ಕೌಟುಂಬಿಕ ಬಂಧ ಮುಖ್ಯ; ಆಧುನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು..

Editorial
Published on

ಭಾರತೀಯ ಕೌಟುಂಬಿಕ ವ್ಯವಸ್ಥೆ ವಿಶ್ವದಲ್ಲೇ ಶ್ರೇಷ್ಠವಾದುದು ಮತ್ತು ವಿಶಿಷ್ಟವಾದುದು. ವಿಶ್ವದ ಇತರ ದೇಶಗಳಿಗೆ ಇದೊಂದು ಕುತೂಹಲದ ಸಂಗತಿ ಕೂಡಾ. ಈ ಹೆಗ್ಗಳಿಕೆಯನ್ನು ಕಾಪಿಟ್ಟುಕೊಂಡು ಹೋಗಬೇಕಾದುದು ದೇಶದ ಮತ್ತು ವೈಯಕ್ತಿಕ ಹಿತದ ದೃಷ್ಟಿಯಿಂದಲೂ ಅತ್ಯಗತ್ಯ. ಆದರೂ ಕೆಲವೊಮ್ಮೆ ಕೌಟುಂಬಿಕವಾಗಿ ಜಿಜ್ಞಾಸೆಗಳು, ಸಮಸ್ಯೆಗಳು ತಲೆದೋರುವುದೂ ಉಂಟು. ಇದು ಸಹಜ ಕೂಡಾ. ಇಂಥ ಪ್ರಶ್ನೆಗಳು ಉಂಟಾದಾಗ ನ್ಯಾಯಾಲಯಗಳು ಸಹ ಕಾನೂನು ಮತ್ತು ನೀತಿಸಂಹಿತೆಯ ನೆಲೆಯಲ್ಲಿ ವಿಷಯವನ್ನು ವಿವೇಚಿಸಿ ಸೂಕ್ತ ತೀರ್ಪು ಮತ್ತು ಮಾರ್ಗದರ್ಶನಗಳನ್ನು ನೀಡುವುದಿದೆ. ಇದರಿಂದ ಅನುಮಾನಗಳು ಬಗೆಹರಿದು ಜನರಿಗೆ ಒಂದು ನಿರ್ದಿಷ್ಟ ನಿರ್ಣಯಕ್ಕೆ ಬರಲು ಅನುಕೂಲ ಸಹ ಆಗುತ್ತದೆ ಎಂಬುದನ್ನು ಮರೆಯಲಾಗದು. ಈಚಿನ ಎರಡು ತೀರ್ಪಗಳನ್ನು ಇಲ್ಲಿ ಗಮನಿಸುವುದು ಸೂಕ್ತ. ಗಂಡುಮಕ್ಕಳ ಆದಾಯದಲ್ಲಿ ಹೆತ್ತವರಿಗೂ ಪಾಲು ಇದೆ ಎಂದು ತೀಸ್ ಹಜಾರಿಯಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣವೊಂದರ ತೀರ್ಪಿನ ಸಂದರ್ಭದಲ್ಲಿ ಹೇಳಿದೆ. ಪುರುಷನ ಗಳಿಕೆಯಲ್ಲಿ ಆತನ ಪತ್ನಿ ಮತ್ತು ಮಕ್ಕಳು ಮಾತ್ರವಲ್ಲ, ವೃದ್ಧ ಪಾಲಕರಿಗೂ ಹಕ್ಕು ಇದೆ ಎಂದು ಕೋರ್ಟ್ ಹೇಳಿದೆ. ಇದರಿಂದಾಗಿ ಮನೆಯ ಪುರುಷನ ಗಳಿಕೆಯಲ್ಲಿ ಯಾರೆಲ್ಲ ಪಾಲುದಾರರು ಎಂಬ ವಿಷಯ ಸ್ಪಷ್ಟವಾದಂತಾಗಿದೆ. ಮಕ್ಕಳ ಶಿಕ್ಷಣ ವಿಷಯದಲ್ಲಿ ಪಾಲಕರ ಪಾತ್ರ ಏನು ಎಂಬ ಬಗ್ಗೆ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ನೀಡಿದೆ. ತಂದೆಯಾದವನು ಮಗನಿಗೆ 18 ವರ್ಷ ಆಗುವವರೆಗೆ ಅಲ್ಲ, ಆತ ಮೊದಲ ಪದವಿಯನ್ನು ಪಡೆಯುವವರೆಗೆ ಓದಿನ ಖರ್ಚನ್ನು ಭರಿಸಬೇಕು ಎಂದು ಕೋರ್ಟ್ ಹೇಳಿದೆ. ವ್ಯಕ್ತಿಯೊಬ್ಬ ಮಗನ ಓದಿನ ಖರ್ಚು ಭರಿಸಲು ಹಿಂದೇಟು ಹಾಕಿದ್ದ ಪ್ರಕರಣ ಇದಾಗಿತ್ತು. ‘ಇಂದಿನ ಕಾಲಮಾನದಲ್ಲಿ ಕಾಲೇಜುವರೆಗೆ ಓದು ಪೂರೈಸಿದರೆ ಮಾತ್ರ ಒಂದು ಹಂತದ ಶಿಕ್ಷಣ ಪಡೆದಂತಾಗುತ್ತದೆ. ಮಗನಿಗೆ 18 ವರ್ಷ ಆಗುವವರೆಗೆ ಮಾತ್ರ ಶಿಕ್ಷಣ ಕೊಡಿಸಿ ನಂತರ ಶಿಕ್ಷಣದ ವೆಚ್ಚ ನೀಡುವುದಿಲ್ಲ ಎಂಬುದು ತಂದೆಯಾದವನಿಗೆ ಶೋಭೆ ತರುವ ಸಂಗತಿಯಲ್ಲ’ ಎಂದು ಕೋರ್ಟ್ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಅವರವರದೇ ಆದ ಹಕ್ಕು, ಕರ್ತವ್ಯ ಮತ್ತು ಹೊಣೆಗಾರಿಕೆಗಳು ಇವೆ. ಅವನ್ನು ಅರ್ಥಮಾಡಿಕೊಂಡು ನಡೆದಲ್ಲಿ ಸಂಬಂಧಗಳೂ ಸರಿದಾರಿಯಲ್ಲಿ ಸಾಗುತ್ತವೆ.

ನಮ್ಮಲ್ಲಿ ಕುಟುಂಬ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆಯಾದರೂ, ಕಾಲದ ಪ್ರಭಾವಕ್ಕೋ ಅಥವಾ ಅನಿವಾರ್ಯತೆಗೋ ಅಥವಾ ನೈತಿಕ ಸಂದಿಗ್ಧಗಳಿಗೋ ಸಿಲುಕಿ ಆಗೀಗ ಕೆಲ ಅಪಸವ್ಯಗಳೂ, ಸಮಸ್ಯೆಗಳೂ ಉಂಟಾಗುವುದುಂಟು. ಅದರಲ್ಲೂ ವೃತ್ತಿ ಮತ್ತು ಇತರ ಕಾರಣಗಳಿಗಾಗಿ ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವ ಮತ್ತು ನಗರೀಕರಣ ತಂದೊಡ್ಡಿದ ಸನ್ನಿವೇಶಗಳಿಂದಾಗಿಯೂ ಕೆಲ ರಗಳೆಗಳು ಎದುರಾಗುವುದುಂಟು. ವೃದ್ಧರನ್ನು ಮನೆಯಲ್ಲಿ ನೋಡಿಕೊಳ್ಳಲು ಆಗದೆ ಅಥವಾ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸುವುದು, ತಂದೆ ಮತ್ತು ತಾಯಿ ಇಬ್ಬರೂ ದುಡಿಯುವ ಅನಿವಾರ್ಯತೆಯಿಂದ ಮಕ್ಕಳ ಮೇಲೆ ಸೂಕ್ತ ಗಮನ ನೀಡಲಾಗದೆ ಅದರಿಂದಾಗಿ ಸಮಸ್ಯೆಗಳು ಉದ್ಭವಿಸುವುದು...ಹೀಗೆ ಆಧುನಿಕ ಕಾಲದ ಸಮಸ್ಯೆಗಳು ಭಿನ್ನ ಭಿನ್ನ. ಕುಟುಂಬ ಎಂದಮೇಲೆ ಒಂದು ಹಂತಕ್ಕೆ ಅಭಿಪ್ರಾಯಭೇದ ಅಥವಾ ಮುನಿಸು ಸಹಜವಾದರೂ ಅದು ಮಾನಸಿಕ ಅಂತರಕ್ಕೆ ಕಾರಣವಾಗಬಾರದು. ನಮ್ಮ ಕೌಟುಂಬಿಕ ವ್ಯವಸ್ಥೆಯ ಬೇರುಗಳು ಶಿಥಿಲವಾಗಲು ಬಿಡಬಾರದು. ಕುಟುಂಬ, ಸಮಾಜ, ಸರ್ಕಾರ ಹೀಗೆ ಎಲ್ಲರ ಜವಾಬ್ದಾರಿಯೂ ಇದರಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net