

ನಮ್ಮ ಸಂಸ್ಕೃತಿಯಲ್ಲಿ "ಮಾತೃದೇವೋಭವ, ಪಿತೃದೇವೋಭವ" ಎಂಬ ಮೌಲ್ಯಗಳಿಗೆ ಅತ್ಯುನ್ನತ ಸ್ಥಾನವಿದೆ. ಆದರೆ, ಆಧುನಿಕ ಜೀವನಶೈಲಿ, ಭೌತಿಕ ಸುಖದ ವ್ಯಾಮೋಹ ಹಾಗೂ ಸ್ವಾರ್ಥದ ಸುಳಿಯಲ್ಲಿ ಸಿಲುಕಿರುವ ಇಂದಿನ ಸಮಾಜದಲ್ಲಿ ಹೆತ್ತವರು "ಹೊರೆ"ಯಾಗಿ ಕಾಣುತ್ತಿರುವುದು ದುರಂತ. ತಂದೆ-ತಾಯಿ ಬೆವರು ಹರಿಸಿ ಆಸ್ತಿ ಗಳಿಸಿದ್ದನ್ನು ಮರೆಯುವ ಕೆಲವು ಮಕ್ಕಳಿಗೆ ಪಾಲಕರಿಗಿಂತ ಆಸ್ತಿಯೇ ಮುಖ್ಯವಾಗುತ್ತಿದೆ. ಹೆತ್ತವರನ್ನು ವೃದ್ಧಾಪ್ಯದಲ್ಲಿ ಬೀದಿಗೆ ತಳ್ಳಲೂ ಅವರು ಹಿಂಜರಿಯುತ್ತಿಲ್ಲ. ಇಂತಹ ಸಾಮಾಜಿಕ ಅಧೋಗತಿಗೆ ಮತ್ತು ಕರುಳ ಬಳ್ಳಿಯ ಸಂಬಂಧಗಳಿಗಿಂತ ಹಣಕ್ಕೆ ಪ್ರಾಮುಖ್ಯತೆ ನೀಡುವ ಈಗಿನ ಮಕ್ಕಳ ಮಾನಸಿಕತೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಬಲವಾದ "ಕಪಾಳಮೋಕ್ಷ"ದಂತಿದೆ.