ಸಂಪಾದಕೀಯ| ನಂಬಲರ್ಹವಲ್ಲದ ದೇಶ

INDO-CHINA FLAGS
Published on

ಭಾರತ ಮತ್ತು ಚೀನಾದ ನಡುವಣ ವಿವಾದಿತ ಪ್ರದೇಶವಾದ ಗಲ್ವಾನ್ ಕಣಿವೆಯಲ್ಲಿ ಈಚಿನ ಕೆಲದಿನಗಳಿಂದ ಬಿಕ್ಕಟ್ಟು ಮುಂದುವರಿದಿರುವುದು ಗೊತ್ತೇ ಇದೆ. ಚೀನೀ ಸೈನಿಕರ ತಂಟೆಕೋರತನ ಮತ್ತು ಅಮಾನವೀಯ ನಡೆಯಿಂದಾಗಿ ಭಾರತದ 20 ಸೈನಿಕರು ಹುತಾತ್ಮರಾಗಬೇಕಾಯಿತು. ಚೀನಾ ಕಡೆಯಲ್ಲೂ ಸಾವುನೋವು ಸಂಭವಿಸಿದ್ದರೂ ಆ ಬಗ್ಗೆ ಬಾಯ್ಬಿಡುತ್ತಿಲ್ಲ ಎಂಬುದು ಆ ದೇಶದ ರಹಸ್ಯದ ಮುಸುಕಿಗೆ ಸಾಕ್ಷಿ. ಗಲ್ವಾನ್ ಸಂಘರ್ಷದ ಬಳಿಕ ಎರಡೂ ದೇಶದ ಸೇನಾಧಿಕಾರಿಗಳು ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆದು, ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕೆಂಬ ಬಗ್ಗೆ ಸಮ್ಮತಿಸಲಾಯಿತು.

ಹಾಗೇ, ಉಭಯ ಕಡೆಗಳವರೂ ಆ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಬಗ್ಗೆಯೂ ಸಭೆಗಳಲ್ಲಿ ಒಪ್ಪಿಕೊಳ್ಳಲಾಯಿತು. ಆದರೆ ಈಗ ಬರುತ್ತಿರುವ ವರದಿಗಳು ಚೀನಾದ ಕುತಂತ್ರ ಬುದ್ಧಿ ಮತ್ತು ಮಾತಿಗೆ ತಪು್ಪವ ಅದರ ಎಂದಿನ ಚಾಳಿಯನ್ನು ಅನಾವರಣಗೊಳಿಸುತ್ತಿವೆ. ಗಡಿ ಭಾಗದಲ್ಲಿ ಚೀನಾ ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಮತ್ತು ಟ್ಯಾಂಕ್​ನಂಥ ಯುದ್ಧೋಪಕರಣಗಳನ್ನು ಜಮಾಯಿಸುತ್ತಿರುವುದು ಉಪಗ್ರಹ ಚಿತ್ರಗಳ ಮೂಲಕ ಬಹಿರಂಗವಾಗಿದೆ. ಅಂದರೆ, ಉಭಯ ದೇಶಗಳ ನಡುವಣ ಮಾತುಕತೆಯಲ್ಲಿ ಒಪ್ಪಿಕೊಳ್ಳಲಾದ ಅಂಶಗಳನ್ನು ಚೀನಾ ಪಾಲಿಸುತ್ತಿಲ್ಲ ಎಂದಾಯಿತು. ಚೀನಾದ ಇಂಥ ನಡೆ ಹೊಸದೇನಲ್ಲ. ಉದಾಹರಣೆಗೆ ಹೇಳುವುದಾದರೆ- ಗಲ್ವಾನ್ ಗಡಿ ಪ್ರದೇಶದಲ್ಲಿ ಎರಡೂ ಕಡೆಯ ಸೈನಿಕರು ಶಸ್ತ್ರಾಸ್ತ್ರ ಹೊಂದಿರಬಾರದೆಂಬ ನಿಯಮವಿದೆ. ಈ ನಿಯಮಕ್ಕೆ ಬದ್ಧರಾಗಿ, ನಮ್ಮ ಭಾಗದಲ್ಲಿ ಚೀನಾ ನಿರ್ವಿುಸಿದ ಸೇನಾ ಶಿಬಿರವೊಂದರ ತೆರವು ವಿಚಾರವಾಗಿ ಭಾರತದ ಸೈನಿಕರು ವಿಚಾರಿಸಲು ಮುಂದಾದಾಗ ಚೀನಾ ಕಡೆಯವರು ಬಡಿಗೆ, ಮೊಳೆಗಳನ್ನು ಜೋಡಿಸಿದ ಉಕ್ಕಿನ ಲಾಠಿ ಮತ್ತು ಇತರ ಮಾರಕಾಸ್ತ್ರಗಳ ಮೂಲಕ ದಾಳಿ ನಡೆಸುವ ಮೂಲಕ ಪೈಶಾಚಿಕತೆ ಮೆರೆದರು.

ಚೀನಾದ ಇಂಥ ನಯವಂಚಕತನದಿಂದಾಗಿಯೇ ಭಾರತ ಕೂಡ ಈಗ ತನ್ನ ಗಡಿನೀತಿಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಅಗತ್ಯಬಿದ್ದಾಗ ತಿರುಗೇಟು ನೀಡಲು ಸಹ ಸಜ್ಜಾಗಿದೆ. ತಾವೇ ಒಪ್ಪಿಕೊಂಡ ನೈತಿಕತೆಯ ಗೆರೆಯನ್ನು ಮೀರುವವರಿಗೆ ಕಠಿಣ ಭಾಷೆಯಲ್ಲಿ ಉತ್ತರ ನೀಡಬೇಕಾದುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ, ಗಡಿಯಲ್ಲಿರುವ ಸೈನಿಕರು ಶಸ್ತ್ರಾಸ್ತ್ರ ಹೊಂದಿರಬಾರದು ಎಂಬ ನಿಯಮಕ್ಕೆ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಭಾರತ, ಅಸಾಧಾರಣ ಸನ್ನಿವೇಶಗಳಲ್ಲಿ ಶಸ್ತ್ರ ಬಳಕೆಗೆ ಕಮಾಂಡರ್ ಮಟ್ಟದ ಅಧಿಕಾರಿಗಳು ನಿರ್ಣಯ ಕೈಗೊಳ್ಳಬಹುದು ಮತ್ತು ತುರ್ತಸ್ಥಿತಿಯಲ್ಲಿ ಆಯಾ ಸಂದರ್ಭಕ್ಕೆ ಹೊಂದಿಕೊಂಡು ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವಕಾಶ ನೀಡಿದೆ. ಚೀನಾದ ಇಂಥ ಬೆನ್ನಿಗೆ ಇರಿಯುವ ನಡೆ ಹೊಸದೇನಲ್ಲ. 1962ರಲ್ಲಿಯೂ ನಯವಾಗಿ ಮಾತಾಡುತ್ತಲೇ ಭಾರತದ ಮೇಲೆ ಆಕ್ರಮಣವೆಸಗಿತು. ಹೀಗಾಗಿ ಭಾರತ ಕೂಡ ಈಗ ಚೀನಾ ಜತೆ ಬಿಗಿಯಾಗಿಯೇ ವ್ಯವಹರಿಸುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಅದು ಅನಿವಾರ್ಯ ಕೂಡ. ಆ ದೇಶದ ಇಂಥ ನೀತಿನಿಲುವುಗಳಿಂದಾಗಿ ಭಾರತದ ಜನರಲ್ಲಿಯೂ ಆಕ್ರೋಶ ಮಡುಗಟ್ಟಿದ್ದು, ಚೀನೀ ವಸ್ತುಗಳ ಬಹಿಷ್ಕಾರದ ಆಂದೋಲನದ ರೂಪದಲ್ಲಿ ಅದು ಹೊರಹೊಮ್ಮುತ್ತಿದೆ. ಈ ಕ್ರಮ ಎಷ್ಟು ಪ್ರಯೋಜನಕಾರಿಯಾದೀತು, ಚೀನಾವನ್ನು ಎಷ್ಟರಮಟ್ಟಿಗೆ ಬಗ್ಗಿಸೀತು ಎಂಬುದೆಲ್ಲ ಕ್ರಮೇಣ ಗೊತ್ತಾಗಬೇಕಾದ ಸಂಗತಿಯಾದರೂ, ಹೀಗೆ ಏಕ ಉದ್ದೇಶಕ್ಕೆ ಜನರು ಒಗ್ಗಟ್ಟು ತೋರುವುದನ್ನು ನಿರ್ಲಕ್ಷಿಸುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net