ಸಂಪಾದಕೀಯ| ನೆರವಿನ ಆಸರೆ - ಪ್ರವಾಹದಿಂದ ಹಾನಿಗೊಳಗಾದ ನೈಜ ಸಂತ್ರಸ್ತರಿಗೆ ಪರಿಹಾರ ಸಿಗಲಿ

Flood
Published on

ರಾಜ್ಯ ಕರೊನಾ ಸೋಂಕಿನ ಹಾವಳಿ ವಿರುದ್ಧ ಸಮರ ನಡೆಸುತ್ತಿರುವಾಗಲೇ ಬಂದು ಎರಗಿದ ಭಾರಿ ನೆರೆ ಅಪಾರ ಪ್ರಮಾಣದ ಹಾನಿಯನ್ನು ಎಸಗಿದೆ. ಕಳೆದ ವರ್ಷವೂ ರಾಜ್ಯ ಭೀಕರ ಪ್ರವಾಹಕ್ಕೆ ತತ್ತರಿಸಿತ್ತು. ಅದರಿಂದ ಚೇತರಿಸಿಕೊಳ್ಳುವ ಮುನ್ನವೇ, ಪುನರ್ ನಿರ್ವಣದ ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಮತ್ತೆ ನೆರೆ ಅಪ್ಪಳಿಸಿರುವುದರಿಂದ ಸಂಕಷ್ಟದ ತೀವ್ರತೆ ಹೆಚ್ಚಿದೆ. ರಾಜ್ಯದ 22 ಜಿಲ್ಲೆಗಳ 150 ತಾಲೂಕುಗಳು ನೆರೆಬಾಧಿತವಾಗಿವೆ. ಒಟ್ಟು -ಠಿ; 8071 ಕೋಟಿ ನಷ್ಟವಾಗಿದ್ದು, ರಾಜ್ಯ ಸರ್ಕಾರ ತಾತ್ಕಾಲಿಕ ತುರ್ತು ಪರಿಹಾರವನ್ನು ಒದಗಿಸಿದೆ. 4.03 ಲಕ್ಷ ಹೆಕ್ಟೇರ್ ಬೆಳೆ, ರಸ್ತೆ, ಸೇತುವೆ, ವಿದ್ಯುತ್ ಕಂಬ, ಮನೆಗಳು, ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಕೇಂದ್ರದ ಅನುದಾನದ ಅಗತ್ಯವಿದೆ. ನೆರೆಯಿಂದ ಹಾನಿಯಾದ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿದ್ದು, ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ಅಗತ್ಯ ಮಾಹಿತಿ ಒದಗಿಸಿದ್ದಾರೆ ಮತ್ತು ಹೆಚ್ಚಿನ ನೆರವು ಒದಗಿಸುವಂತೆ ಕೋರಿದ್ದಾರೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಮೂರು ಪ್ರತ್ಯೇಕ ತಂಡ ಮಂಗಳವಾರ ಕೊಡಗು, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿವೆ. ಬುಧವಾರ ಮಧ್ಯಾಹ್ನ ಈ ಅಧಿಕಾರಿಗಳು ರಾಜ್ಯ ಕಂದಾಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. ನಷ್ಟದ ತೀವ್ರತೆ ಅರಿಯಲು, ವಾಸ್ತವವನ್ನು ಮನಗಾಣಲು ಈ ಎಲ್ಲ ಪ್ರಕ್ರಿಯೆಗಳು ಅವಶ್ಯವೇ. ಆದರೆ, ಇಂಥ ಅಧ್ಯಯನಗಳು ಕಾಟಾಚಾರಕ್ಕೆ ಸೀಮಿತವಾಗಿ ಉಳಿಯಬಾರದು. ಏಕೆಂದರೆ, ಇವು ಮಾನವೀಯ ಸಂಕಟದ ದುರಂತಗಳು. ಹೋದ ವರ್ಷದ ಪ್ರವಾಹದ ಬೆನ್ನಲ್ಲೇ ಈ ವರ್ಷ ನೆರೆ ಅಪ್ಪಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೈಗೆ ಬರಬೇಕಿದ್ದ ಬೆಳೆಗಳು ನೀರು ಪಾಲಾಗಿವೆ. ರೈತರು ದಿಕ್ಕೇ ತೋಚದಂತಾಗಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡು ಬಡವರು ಮುಂದೇನು ಎಂದು ದಾರಿ ಕಾಣದೆ ಹತಾಶರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಷ್ಟಕ್ಕೆ ಒಳಗಾದವರಿಗೆ, ನೊಂದವರಿಗೆ ಸರಿಯಾದ ನೆರವು ಸಿಗುವಂತೆ ಮಾಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕರ್ತವ್ಯ.

ಅಧ್ಯಯನ ತಂಡ ಕೇಂದ್ರಕ್ಕೆ ವೈಜ್ಞಾನಿಕ ನಿಷ್ಕರ್ಷದ ನೆಲೆಗಟ್ಟಿನಲ್ಲಿ ವರದಿಯನ್ನು ಸಲ್ಲಿಸಬೇಕು. ಭಾರಿ ಹಾನಿಯ ಪ್ರಮಾಣಕ್ಕೆ ಪುಡಿಗಾಸಿನ ಪರಿಹಾರ ಬಿಡುಗಡೆಯಾದರೆ ಏನು ಪ್ರಯೋಜನ? ಸಂತ್ರಸ್ತರ ದೃಷ್ಟಿ ಸರ್ಕಾರದತ್ತ ನೆಟ್ಟಿದೆ. ಕೇಂದ್ರ ಸೂಕ್ತ ಪ್ರಮಾಣದ ನೆರವನ್ನು ಬಿಡುಗಡೆ ಮಾಡಿದ

ಬಳಿಕ ಅದನ್ನು ಸಂತ್ರಸ್ತರ ಕೈಗಳಿಗೆ ಸರಿಯಾಗಿ ತಲುಪಿಸಲು, ಸೂಕ್ತ ನಿಯಮ ಅಥವಾ ಮಾರ್ಗಸೂಚಿಯನ್ನು ರಾಜ್ಯ ಹಾಕಿಕೊಳ್ಳಬೇಕು. ಎಷ್ಟೋ ಬಾರಿ ನೈಜ ಸಂತ್ರಸ್ತರಿಗೆ ಪರಿಹಾರ ಮರೀಚಿಕೆ ಆಗಿಯೇ ಉಳಿದು ಬಿಡುತ್ತದೆ ಮತ್ತು ಅಪಾತ್ರರ ಕೈಗೆ ತಲುಪಿ ವ್ಯವಸ್ಥೆಯ ಲೋಪ ಇನ್ನಷ್ಟು ಹೆಚ್ಚುತ್ತದೆ. ಈ ಬಾರಿ ಹಾಗಾಗದೆ, ಸರಿಯಾದವರ ಕೈಗೆ ನೆರವು ಸಿಗುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net