

ದೇಶಾದ್ಯಂತ ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ವೈದ್ಯಕೀಯ ಅಗತ್ಯತೆಗಳು, ಸವಾಲುಗಳು ಕೊಂಚ ಭಿನ್ನ ಇವೆ. ಸೋಂಕಿನ ಮೊದಲನೇ ಅಲೆ ಕಾಣಿಸಿಕೊಂಡಾಗ ಭಾರತ ಅತ್ಯಲ್ಪ ಅವಧಿಯಲ್ಲೇ ಪಿಪಿಇ ಕಿಟ್, ಮುಖಗವಸು ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿತ್ತು. ಆದರೆ, ಈ ಬಾರಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹೆಚ್ಚಿದೆ. ರೋಗಿಗಳು ಪ್ರಾಣವಾಯು ಕೊರತೆಯಿಂದ ಮೃತಪಟ್ಟ ಅಥವಾ ನರಳಿದ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಸಾಮಾನ್ಯ ಸ್ಥಿತಿಯಲ್ಲಿ ಆಮ್ಲಜನಕ ಸಿಲಿಂಡರ್ಗಳಿಗೆ ಇಷ್ಟೊಂದು ಬೇಡಿಕೆ ಇರುವುದಿಲ್ಲ. ಈಗಿನ ಸ್ಥಿತಿ ಭಿನ್ನವಾಗಿದೆ. ಕರೊನಾ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಬೇಕಾದ, ಇತರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕಾದ ತುರ್ತು ಒತ್ತಡ ಸರ್ಕಾರದ ಮೇಲಿದೆ. ಪ್ರಭುತ್ವ ಇದನ್ನು ಅರ್ಥಮಾಡಿಕೊಂಡು ಸ್ಪಂದಿಸುತ್ತಿರುವುದು ಸಮಾಧಾನಕರ ಬೆಳವಣಿಗೆ.
ಪಿಎಂ ಕೇರ್ಸ್ ಫಂಡ್ನ ಹಣಕಾಸು ನೆರವಿನಲ್ಲಿ ದೇಶದಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿರುವುದು ಮಹತ್ವದ ನಿರ್ಧಾರವೇ ಸರಿ. ಎಲ್ಲ ರಾಜ್ಯಗಳೂ ವೈದ್ಯಕೀಯ ಆಮ್ಲಜನಕ ಹೆಚ್ಚು ಪ್ರಮಾಣದಲ್ಲಿ ಪೂರೈಸುವಂತೆ ಆಗ್ರಹಿಸಿವೆ. ಹಾಗಾಗಿ, ವಿವಿಧ ರಾಜ್ಯಗಳ ಆಯ್ದ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಈ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಆರೋಗ್ಯ ಸಚಿವಾಲಯ ಖರೀದಿ ಮಾಡಲಿದೆ. ವೈದ್ಯಕೀಯ ಆಮ್ಲಜನಕ ಘಟಕಗಳ ಉತ್ಪಾದನೆಗಾಗಿ 201.58 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇಂಥ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.ಲಸಿಕೆ ಕುರಿತು ಯಾವುದೇ ಗೊಂದಲ, ಭಯ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ‘ಸೋಂಕಿನ ಮೊದಲ ಅಲೆಯ ಸವಾಲನ್ನು ಭಾರತ ಯಶಸ್ವಿಯಾಗಿ ಗೆದ್ದಿದೆ. ಈ ಹೊತ್ತಲ್ಲೂ ದೇಶ ಒಗ್ಗಟ್ಟಿನಿಂದ, ಕಾಳಜಿಪೂರ್ವಕವಾಗಿ ಸಾಗುತ್ತ ಈ ಬಿಕ್ಕಟ್ಟನ್ನೂ ನಿವಾರಿಸಿಕೊಳ್ಳಬೇಕಿದೆ’ ಎಂಬ ಪ್ರಧಾನಿ ಕಳಕಳಿಯನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಸಂಕಷ್ಟವನ್ನು ಮೀರಿ ನಿಲ್ಲುವ ಆತ್ಮಸ್ಥೈರ್ಯ ಹೆಚ್ಚಬಹುದು.
ಎಷ್ಟೋ ಬಾರಿ ಸವಾಲುಗಳ ರೂಪದಲ್ಲೇ ಅವಕಾಶಗಳು ಬರುತ್ತವೆ. ದೇಶದ ಆರೋಗ್ಯ ಮೂಲವ್ಯವಸ್ಥೆಯನ್ನು ಸದೃಢ ಮಾಡಲು ಕರೊನಾ ನಿಮಿತ್ತವಾಗಿದೆ ಎಂದು ಭಾವಿಸಿಕೊಂಡು, ಮುಂದಡಿ ಇಡಬೇಕಿದೆ. ದೇಶದ ವೈದ್ಯಕೀಯ ರಂಗ ತುರ್ತು ಪರಿಸ್ಥಿತಿಗಳಿಗೆ ಹೇಗೆ ಸನ್ನದ್ಧವಾಗಬೇಕು ಎಂಬುದಕ್ಕೂ ಈಗಿನ ಸನ್ನಿವೇಶದ ಮೂಲಕ ಪಾಠ ಕಲಿತಂತಾಗಿದೆ. ಜಾಗತಿಕವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಗರಿಷ್ಠ ವೇಗದಲ್ಲಿ ಲಸಿಕೆ ನೀಡಿರುವ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಈವರೆಗೆ 14 ಕೋಟಿಗೂ ಅಧಿಕ ಡೋಸ್ ನೀಡಲಾಗಿದ್ದು, ಮೇ 1ರಿಂದ ಈ ಅಭಿಯಾನ ಮತ್ತಷ್ಟು ತೀವ್ರತೆ ಪಡೆಯಲಿದೆ. ಆದರೆ, ಆಮ್ಲಜನಕ ಹಾಗೂ ಇತರ ವೈದ್ಯಕೀಯ ಸೌಕರ್ಯಗಳ ಕೊರತೆ ಆಗದಂತೆ ನಿಗಾ ವಹಿಸುವುದು ಈಗಿನ ಅಗತ್ಯ. ಅದು ಬರೀ ಕೇಂದ್ರವಲ್ಲ, ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಹೌದು. ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಸೂಕ್ತ ಪ್ರಮಾಣದಲ್ಲಿ ಇದ್ದರೂ, ಅದರ ಪೂರೈಕೆ, ವಿತರಣೆ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಿಕೊಳ್ಳುವುದು ಆದ್ಯತೆಯಾಗಬೇಕು. ಅಷ್ಟೇ ಅಲ್ಲ, ಔಷಧಗಳ ದಾಸ್ತಾನು, ಮೂಲಸೌಕರ್ಯದ ವಿಷಯದಲ್ಲೂ ನಿರ್ಲಕ್ಷ್ಯ ಮಾಡುವಂತಿಲ್ಲ. ಹಲವು ರಾಜ್ಯಗಳಲ್ಲಿ ‘ಆರೋಗ್ಯ ತುರ್ತು ಪರಸ್ಥಿತಿ’ಯ ಸನ್ನಿವೇಶವಿದ್ದು, ಅದನ್ನು ಪರಿಣಾಮಕಾರಿಯಾಗಿ ಎದುರಿಸಬೇಕಿದೆ. ಆ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಈಗಿನ ಅಗತ್ಯ.