ವಂಚನೆಗೆ ಕಡಿವಾಣ: ಚೀನೀ ಲೋನ್ ಆ್ಯಪ್​ ಜಾಲ

Dragon
Published on

ಸುಲಭದಲ್ಲಿ ಸಾಲ ನೀಡಿ ನಂತರ ಹೆಚ್ಚು ಬಡ್ಡಿ ವಸೂಲಿ ಮೂಲಕ ಗ್ರಾಹಕರಿಗೆ ಕಿರುಕುಳ ನೀಡುವ ಚೀನಾ ಮೂಲದ 94 ಪರ್ಸನಲ್ ಲೋನ್ ಅಪ್ಲಿಕೇಶನ್​ಗಳು ಹಾಗೂ 138 ಬೆಟ್ಟಿಂಗ್ ಅಪ್ಲಿಕೇಶನ್​ಗಳನ್ನು ನಿಷೇಧಿಸುವ ಕ್ರಮವನ್ನು ಕೇಂದ್ರ ಸರ್ಕಾರವು ಕಳೆದ ಫೆಬ್ರುವರಿ 5ರಂದು ಕೈಗೊಂಡಿತ್ತು. ಆದರೂ ಈ ಚೀನಿ ಆಪ್​ಗಳ ಹಾವಳಿ ಮುಂದುವರಿದಿರುವುದರಿಂದ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದೇ ವೇಳೆ ಬಳಕೆದಾರರ ಸಂಪರ್ಕಗಳು ಮತ್ತು ಚಿತ್ರಗಳನ್ನು ಪ್ರವೇಶಿಸಲು ವೈಯಕ್ತಿಕ ಸಾಲಗಳ ಅಪ್ಲಿಕೇಶನ್​ಗಳಿಗೆ (ಪರ್ಸ್​ನಲ್ ಲೋನ್ ಆಪ್) ಅನುಮತಿ ನೀಡದಿರುವ ನೀತಿಯನ್ನು ಬರುವ ಮೇ 31ರಿಂದ ಜಾರಿಗೊಳಿಸಲು ಮಾಹಿತಿ ತಂತ್ರಜ್ಞಾನ ದೈತ್ಯ ಗೂಗಲ್ ಮುಂದಾಗಿರುವುದು ಚೀನಿ ಸಾಲ ಆಪ್​ಗಳ ವಂಚನೆ ತಡೆಯಲು ಅನುಕೂಲಕರವಾಗಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿ ಪ್ರಕಾರ ಲೋನ್ ಆಪ್ ಮೂಲಕ ಸಾಲ ಒದಗಿಸುವ ವ್ಯಕ್ತಿಗಳು ಹಾಗೂ ಕಂಪನಿಗಳು ಅಗತ್ಯ ಅನುಮತಿ ಪಡೆದುಕೊಳ್ಳುವುದು ಹಾಗೂ ನೋಂದಣಿ ಮಾಡಿಕೊಳ್ಳುವುದು ಈಗ ಕಡ್ಡಾಯವಾಗಿದೆ. ವೈಯಕ್ತಿಕ ಸಾಲಗಳನ್ನು ನೀಡುವ ಅಥವಾ ಸಕ್ರಿಯಗೊಳಿಸುವ ಅಪ್ಲಿಕೇಶನ್​ಗಳು ಬಳಕೆದಾರರ ಗೌಪ್ಯ ಮಾಹಿತಿ ಪಡೆದುಕೊಳ್ಳುವುದನ್ನು ತಡೆಯಲು ಗೂಗಲ್ ತನ್ನ ವೈಯಕ್ತಿಕ ಸಾಲಗಳ ನೀತಿಯನ್ನು ಪರಿಷ್ಕರಿಸುತ್ತಿದೆ. ಬಳಕೆದಾರರನ್ನು ದಾರಿತಪ್ಪಿಸುವ ಅಥವಾ ಅಪಾಯಕಾರಿ ಹಣಕಾಸು ಉತ್ಪನ್ನ ಮತ್ತು ಸೇವೆಗಳಿಗೆ ಒಡ್ಡುವ ವೈಯಕ್ತಿಕ ಸಾಲದ ಅಪ್ಲಿಕೇಶನ್​ಗಳ ಮೇಲೆ ನಿಗಾ ವಹಿಸಲು ಅದು ಮುಂದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನಿಂದ (ಆರ್​ಬಿಐ) ಅನುಮತಿ ಪಡೆದಿರುವ ಕುರಿತ ದಾಖಲೆಗಳನ್ನು ಒದಗಿಸಿದರೆ ಮಾತ್ರ ಪರ್ಸನಲ್ ಲೋನ್ ಆಪ್​ಗಳಿಗೆ ಗೂಗಲ್ ಸ್ಟೋರ್​ನಲ್ಲಿ ಅವಕಾಶ ಕಲ್ಪಿಸಲು ತೀರ್ಮಾನ ಕೈಗೊಂಡಿದೆ. ಲೋನ್ ಅಪ್ಲಿಕೇಶನ್​ಗಳು ನೇರವಾಗಿ ಸಾಲಗಳನ್ನು ವಿತರಿಸುವ ಬದಲು ಬಳಕೆದಾರರು ಮತ್ತು ಬ್ಯಾಂಕ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಸಹಯೋಗ ಹೊಂದಿರುವ ನೋಂದಾಯಿತ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್​ಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದೂ ಗೂಗಲ್ ತಿಳಿಸಿದೆ.

ಪರ್ಸನಲ್ ಲೋನ್ ಆಪ್ ಮೂಲಕ ಸಾಲ ಪಡೆಯುವುದು ಅಪಾಯಕಾರಿ ಹಾಗೂ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ಅರಿವು ಸಾಕಷ್ಟು ಜನರಿಗಿಲ್ಲ. ಕೈಯಲ್ಲೇ ಇರುವ ಮೊಬೈಲ್​ಫೋನ್ ಮೂಲಕ ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದು ಮೋಸದ ಜಾಲಕ್ಕೆ ಈಡಾಗುತ್ತಾರೆ. ಇನ್ನು ಕೆಲವರಿಗೆ ಇದರ ಅಪಾಯ ಗೊತ್ತಿದ್ದರೂ ಅನಿವಾರ್ಯ ಹಾಗೂ ಒತ್ತಡದ ಪರಿಸ್ಥಿತಿಗಳಲ್ಲಿ ಸಾಲ ಪಡೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಲೋನ್ ಆಪ್ ಡೌನ್​ಲೋಡ್ ಮಾಡಿಕೊಂಡಾಗ ಮೊಬೈಲ್​ಫೋನ್​ನಲ್ಲಿನ ಎಲ್ಲ ಮಾಹಿತಿಗೂ ಕನ್ನ ಹಾಕಲಾಗುತ್ತದೆ. ಹೆಚ್ಚಿನ ಬಡ್ಡಿ ಪಾವತಿಸದವರಿಗೆ ನಂತರ ಬ್ಲಾ್ಯಕ್​ವೆುೕಲ್ ಮಾಡಿ ಕಿರುಕುಳ ನೀಡಲಾಗುತ್ತದೆ. ಸಾಲ ತೀರಿಸದ ವಂಚಕ ಎಂಬಂತಹ ಕೀಳುಮಟ್ಟದ ಸಂದೇಶಗಳನ್ನು ಪರಿಚಯದವರಿಗೆ ಕಳುಹಿಸಲಾಗುತ್ತದೆ. ಇದರಿಂದಾಗಿ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಜರುಗಿವೆ. ಈಗ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕದಿಯದಿರುವಂತೆ ಕ್ರಮ ಕೈಗೊಳ್ಳಲು ಗೂಗಲ್ ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ, ಲೋಪ್ ಆಪ್ ಕಂಪನಿಗಳ ವಂಚನೆಗೆ ಕಡಿವಾಣ ಹಾಕಲು ಸಾಧ್ಯವಾಗಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net