ಸಂಪಾದಕೀಯ | ಸರ್ಕಾರ ಎಚ್ಚೆತ್ತುಕೊಳ್ಳಲಿ - ಅನಗತ್ಯವಾಗಿ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ

Belagavi
Published on

ಗಡಿ ವಿವಾದ ಮುಗಿದ ಅಧ್ಯಾಯ ಎಂಬುದು ಸ್ಪಷ್ಟವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಆಗಾಗ ಅದನ್ನು ಜೀವಂತ ಮಾಡುವ ಮೂಲಕ ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿದೆ. ಆ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ‘ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂಬ ವಿವೇಚನಾರಹಿತ ಹೇಳಿಕೆ ನೀಡಿದ್ದು, ಕರ್ನಾಟಕದಲ್ಲಿ ಆಕ್ರೋಶದ ಅಲೆಯನ್ನೇ ಹುಟ್ಟುಹಾಕಿದೆ. ಮಹಾರಾಷ್ಟ್ರದ ಈ ಉದ್ಧಟತನವನ್ನು ಕನ್ನಡದ ಸಾಹಿತಿಗಳು, ವಿಚಾರವಂತರು ಖಂಡಿಸಿದ್ದಾರೆ.

ಆ ರಾಜ್ಯದ ರಾಜಕಾರಣಿಗಳು ಮತಗಳಿಕೆಗಾಗಿ ಇಲ್ಲವೆ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಗಡಿ ವಿವಾದವನ್ನು ಆಗಾಗ ಕೆದಕುತ್ತಲೇ ಇರುತ್ತಾರೆ. ಕಳೆದ ವರ್ಷ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಸಂಬಂಧ ನೀಡಿದ ಹೇಳಿಕೆ ಭಾರಿ ವಿವಾದವನ್ನೇ ಹುಟ್ಟುಹಾಕಿತ್ತು. ಹೀಗಾಗಿ, ಇಂಥ ವರ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಕೂಡ ದಿಟ್ಟ ಪ್ರತ್ಯುತ್ತರವನ್ನು ನೀಡಬೇಕಿದೆ ಮತ್ತು ಈ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗಬೇಕಿದೆ. ಕನ್ನಡಿಗರ ಅಸ್ಮಿತೆಯನ್ನು ಕೆಣಕುವ ಯಾವುದೇ ಉದ್ಧಟತನವನ್ನು ಸಹಿಸುವುದಿಲ್ಲ ಮತ್ತು ಕನ್ನಡ ನಾಡಿನ ಒಂದಿಂಚು ಭೂಮಿಯೂ ಬಿಟ್ಟು ಕೊಡುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆ ಮಹಾರಾಷ್ಟ್ರ ಸರ್ಕಾರಕ್ಕೆ ರವಾನಿಸಬೇಕಿದೆ. ಗಡಿ ವಿವಾದ ಸಂಬಂಧ ಮಹಾಜನ್ ಆಯೋಗ ಅಂತಿಮ ವರದಿ ನೀಡಿ, ಬೆಳಗಾವಿ ಕರ್ನಾಟಕಕ್ಕೇ ಸೇರಿದ್ದು ಎಂದು ಹೇಳಿ ಹಲವು ದಶಕಗಳೇ ಸಂದಿವೆ. ಈ ವಾಸ್ತವ ಮಹಾರಾಷ್ಟ್ರಕ್ಕೆ ಗೊತ್ತಿದ್ದರೂ, ಹಠಮಾರಿ ಧೋರಣೆ ತೋರುತ್ತಿದೆ.

ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಒಂದೇ ಒಂದು ಬಾರಿಯೂ ವಿಚಾರಣೆ ನಡೆದಿಲ್ಲ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ಆ ಅರ್ಜಿಯನ್ನು ವಿಚಾರಣೆಗೂ ಅಂಗೀಕರಿಸಿಲ್ಲ. ಹೀಗಿದ್ದರೂ, ಅಲ್ಲಿನ ಸರ್ಕಾರ ಕಾನೂನು ಹೋರಾಟಕ್ಕೆ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದೆ. ಗಡಿ ಉಸ್ತುವಾರಿಗೆ ಇಬ್ಬರು ಸಚಿವರನ್ನು ನೇಮಕ ಮಾಡಿದೆ. ಈ ಸಂಗತಿಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೊರತೆ ಅಥವಾ ನ್ಯೂನತೆಗಳನ್ನು ನಿವಾರಿಸಿಕೊಳ್ಳಬೇಕು. ನಮ್ಮಲ್ಲಿ ಗಡಿ ಉಸ್ತುವಾರಿಗೆ ಪ್ರತ್ಯೇಕ ಸಚಿವರಿಲ್ಲ. ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗಡಿ ಭಾಗದ ಅಭಿವೃದ್ಧಿಯೂ ಮರೀಚಿಕೆಯಾಗಿಯೇ ಉಳಿದಿದೆ. ಇನ್ನಾದರೂ, ರಾಜ್ಯ ಸರ್ಕಾರ ಕಾನೂನು ಸಮಿತಿಗಳನ್ನು ಮತ್ತೊಮ್ಮೆ ರಚಿಸಬೇಕು, ಗಡಿ ಉಸ್ತುವಾರಿಗೆ ಸಚಿವರ ನೇಮಕದ ಜತೆಗೆ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಅಧ್ಯಕ್ಷರ ನೇಮಕವಾಗಬೇಕು. ಸುಖಾಸುಮ್ಮನೆ ತಂಟೆ ತೆಗೆದಿರುವ ಮಹಾರಾಷ್ಟ್ರಕ್ಕೆ ಈ ಮೂಲಕ ಸೂಕ್ತ ತಿರುಗೇಟು ಕೊಡಬೇಕು.

ಗಡಿ ಭಾಗದ ರಕ್ಷಣೆ ಮತು ಅಭಿವೃದ್ಧಿ ವಿಷಯದಲ್ಲಿ ಉದಾಸೀನ ಧೋರಣೆ ತಳೆಯಬಾರದು. ಈ ನಿಟ್ಟಿನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಪ್ರಾಧಿಕಾರ/ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲು ಪೂರಕ ವಾತಾವರಣ ಸೃಷ್ಟಿಸಬೇಕು. ಕನ್ನಡಿಗರ ಔದಾರ್ಯ, ಹೃದಯವೈಶಾಲ್ಯವನ್ನು ಯಾರೊಬ್ಬರೂ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡಬಾರದು. ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕದಂತೆ ಸಮರ್ಥ ಉತ್ತರ ನೀಡುವ ಪ್ರಯತ್ನ ಆಗಬೇಕು ಮತ್ತು ಮಹಾರಾಷ್ಟ್ರ ಕೂಡ ಹಠಮಾರಿ ಧೋರಣೆಯನ್ನು ಬಿಟ್ಟು ವಾಸ್ತವವನ್ನು ಸ್ವೀಕರಿಸಲು ಮುಂದಾಗಬೇಕು. ಆಗಲೇ ಗಡಿ ಭಾಗದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net