

ಕೇರಳ ಮತ್ತೊಮ್ಮೆ ಅನಿರೀಕ್ಷಿತ ಪ್ರಕೃತಿವಿಕೋಪಕ್ಕೆ ತುತ್ತಾಗಿದ್ದು, ಭೂಕುಸಿತ, ಗುಡ್ಡಕುಸಿತದಲ್ಲಿ ಮಂಗಳವಾರ ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಯನಾಡಿನ ಮೇಪಡ್ಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಸರಣಿ ಭೂಕುಸಿತ ಸಂಭವಿಸಿದವು. ಮುಂಡಕ್ಕಯ್, ಚೂರಲ್ಮಲ, ಅಟ್ಟಮಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿವೆ. ದೇವರ ನಾಡಿನಲ್ಲಿ ಇಂತಹ ವಿಕೋಪಗಳು ಹಿಂದೆಯೂ ಹಲವು ಬಾರಿ ಸಂಭವಿಸಿವೆ.
ಕರ್ನಾಟಕದಲ್ಲೂ ಹಲವಾರು ಕಡೆಗಳಲ್ಲಿ ಗುಡ್ಡಕುಸಿತದ ಘಟನೆಗಳು ಸಂಭವಿಸುತ್ತಲೇ ಇವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಇತ್ತೀಚೆಗಷ್ಟೇ ಗುಡ್ಡ ಜರಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡರು. ಎರಡು ವಾರಗಳ ಶೋಧ ಕಾರ್ಯಾಚರಣೆ ಬಳಿಕವೂ, ಇನ್ನೂ ಕೆಲವರು ಪತ್ತೆಯಾಗಿಲ್ಲ. ಶಿರಾಡಿಘಾಟ್ ಪ್ರದೇಶದಲ್ಲಿ ಭೂಕುಸಿತದಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿದೆ. ಕರ್ನಾಟಕದಲ್ಲೂ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಮತ್ತು ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂಥ ದುರಂತಗಳನ್ನು ಅಥವಾ ಪ್ರಕೃತಿವಿಕೋಪಗಳನ್ನು ಮನುಷ್ಯರು ತಡೆಯಲು ಸಾಧ್ಯವಿಲ್ಲವಾದರೂ, ಅದರಲ್ಲಿ ಸಿಲುಕುವವರ ರಕ್ಷಣೆಗೆ ಬೇಕಾದ ಯಾಂತ್ರಿಕ ಸಿದ್ಧತೆಗಳನ್ನು ಮೊದಲೇ ಮಾಡಿಕೊಳ್ಳಬಹುದು. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅದನ್ನೆಲ್ಲ ಮಳೆಗಾಲಕ್ಕೆ ಮೊದಲೇ ಸಜ್ಜಾಗಿಟ್ಟರೆ ಹೆಚ್ಚಿನ ಪ್ರಾಣಹಾನಿಯನ್ನು ತಪ್ಪಿಸಬಹುದು. ಇಂತಹ ಕಾರ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ರೂಪಿಸಬೇಕು. ಹವಾಮಾನ ಬದಲಾವಣೆ, ಅದಕ್ಕೆ ಸಂಬಂಧಿಸಿದ ಹಲವು ಅಡ್ಡಪರಿಣಾಮಗಳನ್ನು ಮನುಕುಲ ಅನುಭವಿಸುತ್ತಿದೆ. ಅಭಿವೃದ್ಧಿ ಮತ್ತು ನಿಸರ್ಗದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ನಮ್ಮ ಸರ್ಕಾರದ ನೀತಿಗಳು ವಿಫಲವಾಗಿರುವುದು ಸ್ಪಷ್ಟ. ಎಲ್ಲಕ್ಕಿಂತ ಹೆಚ್ಚಾಗಿ, ಮನುಷ್ಯರು ರಸ್ತೆ, ಸೇತುವೆ, ರೈಲುಮಾರ್ಗ, ಪ್ರವಾಸೋದ್ಯಮ ಮುಂತಾದವುಗಳಿಗಾಗಿ ಅರಣ್ಯ, ಗುಡ್ಡಗಾಡು ಪ್ರದೇಶಗಳ ಒತ್ತುವರಿ ಮಾಡುವುದನ್ನು ಮೊದಲು ನಿಲ್ಲಿಸಬೇಕು. ತಥಾಕಥಿತ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಕೃತಿಯ ಮೇಲಿನ ಶೋಷಣೆ ತಪ್ಪಬೇಕು. ಕಡಿದಾದ ಬೆಟ್ಟಗುಡ್ಡಗಳನ್ನು ಕೊರೆದು ರೆಸಾರ್ಟ್, ರಸ್ತೆ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದರೂ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆಯಾ ಭೌಗೋಳಿಕ ಪ್ರದೇಶಕ್ಕೆ ಅದರದ್ದೇ ಆದ ವೈಶಿಷ್ಟ್ಯವಿರುತ್ತದೆ. ಅದನ್ನು ಕಡೆಗಣಿಸಿ, ಬೆಟ್ಟಗುಡ್ಡಗಳ ಬುಡದಲ್ಲಿ ಕಟ್ಟಡಗಳು ಕಟ್ಟಿದರೆ ಅಪಾಯವಲ್ಲದೆ ಇನ್ನೇನಾದೀತು? ಪ್ರಕೃತಿಯ ದೃಷ್ಟಿಯಲ್ಲಿ ಸೂಕ್ಷ್ಮವಾಗಿರುವ ಪ್ರದೇಶಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ನಿಲ್ಲದಿದ್ದಲ್ಲಿ ಮುಂದಿನ ದಿನಗಳು ಮತ್ತಷ್ಟು ಭೀಕರ. ಪ್ರಕೃತಿ ವಿಕೋಪಗಳಿಂದ ನಮ್ಮ ಸರ್ಕಾರಗಳು, ಸಾರ್ವಜನಿಕರು ಪಾಠ ಕಲಿಯಬೇಕಿದೆ.