ಸಂಪಾದಕೀಯ| ನ್ಯಾಯದ ಆಶಾಕಿರಣ

Army
Published on

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನುಚ್ಛೇದ 370ರ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆಯುವುದರ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿತು. 2019ರ ಬಳಿಕ ಅಲ್ಲಿನ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಬಿದ್ದಿದ್ದು, ಪ್ರತ್ಯೇಕತಾವಾದಿಗಳ ಉಪಟಳ ಬಹುತೇಕ ಕೊನೆಗೊಂಡಿದೆ. 2023ರಲ್ಲಿ ಕಲ್ಲುತೂರಾಟದ ಒಂದೇಒಂದು ಘಟನೆಯೂ ನಡೆದಿಲ್ಲ. ಮುಖ್ಯವಾಗಿ, ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕಾಶ್ಮೀರಿ ಪಂಡಿತರಿಗೆ ಯಾವಾಗ ನ್ಯಾಯ ಸಿಗಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಇತಿಹಾಸದ ಪ್ರಮಾದವನ್ನು ಸರಿಪಡಿಸಲು ಮತ್ತು ಜಮ್ಮು-ಕಾಶ್ಮೀರದ ನಾಳೆಗಳನ್ನು ಉತ್ತಮವಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೊಂದು ದೃಢಹೆಜ್ಜೆಯನ್ನು ಇರಿಸಿದೆ.

ಜಮ್ಮು-ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ (ತಿದ್ದುಪಡಿ) ಮಸೂದೆ 2023 ಎರಡನ್ನೂ ಲೋಕಸಭೆ ಡಿಸೆಂಬರ್ 6ರಂದು ಅನುಮೋದಿಸಿರುವುದು ಮಹತ್ವದ ಬೆಳವಣಿಗೆ. ಈ ಮಸೂದೆಗಳು ರಾಜ್ಯಸಭೆಯ ಅಂಗೀಕಾರ ಪಡೆದ ಬಳಿಕ ರಾಷ್ಟ್ರಪತಿ ಅನುಮೋದನೆ ಪಡೆದು ಅಧಿಸೂಚನೆ ಪ್ರಕಟವಾಗಲಿದೆ. ಈ ಮಸೂದೆಗಳ ಮೇಲಿನ ಚರ್ಚೆಯ ವೇಳೆ ಮಾತನಾಡುತ್ತ ಗೃಹ ಸಚಿವ ಅಮಿತ್ ಷಾ ಮಹತ್ವದ ಸಂದೇಶ ರವಾನಿಸಿದ್ದು, ‘ಪಾಕಿಸ್ತಾನ ಆಕ್ರಮಿಕ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಿದ್ದು’ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮೀಸಲಿಡಲಾಗಿದೆ ಎಂದು ಗೃಹ ಸಚಿವರು ಘೋಷಿಸಿದ್ದಾರೆ. ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು. ಅದು 43ಕ್ಕೆ ಏರಿಕೆಯಾಗಿದೆ. 46 ಸ್ಥಾನಗಳನ್ನು ಹೊಂದಿದ್ದ ಕಾಶ್ಮೀರಕ್ಕೆ 47 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ, ಒಟ್ಟು ಸ್ಥಾನಗಳು 107ರಿಂದ 114ಕ್ಕೆ ಏರಿಕೆಯಾಗಲಿವೆ. ಐವರು ನಾಮನಿರ್ದೇಶಿತ ಸದಸ್ಯರನ್ನು ವಿಧಾನಸಭೆ ಒಳಗೊಳ್ಳಲಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡು ಜಮ್ಮು-ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ವಲಸಿಗ ಸಮುದಾಯದ ಇಬ್ಬರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡುವ ಅವಕಾಶವಿದೆ.

ವಾಸ್ತವದಲ್ಲಿ ಈ ಸುಧಾರಣೆಯ ಕ್ರಮಗಳು ದಶಕಗಳ ಹಿಂದೆಯೇ ಅನುಷ್ಠಾನವಾಗಿ, ಕಾಶ್ಮೀರಿ ಪಂಡಿತರಿಗೆ ಸೂಕ್ತವಾದ ನ್ಯಾಯ ದೊರೆಯಬೇಕಿತ್ತು. ಆದರೆ, ‘ವಿಶೇಷ ಸ್ಥಾನಮಾನ’ದ ಹೆಸರಿನಲ್ಲಿ ಪ್ರತ್ಯೇಕ ಧ್ವಜ, ಪ್ರತ್ಯೇಕ ನಿಯಮಗಳು ರೂಪಿಸಿ ಒಂದು ಸಮುದಾಯದ ತುಷ್ಟೀಕರಣಕ್ಕೆ ಪ್ರಯತ್ನಿಸಲಾಯಿತು. ಇದರ ಪರಿಣಾಮವಾಗಿ, ಕಾಶ್ಮೀರಿ ಪಂಡಿತರು ತಮ್ಮ ದೇಶದಲ್ಲೇ ನಿರಾಶ್ರಿತರಾಗಿ ಬದುಕಬೇಕಾದಂಥ ಸ್ಥಿತಿ ಸೃಷ್ಟಿಯಾಯಿತು. ಅದೇನಿದ್ದರೂ, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ತಿದ್ದುಪಡಿ ಮಸೂದೆಗಳ ಮೂಲಕ ನ್ಯಾಯಪ್ರಾಪ್ತಿಯ ಆಶಾಕಿರಣ ಗೋಚರಿಸುತ್ತಿದೆ. ಇಂಥ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳನ್ನು ಪ್ರತಿಪಕ್ಷಗಳು ರಾಜಕೀಯದ ದೃಷ್ಟಿಕೋನದಿಂದ ನೋಡದೆ, ರಾಷ್ಟ್ರದ ಐಕ್ಯತೆಯ ರೂಪದಲ್ಲಿ ಕಾಣಬೇಕು. ಆಗ ಮಾತ್ರ ನಿಜವಾದ ಸುಧಾರಣೆ ಸಾಕಾರಗೊಳ್ಳಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net