ಸಂಪಾದಕೀಯ| ಬಹುಆಯಾಮದ ತಂತ್ರ ಅಗತ್ಯ

india_china_dp
Published on

ತನ್ನ ಒಡಲಲ್ಲೇ ಹತ್ತಾರು ಸಮಸ್ಯೆ, ಅಪಾಯ, ವಿವಾದಗಳನ್ನು ತುಂಬಿಕೊಂಡಿರುವ ಚೀನಾ ಇನ್ನೊಂದು ದೇಶದ ಶಾಂತಿಭಂಗ ಮಾಡುವಲ್ಲಿ ಸದಾ ಉತ್ಸುಕವಾಗಿ ಇರುತ್ತದೆ. ಲಡಾಖ್​ನಲ್ಲಿ ಘರ್ಷಣೆ ನಡೆಸಿ, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿರುವ ಡ್ರಾ್ಯಗನ್ ರಾಷ್ಟ್ರ ತನ್ನ ಕುತಂತ್ರಗಳಿಗೆ ಭಾರತ ಸಮರ್ಥ ಉತ್ತರ ನೀಡುತ್ತಿರುವಂತೇ ಚಿಂತಾಕ್ರಾಂತವಾಗಿದೆ. ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಚೀನಾ ಹೂಡಿದ ತಂತ್ರ ಒಂದೆರಡಲ್ಲ. ನೇಪಾಳವನ್ನು ಪ್ರಚೋದಿಸಿ, ಅದು ಗಡಿ ಕ್ಯಾತೆ ತೆಗೆಯುವಂತೆ ಮಾಡಿತು. ಮತ್ತೊಂದೆಡೆ, ಎಂದಿನಂತೆ ಪಾಕಿಸ್ತಾನಕ್ಕೆ ಸಹಕಾರ ನೀಡುತ್ತ ಭಾರತವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಲು ಬೆಂಗಾವಲಾಗಿ ನಿಂತುಕೊಂಡಿತು. ಲಡಾಖ್ ಗಡಿ ಭಾಗದಲ್ಲಿ ಕಾಲುಕೆರೆದು ಜಗಳಕ್ಕೆ ಬರುವ ಮೂಲಕ, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಚೀನಾಕ್ಕೆ ತಕ್ಕ ಏದುರೇಟು ನೀಡುತ್ತಿದ್ದು, ಭಾರತದಿಂದ ಅದು ಇಂಥ ಕ್ರಮಗಳನ್ನೇ ನಿರೀಕ್ಷಿಸಿರಲಿಲ್ಲ. ದೋಕ್ಲಾಂ ಬಿಕ್ಕಟ್ಟಿನ ಸಮಯದಲ್ಲಿ ರಾಜತಾಂತ್ರಿಕ ಗೆಲುವು ದಾಖಲಿಸಿದ್ದ ಭಾರತ, ಈ ಬಾರಿ ಆರ್ಥಿಕ, ವಾಣಿಜ್ಯ ರಂಗದಲ್ಲಿ ಸೂಕ್ತ ಉತ್ತರ ನೀಡಿದೆ. ಚೀನಾದ 59 ಆಪ್​ಗಳನ್ನು ನಿಷೇಧಿಸುವ ಮೂಲಕ ಉದ್ವಿಗ್ನತೆ ಮತ್ತು ವ್ಯಾಪಾರಸಂಬಂಧ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಇದರ ಬೆನ್ನಲ್ಲೇ, ದೂರಸಂಪರ್ಕ ಜಾಲಗಳನ್ನು 5ಜಿಗೆ ಉನ್ನತೀಕರಿಸಲು ಚೀನಾದ ಉಪಕರಣಗಳನ್ನು ಬಳಸದಿರಲು ಸರ್ಕಾರ ನಿರ್ಧರಿಸಿರುವುದು ಮಹತ್ವದ ಹೆಜ್ಜೆಯೇ ಸರಿ. ಭಾರತದ ಡಿಜಿಟಲ್ ದಾಳಿಗೆ ತಬ್ಬಿಬ್ಬಾಗಿರುವ ಚೀನಾ, ಹತಾಶೆಯ ಹೇಳಿಕೆಗಳನ್ನು ನೀಡುತ್ತಿದೆ. ಭಾರತವು ಚೀನಾದ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ನಿಜವಾದರೂ, ಸ್ವಾವಲಂಬನೆಗೂ ಒತ್ತು ಕೊಡುತ್ತಿದೆ. ಅಲ್ಲದೆ, ದೇಶದಲ್ಲಿ ಜನರೂ ಸ್ವಯಂಪ್ರೇರಿತರಾಗಿ ಚೀನಾ ಉತ್ಪನ್ನಗಳ ನಿಷೇಧಕ್ಕೆ ಮುಂದಾಗಿದ್ದಾರೆ. ಅದಕ್ಕೆ ಪರ್ಯಾಯವಾಗಿ ಭಾರತೀಯ ಉತ್ಪನ್ನಗಳೇ ಸಿದ್ಧಗೊಂಡು, ಮಾರುಕಟ್ಟೆ ಪ್ರವೇಶಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಅಮೆರಿಕದೊಂದಿಗೆ ಈಗಾಗಲೇ ತೀವ್ರ ಪ್ರಮಾಣದ ವಾಣಿಜ್ಯ ಸಮರ ಹೊಂದಿರುವ ಚೀನಾ ಪ್ರಸಕ್ತ ತನ್ನದೇ ತಪು್ಪ ಮತ್ತು ಅಹಂಕಾರದ ನೀತಿಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಹಿನ್ನಡೆ ಸಾಧಿಸುತ್ತಿದೆ.

ಭಾರತದಲ್ಲಿ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಸಾಧಿಸಿಕೊಂಡ ಚೀನಾ ಗಡಿವಿವಾದದ ನೆಪದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವುದು ಅಕ್ಷಮ್ಯ. ಉಭಯ ದೇಶಗಳ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯಲ್ಲಿ ಏರ್ಪಟ್ಟ ಒಪ್ಪಂದಗಳನ್ನು ಅದು ಮತ್ತೆ ಮತ್ತೆ ಉಲ್ಲಂಘಿಸುವ ಮೂಲಕ ಧಾಷ್ಟರ್್ಯ ತೋರುತ್ತಿದೆ. ಸದ್ದಿಲ್ಲದೆ ಸೇನಾ ಜಮಾವಣೆ ಮಾಡುತ್ತಿದೆ. ಚೀನಾದ ಈ ವರ್ತನೆಯನ್ನು ಅಂತಾರಾಷ್ಟ್ರೀಯ ವಲಯಕ್ಕೆ ಮನದಟ್ಟು ಮಾಡಿಕೊಡುತ್ತಿರುವ ಭಾರತ, ಈ ಮುಂದೆಯೂ ಆ ರಾಷ್ಟ್ರವನ್ನು ಬಹುಆಯಾಮ ಮತ್ತು ರಂಗಗಳಲ್ಲಿ ಕಟ್ಟಿಹಾಕಲು ಯತ್ನಿಸಬೇಕು. ಏಕೆಂದರೆ, ಡಿಜಿಟಲ್ ದಾಳಿಯಿಂದ ಡ್ರಾ್ಯಗನ್ ರಾಷ್ಟ್ರ ಪಾಠ ಕಲಿತಂತಿಲ್ಲ. ಹಾಗಾಗಿ, ರಾಜತಾಂತ್ರಿಕವಾಗಿಯೂ ಸಮರ್ಥ ಉತ್ತರ ನೀಡಬೇಕಿದೆ. ಆಗಲೇ ಚೀನಾದ ತಂಟೆಯನ್ನು, ಅದರ ಷಡ್ಯಂತ್ರಗಳನ್ನು ವಿಫಲಗೊಳಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net