

ಕಳೆದ ಐದು ವರ್ಷಗಳಲ್ಲಿ ದೇಶದ ವಿವಿಧೆಡೆಗಳಲ್ಲಿ 88,093 ಹೆಕ್ಟೆರ್ಗಳಷ್ಟು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಅಂದರೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಹೀಗೆ ಬಳಸಲಾದ ಪ್ರದೇಶ ಮುಂಬೈ ಮತ್ತು ಕೊಲ್ಕತ್ತ ಮಹಾನಗರದ ಒಟ್ಟು ವಿಸ್ತೀರ್ಣದಷ್ಟಾಗುತ್ತದೆ ಎಂಬುದು ಗಮನಾರ್ಹ. ಇದರಲ್ಲಿ 19,424 ಹೆ. ಪ್ರದೇಶವನ್ನು ರಸ್ತೆಗಳಿಗಾಗಿ ಬಳಸಲಾಗಿದ್ದರೆ, 18,847 ಹೆಕ್ಟೆರ್ ಅರಣ್ಯವನ್ನು ಗಣಿಗಾರಿಕೆಗಾಗಿ, 13,344 ಹೆಕ್ಟೆರ್ ಪ್ರದೇಶವನ್ನು ನೀರಾವರಿ ಯೋಜನೆಗಳಿಗಾಗಿ ಉಪಯೋಗಿಸಲಾಗಿದೆ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
2008ರ ಏಪ್ರಿಲ್ನಿಂದ 2023ರ ಮಾರ್ಚವರೆಗಿನ ಐದು ವರ್ಷಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಅರಣ್ಯವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. 1980ರ ಅರಣ್ಯ ಸಂರಕ್ಷಣಾ ಕಾನೂನಿನ ನಿಯಮಾನುಸಾರವೇ ಈ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಸರ್ಕಾರಿ ಯೋಜನೆಗಳಿಗೆ ಬಳಸಲಾದ ಅರಣ್ಯ ಪ್ರದೇಶದ ಲೆಕ್ಕ, ಇನ್ನು ಖಾಸಗಿಯಲ್ಲಿ ಲೆಕ್ಕವಿಲ್ಲದೆ ಎಷ್ಟು ಅರಣ್ಯ ಭೂಮಿ ಬಳಸಲಾಗಿದೆಯೋ? ಇವತ್ತು ನಾವು ಯಾವ ಪರಿಸ್ಥಿತಿ ಎದುರಿಸುತ್ತಿದ್ದೇವೆ ಅಂದರೆ, ಪರಿಸರವೂ ಉಳಿಯಬೇಕು, ಅಭಿವೃದ್ಧಿ ಕೆಲಸಗಳೂ ಆಗಬೇಕು. ಇದು ಅಂದುಕೊಂಡಷ್ಟು ಸುಲಭವಲ್ಲ.
ಆಡಳಿತಾರೂಢ ಸರ್ಕಾರಗಳು ಎದುರಿಸುತ್ತಿರುವ ಬಹುದೊಡ್ಡ ಸವಾಲಿದು. ಅಂತರ್ಜಲ ಕುಸಿತ, ಮಾಲಿನ್ಯ ಹೆಚ್ಚಳ, ಪರಿಸರ ನಾಶ ಮುಂತಾದ ಕಾರಣಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಳ ಆಗುತ್ತಿರುವುದು ಜಗತ್ತಿನಾದ್ಯಂತ ಕಂಡುಬಂದಿರುವ ಕಳವಳಕಾರಿ ವಿದ್ಯಮಾನ. ಈ ಹಿನ್ನೆಲೆಯಲ್ಲಿಯೇ, ತಾಪಮಾನ ನಿಯಂತ್ರಣಕ್ಕೆ ವಿಶ್ವದೇಶಗಳು ಪ್ಯಾರಿಸ್ ಒಡಂಬಡಿಕೆ ಮಾಡಿಕೊಂಡಿವೆ. ಆದರೆ, ಆರ್ಥಿಕತೆ ಹಾಗೂ ಜನಸಂಖ್ಯೆ ಬೆಳೆದಂತೆಲ್ಲ ಕೆಲವು ಸಮಸ್ಯೆಗಳು ಬೇಡವೆಂದರೂ ಅನಿವಾರ್ಯವಾಗಿ ಬರುತ್ತವೆ. ಆಧುನಿಕ ಕಾಲಕ್ಕೆ ತಕ್ಕಂತೆ ಸೌಕರ್ಯಗಳನ್ನು ಒದಗಿಸದಿದ್ದರೆ ಆಗದು. ರಸ್ತೆಗಳನ್ನೇ ತೆಗೆದುಕೊಂಡರೆ, ಉತ್ತಮ ರಸ್ತೆಗಳು ದೇಶದ ಜೀವನಾಡಿ ಎಂದೇ ಗುರುತಿಸಲ್ಪಡುತ್ತವೆ.
ಆದರೆ ಉತ್ತಮ ರಸ್ತೆಗಳನ್ನು ನಿರ್ವಿುಸುವಾಗ ಅರಣ್ಯದ ಮೇಲೆ ಪರಿಣಾಮಗಳು ಆಗುತ್ತವೆ. ಯಾವುದೇ ನಿರ್ವಣದಲ್ಲಿ ಆಗುವ ಪರಿಸರ ಹಾನಿಗೆ ಪ್ರತಿಯಾಗಿ ಅಷ್ಟೇ ಪ್ರಮಾಣದ ಅರಣ್ಯ ಬೆಳೆಸಬೇಕೆಂಬ ನಿಯಮ ಇದೆ. ಆದರೆ ಕೆಲ ಸಂದರ್ಭಗಳಲ್ಲಿ ಇದು ಸೂಕ್ತವಾಗಿ ಅನುಷ್ಠಾನವಾಗುವುದಿಲ್ಲ. ಹಾಗಾದಾಗ ಆದ ಹಾನಿಯನ್ನು ಭರಿಸುವುದು ಕಷ್ಟಸಾಧ್ಯ. ಸಾಧ್ಯವಿದ್ದ ಕಡೆಗಳಲ್ಲಿ ಮರಗಿಡಗಳ ಸ್ಥಳಾಂತರವನ್ನೂ ಮಾಡಬಹುದಾಗಿದೆ.
ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ-2018ರಲ್ಲಿ ಮರಗಣತಿ ನಡೆಸಿದ್ದ ಐಐಎಸ್ಸಿಯು, ನಗರದ ಒಟ್ಟು ವಿಸ್ತೀರ್ಣದಲ್ಲಿ ಶೇ.8.6 ಭಾಗವನ್ನು ಮರಗಳು ಆವರಿಸಿವೆ; ಒಟ್ಟು 61 ಲಕ್ಷ ಮರಗಳಿವೆ ಎಂದು ತಿಳಿಸಿತ್ತು. ಈಗ ಈ ಪ್ರಮಾಣ ಇನ್ನಷ್ಟು ತಗ್ಗಿದೆ. ಪರಿಸರ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಗೆ ಸರಾಸರಿ 7-8 ಮರಗಳು ಇರಬೇಕಾಗುತ್ತದೆ. ಆದರೆ ಬೆಂಗಳೂರಲ್ಲಿ ಇರುವುದು ಪ್ರತಿ ವ್ಯಕ್ತಿಗೆ ಸರಾಸರಿ ಒಂದು ಮರ ಮಾತ್ರ. ಹಸಿರೀಕರಣವೇ ಇದಕ್ಕೆ ತಕ್ಕಮಟ್ಟಿನ ಪರಿಹಾರ. ಇದರ ಜತೆಗೆ, ಪರಿಸರ ಹಾನಿ ಆದಷ್ಟು ಕಡಿಮೆ ಆಗುವ ಹಾಗೆ ಯೋಜನೆ ರೂಪಿಸಬೇಕು. ಹಾಗೇ ಅಭಿವೃದ್ಧಿ ಎಷ್ಟಿರಬೇಕೆಂದು ನಿರ್ಧರಿಸುವ ವಿವೇಕವೂ ಹೆಚ್ಚಬೇಕು. ಸರ್ಕಾರ ಮತ್ತು ಸಮಾಜದ ಸಹಭಾಗಿತ್ವದಲ್ಲಿ ಹಸಿರುಳಿಸುವ ಕಾರ್ಯವಾಗಬೇಕು.