

ಹಲವು ರಂಗಗಳಲ್ಲಿ ಮಹತ್ವದ ಸಾಧನೆ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ. ಮಾಹಿತಿ-ತಂತ್ರಜ್ಞಾನ ರಂಗದ ಸಾಧನೆಯಂತೂ ಎಷ್ಟು ಗಮನಾರ್ಹವೆಂದರೆ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ‘ಬೆಂಗಳೂರನ್ನು ಹಿಂದಿಕ್ಕಿ’ ಎಂದು ಅಲ್ಲಿನ ಐಟಿ ಉದ್ಯಮಗಳಿಗೆ ಕರೆ ನೀಡಿದ್ದರು. ಹೀಗೆ ಮಹತ್ವದ ಮೈಲಿಗಲ್ಲುಗಳನ್ನು ಸೃಷ್ಟಿಸಿರುವ, ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗಿರುವ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ. ಸಿಲಿಕಾನ್ ಸಿಟಿ ಖ್ಯಾತಿಯ ಈ ನಗರ ಇದೀಗ ‘ಜೀವಿಸಲು ಅತ್ಯಂತ ಸೂಕ್ತ’ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ನಿಸ್ಸಂಶಯವಾಗಿಯೂ ಇದು ಹೆಮ್ಮೆಯ ಸಂಗತಿ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ‘ಈಸ್ ಆಫ್ ಲಿವಿಂಗ್-2020’ ಸೂಚ್ಯಂಕದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿರುವುದು ಗಮನಾರ್ಹ. ಅಷ್ಟೇ ಅಲ್ಲ, ಆರ್ಥಿಕ ಸಾಮರ್ಥ್ಯದಲ್ಲೂ ಪ್ರಥಮ ಸ್ಥಾನ ಪಡೆದಿದೆ. ಈ ಮೂಲಕ ಬೆಂಗಳೂರಿನ ಸರ್ವಾಂಗೀಣ ಪ್ರಗತಿಯ ನಿಟ್ಟಿನಲ್ಲಿ ಮತ್ತಷ್ಟು ಸ್ಪೂರ್ತಿ ಸಿಕ್ಕಂತಾಗಿದೆ. ಸರ್ಕಾರದ ಎಲ್ಲ ಇಲಾಖೆಗಳು, ಸಿಬ್ಬಂದಿ ದಕ್ಷತೆಯಿಂದ, ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ಧಿಯಲ್ಲಿ ಮಾದರಿ ಎನಿಸುವಂಥ ನಗರವನ್ನು ರೂಪಿಸಬಹುದು ಎಂಬುದಕ್ಕೆ ಇದು ಸಾಕ್ಷಿ.
ಇಲ್ಲಿನ ಪರಿಸರ, ಮೂಲಸೌಕರ್ಯಗಳು, ಹೆಚ್ಚಿರುವ ಸಮೂಹ ಸಾರಿಗೆ ವ್ಯವಸ್ಥೆ ಹೀಗೆ ಹಲವು ಅನುಕೂಲಕರ ಅಂಶಗಳು ಬೆಂಗಳೂರನ್ನು ಜೀವಿಸಲು ಅತ್ಯಂತ ಸೂಕ್ತ ನಗರವನ್ನಾಗಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಲಕ್ಷಾಂತರ ವಲಸಿಗರಿಗೆ ಆಶ್ರಯ ಕೊಟ್ಟಿರುವ ಈ ನಗರದೊಂದಿಗೆ ಅಸಂಖ್ಯ ಜನರು ವ್ಯಾವಹಾರಿಕ ಮಾತ್ರವಲ್ಲ, ಭಾವನಾತ್ಮಕ ಬಂಧವನ್ನೂ ಹೊಂದಿದ್ದಾರೆ. ಸುಧಾರಣೆಯ ಒಂದೊಂದು ಮಜಲುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಇದೆಲ್ಲದರ ಜತೆ, ರಾಜಧಾನಿ ಹಲವು ಸಮಸ್ಯೆಗಳನ್ನೂ ಎದುರಿಸುತ್ತಿದೆ. ಮುಖ್ಯವಾಗಿ, ಕಸದ ಸಮಸ್ಯೆ, ತೀವ್ರವಾದ ವಾಹನ ದಟ್ಟಣೆ, ಹೆಚ್ಚುತ್ತಿರುವ ರಸ್ತೆ ಅಪಘಾತಗಳು, ಎಷ್ಟೋ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿವೆ. ಐಟಿ ಕ್ಷೇತ್ರದಲ್ಲಿ ಮುಂದುವರಿದಿದ್ದರೂ, ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಮುಖ್ಯ ಸಮಸ್ಯೆ, ಬೆಂಗಳೂರು ತನ್ನ ಧಾರಣಾಸಾಮರ್ಥ್ಯವನ್ನು ಮೀರಿ ಬೆಳೆಯುತ್ತಿದೆ. ಇದು ಹೀಗೇ ಮುಂದುವರಿದರೆ ದೆಹಲಿ ಎದುರಿಸುತ್ತಿರುವ ತೀವ್ರ ವಾಯುಮಾಲಿನ್ಯ ಸೇರಿ ಹಲವು ಸಮಸ್ಯೆಗಳು ಇಲ್ಲೂ ಶುರುವಾಗಬಹುದು. ಎಲ್ಲವೂ ಬೆಂಗಳೂರು ಕೇಂದ್ರೀಕೃತವಾಗುವುದನ್ನು ತಪ್ಪಿಸಬೇಕು. ಬಹುತೇಕ ಪ್ರತಿ ಬಜೆಟ್ ಮಂಡನೆ ವೇಳೆಯಲ್ಲೂ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು, ಉದ್ಯೋಗಸೃಷ್ಟಿಗೆ ಪ್ರೋತ್ಸಾಹಿಸಲಾಗುವುದು ಎಂಬ ಘೋಷಣೆಗಳು ಕೇಳಿಬರುತ್ತವೆ. ಆದರೆ, ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸದೆ, ಈಗಿರುವ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸದೆ ಹೂಡಿಕೆದಾರರು ಬರಲು ಹೇಗೆ ಸಾಧ್ಯ? ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ. ಬೆಂಗಳೂರಿನ ಅಭಿವೃದ್ಧಿ ಜತೆಗೆ, ನಗರದ ಧಾರಣಾಸಾಮರ್ಥ್ಯವನ್ನೂ ಗಮನಿಸಲಿ.