

ದೇಶದ ಎಲ್ಲ ವಲಯ, ರಂಗಗಳ ದೃಷ್ಟಿ ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನತ್ತ ನೆಟ್ಟಿದೆ. ಕರೊನಾ ಸೃಷ್ಟಿಸಿದ ಹಾನಿಯ ಬಳಿಕ ಆರ್ಥಿಕತೆಯ ಚೇತರಿಕೆಗೆ ಬಜೆಟ್ ಯಾವೆಲ್ಲ ಘೋಷಣೆ ಮಾಡಲಿದೆ ಎಂಬ ಕುತೂಹಲದ ನಡುವೆಯೇ ಶುಕ್ರವಾರ ಸಂಸತ್ತಿನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಭರವಸೆ ಮೂಡಿಸಿದೆ. ಆರ್ಥಿಕತೆ ಮತ್ತೆ ಏರುಗತಿಯಲ್ಲಿ ಸಾಗುವ ಬಗ್ಗೆ ವಿಶ್ವಾಸ ಮೂಡಿಸಿದೆ. ಮಾರ್ಚ್ 31ಕ್ಕೆ ಕೊನೆಗೊಳ್ಳುವ ಈ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡ 7.5ರಷ್ಟು ತಗ್ಗುವ ನಿರೀಕ್ಷೆ ಇದೆ. ಆದರೆ, ಆರ್ಥಿಕತೆಯಲ್ಲಿ ಹಿಮ್ಮುಖ ಬೆಳವಣಿಗೆ ಬೇಗನೆ ಕೊನೆಗಾಣಲಿದ್ದು, 2021-22ರಲ್ಲಿ ಅರ್ಥಿಕ ಬೆಳವಣಿಗೆ ದರ ಶೇ.11ಕ್ಕೆ ಹೆಚ್ಚಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕಳೆದ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ ದಾಖಲೆಯ ಶೇ.23.9ರಷ್ಟು ಕುಸಿತ ಕಂಡಿತ್ತು. ಎರಡನೇ ತ್ರೖೆಮಾಸಿಕದಲ್ಲಿ ಶೇ.7.5ರಷ್ಟು ಕುಗ್ಗಿತ್ತು. 2020-21ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಶೇ.7.7 ಕುಗ್ಗುವ ಅಂದಾಜಿದೆ. ಅಲ್ಲದೆ, ಹಣದುಬ್ಬರದ ಪ್ರಮಾಣ ಶೇ.4ರಿಂದ 6ರೊಳಗಿನ ಮಧ್ಯ ಬಿಂದುವಿನಲ್ಲಿ ಇರಲಿದೆ.
ನಿಧಾನವಾಗಿ ಹಲವು ರಂಗಗಳು ಚೇತರಿಕೆ ಕಾಣುತ್ತಿದ್ದು, ಹೊಸ ಆರ್ಥಿಕ ವರ್ಷದಲ್ಲಿ ಜಿಡಿಪಿ ಏರಿಕೆ ಕಾಣುವ ಭರವಸೆ ಮೂಡಿದೆ. ಅಲ್ಲದೆ, ಭಾರತದ ಫಾರ್ವಸಿಟಿಕಲ್ ವಲಯವು ಮುಂದಿನ ಹತ್ತು ವರ್ಷಗಳಲ್ಲಿ ಮೂರು ಪಟ್ಟು ಬೆಳವಣಿಗೆ ದಾಖಲಿಸಲಿದೆ. ಕೋವಿಡ್-19 ಅವಕಾಶ ಮತ್ತು ಸವಾಲುಗಳನ್ನು ಮುಂದಿಡುವ ಮೂಲಕ ಭಾರತ ‘ವಿಶ್ವದ ಫಾರ್ಮಸಿ’ ಆಗಿ ಹೊರಹೊಮ್ಮಿದೆ. 2030ಕ್ಕೆ ದೇಶದ ಫಾರ್ವ ವಲಯದ ಮೌಲ್ಯವು 120ರಿಂದ 130 ಬಿಲಿಯನ್ ಡಾಲರ್ ಮುಟ್ಟುವ ಅಂದಾಜಿದೆ. ಕೃಷಿ ವಲಯದ ಬೆಳವಣಿಗೆಯೂ ಆಶಾವಾದ ಮೂಡಿಸಿದೆ. ಈ ಬಾರಿಯ ಬಜೆಟ್ನಲ್ಲಿ ಕೃಷಿ ಸಾಲ ವಿತರಣೆ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವ ಸಾಧ್ಯತೆ ಇದೆ. 2020ರ ಬಜೆಟ್ನಲ್ಲಿ ಇದು 15 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಮುಖ್ಯವಾಗಿ, ಕಳವಳ ಮೂಡಿಸಿರುವ ಮತ್ತೊಂದು ಸಂಗತಿ ಎಂದರೆ ಉದ್ಯೋಗ ನಷ್ಟ. ಕರೊನಾ ಲಾಕ್ಡೌನ್ ಪರಿಣಾಮ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಹಲವು ವಲಯಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ಬಗೆಹರಿಸಲು ನಿರ್ಮಲಾ ಸೀತಾರಾಮನ್ ಯಾವ ಸೂತ್ರ ಮುಂದಿರಿಸಲಿದ್ದಾರೆ ಎಂಬುದನ್ನು ಕಾದು ನೊಡಬೇಕು. ಕೇಂದ್ರ ಸರ್ಕಾರ 2025ರ ಹೊತ್ತಿಗೆ 4 ಕೋಟಿ, 2030ರ ಹೊತ್ತಿಗೆ 8 ಕೋಟಿ ಉದ್ಯೋಗಸೃಷ್ಟಿಯ ಗುರಿ ಹೊಂದಿದೆ ಎಂಬುದು ಗಮನಾರ್ಹ. ಎಲ್ಲ ರಂಗಗಳ ಮೂಲಸೌಕರ್ಯ ವೃದ್ಧಿಯತ್ತಲೂ ಗಮನ ಕೇಂದ್ರೀಕರಿಸಬೇಕಿದೆ. ಹೀಗೆ ಹಲವು ನಿರೀಕ್ಷೆ, ಸವಾಲುಗಳಿಗೆ ಬಜೆಟ್ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲಕರ. ಒಟ್ಟಾರೆ, ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಎಲ್ಲ ವಲಯಗಳಿಗೆ ಚೈತನ್ಯ ತುಂಬುವುದು, ಆರ್ಥಿಕತೆ ಮತ್ತೆ ಏರುಗತಿಗೆ ತರುವುದು ಅವಶ್ಯ.