ಸಂಪಾದಕೀಯ| ಕರೊನಾ ದಿನಗಳು ಪಾಠವಾಗಲಿ

corona virus
Published on

ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಡೆಂಘ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಸುಮಾರು 5 ಸಾವಿರ, ರಾಜ್ಯದ ಇತರ ಭಾಗಗಳಲ್ಲಿ 4 ಸಾವಿರ ಪ್ರಕರಣಗಳು ವರದಿಯಾಗಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಜ್ವರಪೀಡಿತರು ಕಂಡು ಬರುತ್ತಿದ್ದಾರೆ. ಈ ದಿನಗಳಲ್ಲಿ ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ. ಕೇರಳದ ಆರೋಗ್ಯ ಸಚಿವರು ನಿಫಾದಿಂದ ಇಬ್ಬರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಐವರು ಸೋಂಕಿತರು ಪತ್ತೆಯಾಗಿದ್ದು, 706 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಅವರಲ್ಲಿ 77 ಮಂದಿ ಹೈ-ರಿಸ್ಕ್ ಅಪಾಯ ಹಾಗೂ 153 ಆರೋಗ್ಯ ಕಾರ್ಯಕರ್ತರು ಕಡಿಮೆ ಅಪಾಯದ ವರ್ಗದಲ್ಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಕೇರಳ ಸರ್ಕಾರ ನಿಫಾ ವೈರಸ್ ಸೋಂಕು ತಡೆಗೆ ಎಚ್ಚೆತ್ತುಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಗತ್ಯವೆನಿಸಿದ ಕಡೆ ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಿದೆ.

ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿಯಲ್ಲೂ ಸೋಂಕು ವ್ಯಾಪಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಆದರೆ ಈ ಎಚ್ಚರಿಕೆ ಕ್ರಮ ಔಪಚಾರಿಕವಾಗಬಾರದು. ಕರೊನಾ ದಿನಗಳಲ್ಲಿ ಎದುರಾದ ಸಮಸ್ಯೆಗಳು ನಿಫಾ ಸೋಂಕು ಕಾಣಿಸಿಕೊಂಡಿರುವ ಈ ದಿನಗಳಲ್ಲಿ ಪಾಠವಾಗಬೇಕು. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ಪರಿಸ್ಥಿತಿ ನಿರ್ವಣವಾಗಬಾದರು. ನಿಫಾ ಸೋಂಕು ಹರಡುವುದನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯದ ಜನರಿಗೆ ತಿಳಿವಳಿಕೆ ನೀಡಬೇಕು. ಕೇರಳದಲ್ಲಿ ಹೆಚ್ಚುತ್ತಿರುವ ನಿಫಾ ಸೋಂಕು ಕರ್ನಾಟಕಕ್ಕೂ ಪ್ರವೇಶವಾಗುವ ಸಾಧ್ಯತೆಗಳು ಇಲ್ಲದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೇರಳದ ಪರಿಸ್ಥಿತಿ ಕರ್ನಾಟಕಕ್ಕೆ ಇನ್ನೂ ಬಂದಿಲ್ಲ ಎನ್ನುವ ಉದಾಸೀನ ಮನೋಭಾವ ಸಲ್ಲದು. ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯನ್ನು ಸಜ್ಜುಗೊಳಿಸಬೇಕು.

ಕರ್ನಾಟಕದಲ್ಲಿ ಕರೊನಾ ಪ್ರಕರಣಗಳು ಪತ್ತೆಯಾದಾಗ ಚಾಮರಾಜ ನಗರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳು ಹಸಿರು ಪ್ರದೇಶದಲ್ಲಿದ್ದವು. ಚಾಮರಾಜನಗರ ಗಡಿ ಜಿಲ್ಲೆಯಾಗಿದ್ದರೂ ಮೊದಲ ಹಂತದಲ್ಲಿ ಒಂದೇ ಒಂದು ಕರೊನಾ ಪ್ರಕರಣ ಇರಲಿಲ್ಲ. ಆದರೆ ನಂತರದ ಪರಿಸ್ಥಿತಿ ಏನಾಯಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಚಾಮರಾಜ ನಗರದಂತೆ ಹಸಿರು ಪ್ರದೇಶದಲ್ಲಿದ್ದ ಹಲವು ಜಿಲ್ಲೆಗಳಲ್ಲೂ ನಂತರ ಸಮಸ್ಯೆಗಳು ಎದುರಾದವು. ಇಡೀ ರಾಜ್ಯದಲ್ಲಿ ಕರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸಮಸ್ಯೆ ಎದುರಿಸಿದರು. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾಕಷ್ಟು ಸಾವು ಸಂಭವಿಸಿದ ವರದಿಗಳೂ ಬಂದವು.

ಸರ್ಕಾರದ ಜವಾಬ್ದಾರಿ ಜತೆಗೆ ಸಾರ್ವಜನಿಕರ ಹೊಣೆಗಾರಿಕೆಯೂ ಇದೆ. ಸೋಂಕು ಹರಡದಂತೆ ನೋಡಿಕೊಳ್ಳಲು ಸರ್ಕಾರ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು. ಇನ್ನೂ ನಮ್ಮ ರಾಜ್ಯಕ್ಕೆ ಬಂದಿಲ್ಲ, ನಮ್ಮ ಜಿಲ್ಲೆಗೆ ಬಂದಿಲ್ಲ... ಎನ್ನುವ ಉದಾಸೀನ ಮನೋಭಾವದಿಂದ ಹೊರಬಂದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು. ಕರೊನಾ ನಂತರದ ದಿನಗಳಲ್ಲಿ ಆರೋಗ್ಯದ ವಿಚಾರದಲ್ಲಿ ಸಾರ್ವಜನಿಕರಲ್ಲಿ ಕಾಳಜಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net