

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎನ್ನಬಹುದಾದ ತೀರ್ಪೆಂದನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿದೆ. ಮಕ್ಕಳ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಡೌನ್ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಎರಡೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಿಸುವ (ಪೋಕ್ಸೊ) ಕಾಯ್ದೆಯಡಿ
ಅಪರಾಧ ಎಂಬ ಸ್ಪಷ್ಟ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಇದುವರೆಗೆ ಗೊಂದಲ ಇತ್ತು. ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋಗಳನ್ನು ಸೃಷ್ಟಿಸಿ, ಮಾರಾಟ ಮಾಡುವುದು ಮಾತ್ರವೇ ಅಪರಾಧ ಎಂಬ ಭಾವನೆ ಹಲವರಲ್ಲಿ ಇತ್ತು. ವೀಕ್ಷಣೆ ಅಪರಾಧವಲ್ಲ ಎಂಬ ತೀರ್ಪನ್ನು ಇತ್ತೀಚೆಗಷ್ಟೇ ಕೋರ್ಟೆಂದು ನೀಡಿ, ಜನರ ವಿರೋಧ ವ್ಯಕ್ತವಾದ ನಂತರ ಆ ತೀರ್ಪನ್ನು ಹಿಂತೆಗೆದುಕೊಂಡ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ನ ಈ ತೀರ್ಪು ಐತಿಹಾಸಿಕವಾಗಿದ್ದು, ಸರ್ಕಾರ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.
ಪೋಕ್ಸೋಗೆ ತಿದ್ದುಪಡಿ ತರಬೇಕು ಎಂದು ಸಂಸತ್ತಿಗೆ ಸಲಹೆ ನೀಡಿರುವ ನ್ಯಾಯಾಲಯ, ಇದರಿಂದ ಮಕ್ಕಳ ಅಶ್ಲೀಲತೆಯನ್ನು ಮಕ್ಕಳ ಲೈಂಗಿಕ ದೌರ್ಜನ್ಯ/ಶೋಷಣೆ ಎಂದು ಹೇಳಬಹುದು. ಇದಕ್ಕಾಗಿ ಅಗತ್ಯವಿದ್ದಲ್ಲಿ ಸುಗ್ರೀವಾಜ್ಞೆಯನ್ನೂ ತರಬಹುದು ಎಂದಿದೆ. ನ್ಯಾಯಾಲಯದ ಸಲಹೆಯನ್ನು ಸರ್ಕಾರ ಮತ್ತು ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕಿದ್ದು, ಪೋಕ್ಸೋಗೆ ಸೂಕ್ತ ತಿದ್ದುಪಡಿ ತರುವ ನಿಟ್ಟಿನಲ್ಲಿ ಅಂತಿಮ ನಿರ್ಧಾರಕ್ಕೆ ಬರಬೇಕಿದೆ. ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
‘ಭಾರತದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ತಪ್ಪುಕಲ್ಪನೆಗಳು ವ್ಯಾಪಕವಾಗಿವೆ ಮತ್ತು ಅದರ ಸೀಮಿತ ಅನುಷ್ಠಾನದಿಂದಾಗಿ ಇನ್ನೂ ಪ್ರಭಾವಶಾಲಿಯಾಗಿಲ್ಲ. ಕೆಲ ರಾಜ್ಯಗಳ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಮೇಲೆ ನಿಷೇಧ ಹೇರಲಾಗಿದೆ. ಹಾಗಾಗಿಯೇ, ಹದಿಹರೆಯದವರು ಮತ್ತು ವಯಸ್ಕರು ಇಂಟರ್ನೆಟ್ನತ್ತ ಮುಖ ಮಾಡಿ, ಅಸ್ಪಷ್ಟ, ನಿಖರವಲ್ಲದ ಮಾಹಿತಿಯನ್ನಷ್ಟೇ ಪಡೆಯುತ್ತಾರೆ. ಇದು ಸಾಮಾನ್ಯವಾಗಿ ತಪ್ಪುದಾರಿಗೆಳೆಯಬಹುದು ಮತ್ತು ಅನಾರೋಗ್ಯಕರ ಲೈಂಗಿಕ ನಡವಳಿಕೆಗೆ ಕಾರಣವಾಗಬಹುದು’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಅಂಶಗಳ ಬಗ್ಗೆಯೂ ಶೈಕ್ಷಣಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಲೈಂಗಿಕ ಶಿಕ್ಷಣದ ಕೊರತೆಯಿಂದ ಇಂಥ ಘಟನೆಗಳು ನಡೆಯುತ್ತಿವೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್ನ ಈ ತೀರ್ಪು ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಸುಧಾರಣೆಗಳಿಗೆ ನಾಂದಿಯಾಗಲಿ.