

ವಕ್ಛ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ನೆಪದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಒಂದೊಂದೇ ಕರಾಳ ಮುಖಗಳು ಈಗ ಅನಾವರಣಗೊಳ್ಳುತ್ತಿವೆ. ಹಿಂಸಾಚಾರ ಪೀಡಿತ ಮುರ್ಷಿದಾಬಾದ್ಗೆ ಶನಿವಾರ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಮತ್ತು ಆಯೋಗದ ಸದ್ಯರು ಭೇಟಿ ನೀಡಿ ಸಂತ್ರಸ್ತರ ಸಂಕಷ್ಟ ಆಲಿಸಿದ್ದಾರೆ. ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಕೂಡ ಸಂತ್ರಸ್ತರನ್ನು ಭೇಟಿ ಮಾಡಿ, ನ್ಯಾಯ ದೊರಕಿಸುವ ಆಶ್ವಾಸನೆ ನೀಡಿದ್ದಾರೆ. ಈ ಎರಡೂ ಪ್ರತ್ಯೇಕ ಭೇಟಿಗಳ ವೇಳೆ ಸಂತ್ರಸ್ತರು ಹಂಚಿಕೊಂಡ ಅನುಭವಗಳು ಬೆಚ್ಚಿಬೀಳಿಸುವಂತಿವೆ. ಮಹಿಳೆಯರಂತೂ ಮಹಿಳಾ ಆಯೋಗದ ನಿಯೋಗದೆದುರು ಬಿಕ್ಕಿಬಿಕ್ಕಿ ಅಳುತ್ತ, ನ್ಯಾಯ ಕಲ್ಪಿಸಲು ಪ್ರಾರ್ಥಿಸಿದ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದ್ದವು.
ಮಹಿಳೆಯರು ಭಯಭೀತರಾಗಿದ್ದು ಸುರಕ್ಷಿತ ವಾತಾವರಣ ಮರುಕಲ್ಪಿಸಲು ಆಗ್ರಹಿಸಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಅಮಾಯಕರನ್ನು ಹೊರಗಡೆ ಎಳೆದು ದುಷ್ಕರ್ವಿುಗಳು ಕೊಂದುಹಾಕಿದ್ದಾರೆ, ಆ ಬಳಿಕ ಮನೆ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಹಿಂಸಾಚಾರದ ಬಳಿಕ ಸಾವಿರಾರು ಜನರು ಮನೆಗಳನ್ನು ತೊರೆದು ಕ್ಯಾಂಪ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಶಾಶ್ವತ ಬಿಎಸ್ಎಫ್ ಕ್ಯಾಂಪ್ಗಳನ್ನು ಸ್ಥಾಪಿಸಬೇಕು ಮತ್ತು ಹಿಂಸಾಚಾರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಅಲ್ಲದೆ, ಹಿಂದೆಂದೂ ಇಷ್ಟು ಪ್ರಮಾಣದ ಹಿಂಸಾಚಾರ ನೋಡಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮುರ್ಷಿದಾಬಾದ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 274 ಜನರನ್ನು ಬಂಧಿಸಲಾಗಿದೆ. ಆದರೆ, ಈ ಬಂಧನಗಳು ಕೇವಲ ಕಣ್ಣೊರೆಸುವ ತಂತ್ರ ಗಳಾಗಬಾರದು. ಹಿಂಸಾಚಾರ, ಅಶಾಂತಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕ. ಅದರಲ್ಲೂ ಪಶ್ಚಿಮ ಬಂಗಾಳದ ಹಿಂಸಾಚಾರದಲ್ಲಿ ತುಂಬ ಒಳಸುಳಿಗಳು ಇವೆ. ಸ್ಥಳೀಯರ ಪ್ರಕಾರ ಹಿಂದುಗಳನ್ನು ಗುರಿಯಾಗಿಸಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ.
ಅಲ್ಲದೆ, ಈ ಹಿಂಸಾಚಾರದಲ್ಲಿ ಬಾಂಗ್ಲಾದೇಶ ನುಸುಳುಕೋರರ ಕೈವಾಡವಿದೆ. ಬಾಂಗ್ಲಾದೇಶಕ್ಕೆ ಪಲಾಯನ ಗೈಯ್ಯುತ್ತಿದ್ದ ಸಂದರ್ಭದಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ. ಈ ನುಸುಳುಕೋರರು ಬಂಗಾಳದ ಭೌಗೋಳಿಕ ಸಮೀಕರಣವನ್ನೇ ಬದಲಿಸಿದ್ದು, ಆಂತರಿಕ ಭದ್ರತೆಗೂ ಮಾರಕವಾಗಿ ಪರಿಣಮಿಸಿದ್ದಾರೆ. ಅಲ್ಲದೆ, ಕೆಲ ರಾಜಕೀಯ ಪಕ್ಷಗಳು ಇವರನ್ನು ‘ಮತಬ್ಯಾಂಕ್’ ಆಗಿ ಪರಿಗಣಿಸಿ, ರಕ್ಷಣೆಗೆ ನಿಂತಿರುವುದು ಅಪಾಯಕಾರಿ ಬೆಳವಣಿಗೆ. ಇಂಥ ಪ್ರವೃತ್ತಿಗಳನ್ನು ಕೊನೆಗಾಣಿಸದೆ ಇದ್ದರೆ ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲು ಎದುರಾಗುವ ಸಾಧ್ಯತೆ ಇದೆ. ಬಂಗಾಳದ ಹಿಂಸಾಚಾರ ಘಟನೆಯ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು, ಅದು ಯಾವುದೇ ಒತ್ತಡ, ಪ್ರಭಾವದಿಂದ ದಿಕ್ಕು ತಪ್ಪಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಮಾಜದ ಶಾಂತಿಗೆ ಧಕ್ಕೆ ಒದಗಿಸುವವರನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಬೇಕು.