

ರಾಜ್ಯದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಆಹಾರಧಾನ್ಯಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದು, ಕುಟುಂಬದ ಬಜೆಟ್ನ್ನು ಸರಿದೂಗಿಸಲು ಪ್ರಯಾಸ ಪಡುತ್ತಿದ್ದಾರೆ. ಗ್ರಾಮೀಣ ಭಾಗದ ರೈತಾಪಿ ಜನರ ಬದುಕು ಇನ್ನೂ ಶೋಚನೀಯ. ಹೀಗೆ ಕಷ್ಟದ ದಿನಗಳ ಸಂದರ್ಭಗಳಲ್ಲಿ ಆಳುಗರು ಜನರಿಗೆ ನೆರವಾಗುವಂಥ, ಬೆಲೆಯೇರಿಕೆಯ ಹೊರೆಯನ್ನು ಕಡಿಮೆ ಮಾಡುವಂಥ ಕ್ರಮಗಳನ್ನು ಕೈಗೊಂಡು, ಒಂದಿಷ್ಟು ನಿರಾಳತೆಯನ್ನು ಮೂಡಿಸಬೇಕು. ಆದರೆ, ರಾಜ್ಯ ಸರ್ಕಾರ ಇದಕ್ಕೆ ತದ್ವಿರುದ್ಧವಾದ ಹೆಜ್ಜೆಯನ್ನು ಇರಿಸಿದ್ದು, ಬರದ ಸಂಕಷ್ಟದಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಹೊಡೆತ ನೀಡಿದೆ. 2024ರ ಜನವರಿಯಿಂದಲೇ ಅನ್ವಯವಾಗುವಂತೆ ಮುದ್ರಾಂಕ ಶುಲ್ಕ (ಸ್ಟಾ್ಯಂಪ್ ಡ್ಯೂಟಿ) ಹೆಚ್ಚಳಕ್ಕೆ ತೀರ್ಮಾನ ಮಾಡಿದ್ದು, ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳದ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲೇ ಮುದ್ರಾಂಕ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ.
ಹಲವು ಉಚಿತ ಕೊಡುಗೆಗಳನ್ನು (ಗ್ಯಾರಂಟಿ) ಘೋಷಿಸಿರುವ ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಹೊಸ ದಾರಿಗಳನ್ನು ಶೋಧಿಸುತ್ತಿರುವುದು ಗೊತ್ತಿರುವಂಥದ್ದೇ. ಮನೆಗಳ ಬಾಡಿಗೆ ಕರಾರು, ಗುತ್ತಿಗೆ ಕರಾರು, ಬ್ಯಾಂಕ್ ಸಾಲದ ದಾಖಲೆಗಳು (ಡಿಟಿಡಿ), ಪವರ್ ಆಫ್ ಅಟಾರ್ನಿ, ಒಪ್ಪಂದಗಳು, ಪ್ರಮಾಣಪತ್ರಗಳಿಗೆ ಅನ್ವಯವಾಗುವಂತೆ ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ. ಇದರ ನೇರ ಪ್ರತಿಕೂಲ ಪರಿಣಾಮವು ಮಧ್ಯಮವರ್ಗದವರ ಮೇಲಾಗಲಿದೆ ಎಂಬುದರ ಬಗ್ಗೆ ಅನುಮಾನವಿಲ್ಲ.
ಮುದ್ರಾಂಕ ಶುಲ್ಕದಿಂದ ಪ್ರಸಕ್ತ ವಾರ್ಷಿಕ ಸರಾಸರಿ 2,027 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಈ ಮೊತ್ತವನ್ನು 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ದಾರಿ ಶೋಧಿಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವೇನೋ ನಿಜ. ಆದರೆ, ಇಂಥ ಕ್ರಮಗಳು ಮಧ್ಯಮವರ್ಗದವರ ಮತ್ತು ಬಡಜನರ ಸಂಕಷ್ಟವನ್ನು ಹೆಚ್ಚಿಸುವಂತಿರಬಾರದು ಎಂಬ ಕಾಳಜಿ ಅಗತ್ಯ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗಬಹುದಾದರೂ, ಅದರಿಂದ ಶ್ರೀಸಾಮಾನ್ಯರು ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಮನೆಬಾಡಿಗೆಯಿಂದ ಹಿಡಿದು ಬ್ಯಾಂಕ್ ಸಾಲದ ದಾಖಲೆಗಳವರೆಗೂ ಹೆಚ್ಚು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬರ, ಬೆಲೆಯೇರಿಕೆಯ ಪರಿಸ್ಥಿತಿಯನ್ನು ನಿರ್ವಹಿಸಬೇಕಾದ ಸರ್ಕಾರ ಈ ಹೊತ್ತಿನಲ್ಲಿ ಇಂಥ ಕ್ರಮ ಕೈಗೊಳ್ಳಬಾರದಿತ್ತು ಎಂಬುದು ಬಹುತೇಕ ಶ್ರೀಸಾಮಾನ್ಯರ ಅನಿಸಿಕೆ.
ಎಷ್ಟೋ ಇಲಾಖೆಗಳಲ್ಲಿ ವಿತ್ತೀಯ ಶಿಸ್ತು ಇಲ್ಲದ ಪರಿಣಾಮ ಅನವಶ್ಯಕವಾಗಿ ಹಣ ಪೋಲಾಗುತ್ತಿದೆ. ಅಂಥ ಅಪಸವ್ಯಗಳನ್ನು ಗುರುತಿಸಿ, ಸರ್ಕಾರಕ್ಕೆ ನಷ್ಟ ಆಗುತ್ತಿರುವ ಮೂಲಗಳನ್ನು ಪತ್ತೆ ಮಾಡಬೇಕು. ಅವುಗಳನ್ನು ಸರಿಪಡಿಸುವ ಮೂಲಕ ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳಬೇಕೆ ಹೊರತು ಮುದ್ರಾಂಕ ಶುಲ್ಕ ಹೆಚ್ಚಳ ಅಥವಾ ಇನ್ನಿತರ ಅವಶ್ಯಕ ಸೌಲಭ್ಯಗಳ ದರ ಹೆಚ್ಚಳದಿಂದಲ್ಲ ಎಂಬ ವಾಸ್ತವವನ್ನು ಅರಿಯಬೇಕು. ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಣಯಕ್ಕೆ ಬರಲಿ.