

ರೋಗ ಗುಣವಾಗುವುದಿಲ್ಲ ಎಂಬುದು ವೈದ್ಯಕೀಯವಾಗಿ ದೃಢಪಟ್ಟ ನಂತರ, ಚಿಕಿತ್ಸೆಯನ್ನು ನಿಲ್ಲಿಸುವ ಅಥವಾ ಹಿಂತೆಗೆದುಕೊಳ್ಳುವ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2023ರ ಜನವರಿಯಲ್ಲೇ ಸ್ಪಷ್ಟವಾದ ತೀರ್ಪೆಂದನ್ನು ನೀಡಿತ್ತು. ಅದಕ್ಕೆ ಪೂರಕ ಎನ್ನುವಂತೆ, ಕರ್ನಾಟಕ ಸರ್ಕಾರ ಇತ್ತೀಚೆಗೆ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಚಿಕಿತ್ಸಾ ಉಪಕರಣಗಳ ಮೂಲಕ ಮಾತ್ರ ಜೀವ ಹಿಡಿದುಕೊಂಡಿರುವ, ಆರೋಗ್ಯ ಸುಧಾರಣೆಯ ಆಶಾವಾದವನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ‘ಘನತೆಯಿಂದ ಸಾಯುವ ಹಕ್ಕು’ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಕಳೆದ ಗುರುವಾರ (ಜ.30) ಅಧಿಕೃತ ಆದೇಶವನ್ನೂ ಹೊರಡಿಸಿದೆ. ಇಂತಹ ಸಾವಿಗೆ ಅನುಮತಿ ನೀಡಬೇಕಾದ ಅಧಿಕಾರಿಗಳು ಯಾರು ಮತ್ತು ಪ್ರಕ್ರಿಯೆ ಹೇಗಿರಬೇಕು ಎಂಬುದನ್ನೂ ಅದರಲ್ಲಿ ವಿವರಿಸಲಾಗಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಪ್ರಕಾರ, ಈ ಪ್ರಕರಣಗಳ ಮೇಲೆ ನಿಗಾ ವಹಿಸುವ ಕಾರ್ಯವನ್ನು ಎರಡು ಮಂಡಳಿಗಳಿಗೆ ವಹಿಸಲಾಗಿದೆ. ಪ್ರಾಥಮಿಕ ಮಂಡಳಿ ಆಸ್ಪತ್ರೆಯ ಮಟ್ಟದಲ್ಲಿ ಮತ್ತು ಎರಡನೇ ಹಂತದ ಮಂಡಳಿ ಜಿಲ್ಲಾ ಮಟ್ಟದಲ್ಲಿ ಇರುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಅವರಿಂದ ನೇಮಕಗೊಂಡ ಅಧಿಕಾರಿ ಜಿಲ್ಲಾ ಮಟ್ಟದ ಮಂಡಳಿಯಲ್ಲಿ ಇರುತ್ತಾರೆ. ಈ ಆದೇಶವು ರಾಜ್ಯದ ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ಎಲ್ಲ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಈ ರೀತಿಯ ಆದೇಶ ಹೊರಡಿಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ಕೆಲವು ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸಿದ್ದರೂ ಅವು ಸಮಗ್ರತೆಯ ರೂಪ ಹೊಂದಿಲ್ಲ. ಮಾರಣಾಂತಿಕ ಕಾಯಿಲೆಯಿಂದ ಬದುಕುವ ನಿರೀಕ್ಷೆಯನ್ನು ಕಳೆದುಕೊಂಡಿರುವ ರೋಗಿಗಳಿಗೆ, ಅವರ ಕುಟುಂಬಸ್ಥರಿಗೆ, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕರ್ನಾಟಕದ ಈ ಆದೇಶದಿಂದ ಸಹಾಯವಾಗುವುದಂತೂ ಖಚಿತ. ಇದನ್ನು ‘ದಯಾಮರಣ’ಕ್ಕೆ ನೀಡಿರುವ ಅನುಮತಿ ಎಂಬುದಾಗಿ ಯಾರೂ ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯಾವುದೇ ಚಿಕಿತ್ಸೆಗೂ ಸ್ಪಂದಿಸದ, ಉಪಕರಣಗಳ ಸಹಾಯದಿಂದ ಜೀವ ಮಾತ್ರ ಉಳಿದಿರುವ ರೋಗಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಭವಿಷ್ಯದಲ್ಲಿನ ತಮ್ಮ ಚಿಕಿತ್ಸೆಯ ಕುರಿತು ರೋಗಿಯು ಮುಂಚಿತವಾಗಿಯೇ ನಿರ್ದೇಶನ ನೀಡುವುದಕ್ಕಾಗಿ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್ (ಎಎಂಡಿ) ವ್ಯವಸ್ಥೆಯನ್ನೂ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಅದರಲ್ಲಿ, ರೋಗಿಯು ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡ ಕಾಲಕ್ಕೆ ತನ್ನ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲು ಯಾರಾದರೂ ಇಬ್ಬರನ್ನು ನಾಮನಿರ್ದೇಶನ ಮಾಡಬಹುದು. ರಾಜ್ಯ ಸರ್ಕಾರದ ಈ ಎಲ್ಲ ನಿರ್ಧಾರಗಳು ಸ್ವಾಗತಾರ್ಹವಾದರೂ, ಆರೋಗ್ಯ ಇಲಾಖೆಯ ಜವಾಬ್ದಾರಿ ಇಲ್ಲಿಗೆ ಮುಗಿಯುವುದಿಲ್ಲ. ಪಾಸಿವ್ ಮತ್ತು ಆಕ್ಟಿವ್ ಯುಥನೇಷಿಯಾ ನಡುವಿನ ವ್ಯತ್ಯಾಸಗಳೇನು, ಇವುಗಳಿಗೆ ಸಂಬಂಧಿಸಿದ ನೀತಿ-ನಿಯಮಗಳೇನು, ಯಾವುದಕ್ಕೆ ಅನ್ವಯವಾಗುತ್ತದೆ, ಯಾವುದಕ್ಕೆ ಅನ್ವಯವಾಗುವುದಿಲ್ಲ, ಇದೆಲ್ಲದರ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶಗಳೇನು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ವ್ಯಾಪಕವಾಗಿ ಮಾಡಬೇಕು.