೊಂದು ತಿಂಗಳಿಂದ ಬಂದ್ ಆಗಿತ್ತು. ಎರಡು ದಿನಗಳ ಹಿಂದಷ್ಟೇ ಕಾರ್ಖಾನೆ ಮತ್ತೆ ತೆರೆಯಲಾಗಿದ್ದು, ತೀವ್ರ ಒತ್ತಡದ ಕಾರಣ ಸ್ಟೈರಿನ್ ವಿಷಾನಿಲ ಸುತ್ತಲಿನ 5 ಕಿ.ಮೀ. ವ್ಯಾಪ್ತಿವರೆಗೆ ಹಬ್ಬಿದೆ ಎಂದು ಪೊಲೀಸರು ಮೇಲ್ನೋಟಕ್ಕೆ ಕಂಡ ಚಿತ್ರಣದಿಂದ ಅಂದಾಜಿಸಿದ್ದಾರೆ. ಅಲ್ಲದೆ, ಸ್ಟೈರಿನ್ ಶೇಖರಿಸಿದ್ದ ಕಂಟೇನರ್ ಹಳೆಯದಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರಲಿಲ್ಲ ಎನ್ನಲಾಗಿದೆ. ಅದೇನಿದ್ದರೂ, ಪ್ರತಿ ಆಯಾಮದ ಬಗ್ಗೆಯೂ ಸಮರ್ಪಕವಾದ ತನಿಖೆ ನಡೆದು, ವಾಸ್ತವ ಹೊರಗೆ ಬರಬೇಕು.

ನಮ್ಮ ದೇಶದಲ್ಲಿ ಹಲವು ಮಹಾನಗರಗಳು, ಪಟ್ಟಣಗಳು ದೊಡ್ಡ ಕೈಗಾರಿಕಾ ಪ್ರದೇಶಗಳನ್ನು ಹೊಂದಿವೆ. ಕಳೆದ ಒಂದೂವರೆ ತಿಂಗಳ ಲಾಕ್​ಡೌನ್ ಬಳಿಕ ಕೆಲವು ಕಡೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ಇನ್ನು ಕೆಲವು ಕಡೆ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ. ಬಹುತೇಕ ಕೈಗಾರಿಕೆಗಳು ಯಂತ್ರೋಪಕರಣಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತವೆ. ಆದರೆ, ಲಾಕ್​ಡೌನ್ ನಂತರ ತೆರೆದುಕೊಳ್ಳುತ್ತಿರುವ ಕಾರ್ಖಾನೆಗಳು ಯಂತ್ರೋಪಕರಣಗಳ ನಿಟ್ಟಿನಲ್ಲಿ ತುಂಬ ಜಾಗ್ರತೆ ವಹಿಸಬೇಕು. ಇಷ್ಟೊಂದು ದಿನಗಳಲ್ಲಿ ನಿರ್ವಹಣೆ ಇಲ್ಲದೆ ಯಂತ್ರಗಳ ಸ್ಥಿತಿ ಏನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ, ಯಂತ್ರಗಳು ಸುಸ್ಥಿತಿಯಲ್ಲಿ ಇವೆಯೇ. ಮುಂಚಿನಂತೆಯೇ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲವೆ ಅಥವಾ ರಿಪೇರಿಯ ಅಗತ್ಯ ಇದೆಯೇ ಎಂಬುದನ್ನು ಕಾರ್ಯಾರಂಭ ಮಾಡುವುದಕ್ಕೂ ಮುನ್ನವೇ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ, ಆಕಸ್ಮಾತ್ ಆಗಿ ಸಂಭವಿಸುವ ದುರಂತಗಳು ಭಾರಿ ಹಾನಿಯನ್ನು ತಂದೊಡ್ಡುತ್ತವೆ. ಕರೊನಾ ಸಂಕಷ್ಟದ

ವಿರುದ್ಧ ಹೋರಾಟದಲ್ಲಿಯೇ ದೇಶ ಸಾಕಷ್ಟು ಹಾನಿ ಅನುಭವಿಸಿದೆ. ಹಾಗಾಗಿ, ಸಂಭಾವ್ಯ ಅವಘಡಗಳನ್ನು ತಡೆಯಲು ಸೂಕ್ತ ಮುಂಜಾಗ್ರತೆ, ಎಚ್ಚರಿಕೆ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net