

ತುಮಕೂರು: ಖಾಸಗಿ ಬಸ್ ಹಾಗೂ ಇನ್ನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸತ್ತವರ ಸಂಖ್ಯೆ ಐದಕ್ಕೇರಿದೆ. ಎರಡು ದಂಪತಿ ಜೊತೆಗೆ ಒಂದು ಮಗು ಕೂಡ ಸಾವಿಗೀಡಾಗಿದೆ.
ತುಮಕೂರಿನ ಹಿರೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಖಾಸಗಿ ಬಸ್ ಹಾಗೂ ಇನ್ನೋವಾ ಕಾರು ಅಪಘಾತಕ್ಕೆ ಈಡಾಗಿದ್ದು, ಮೂಲತಃ ಚಳ್ಳಕೆರೆ ತಾಲೂಕಿನ ಗೋವಿಂದ ನಾಯಕ (58), ಅವರ ಪತ್ನಿ ತಿಪ್ಪಮ್ಮ (52) ಸಾವಿಗೀಡಾಗಿದ್ದಾರೆ. ಇನ್ನಿಬ್ಬರ ವಿಳಾಸ ಪತ್ತೆಯಾಗಿಲ್ಲ.
ಗೋವಿಂದನಾಯಕ ಅವರು ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದರು. ಬೆಂಗಳೂರಿನಿಂದ ಚಳ್ಳಕೆರೆಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ರಸ್ತೆ ವಿಭಜಕದಿಂದ ಎಗರಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿತ್ತು. ಸ್ಥಳಕ್ಕೆ ತುಮಕೂರು ಎಎಸ್ಪಿ ಮರಿಯಪ್ಪ ಹಾಗೂ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದಿಂದಾಗಿ ಸುಮಾರು 2 ಗಂಟೆ ಸಂಚಾರ ದಟ್ಟಣೆ ಆಗಿತ್ತು.