

ಸಹಕಾರ ಬ್ಯಾಂಕುಗಳ ಅವ್ಯವಸ್ಥೆ, ಭ್ರಷ್ಟಾಚಾರ, ಪಾರದರ್ಶಕತೆ ಇಲ್ಲದಿರುವುದು, ಠೇವಣಿದಾರರ ವಿಶ್ವಾಸ ಕಳೆದುಕೊಂಡಿರುವುದರ ಕುರಿತಂತೆ ‘ವಿಜಯವಾಣಿ’ ಸರಣಿ ವರದಿಗಳನ್ನು ಪ್ರಕಟಿಸುತ್ತಲೇ ಇದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತದ ಪರಿಣಾಮ ಸಹಕಾರ ತತ್ತ್ವಕ್ಕೆ ಕೊಡಲಿಯೇಟು ಬಿದ್ದಿರುವುದು ದುರದೃಷ್ಟಕರ. ಸರ್ಕಾರಿ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿರುವ ಭ್ರಷ್ಟಾಚಾರದ ಪರಿಣಾಮ ಇಲ್ಲಿಯೂ ಕಂಡುಬರುತ್ತಿದೆ. ಭದ್ರತೆ ಇಲ್ಲದೆ ಬೇಕಾಬಿಟ್ಟಿ ಸಾಲ ನೀಡಿಕೆ, ಮರುವಸೂಲಿಯಲ್ಲಿ ನಿರ್ಲಕ್ಷ್ಯ, ಕಮಿಷನ್ ದಂಧೆಗಳಂತಹ ಸರಣಿ ಲೋಪಗಳಿಂದಾಗಿ ರಾಜ್ಯದ ನೂರಾರು ಕೋ-ಆಪರೇಟಿವ್ ಸೊಸೈಟಿಗಳು ದಿವಾಳಿಯಾಗಿವೆ. ಮತ್ತೊಂದೆಡೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವ್ಯಾಪ್ತಿಗೆ ಒಳಪಡುವ 42 ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳೂ ನಷ್ಟದಲ್ಲಿರುವುದನ್ನು ರಾಜ್ಯ ಸರ್ಕಾರವೇ ಬಹಿರಂಗಪಡಿಸಿದೆ. ಸರ್ಕಾರ ಇಂತಹ ಬ್ಯಾಂಕ್ಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಠೇವಣಿದಾರರಲ್ಲಿ ಆತಂಕ ಶುರುವಾಗಿದೆ. ರಾಜ್ಯದಲ್ಲಿರುವ 284 ಪಟ್ಟಣ ಸಹಕಾರಿ ಬ್ಯಾಂಕ್ಗಳ ಪೈಕಿ 242 ಬ್ಯಾಂಕ್ಗಳು ಲಾಭದಲ್ಲಿದ್ದರೆ, 42 ಬ್ಯಾಂಕ್ಗಳು ನಷ್ಟದಲ್ಲಿವೆ ಎಂಬುದು ಗಮನಾರ್ಹ.
ಆರ್ಥಿಕ ಒಳಗೊಳ್ಳುವಿಕೆಯ ಜಾಲವನ್ನು ಬಲಪಡಿಸಲು ಸಹಕಾರ ತತ್ತ್ವಕ್ಕಿಂತ ಪರಿಣಾಮಕಾರಿ ಮಾಧ್ಯಮ ಬೇರೆ ಇಲ್ಲ. ಜನರ ವಿಶ್ವಾಸಾರ್ಹತೆ ಉಳಿಸಿ, ಬೆಳೆಸಿಕೊಳ್ಳಬೇಕಿದ್ದ ಸಹಕಾರಿ ರಂಗ ತನ್ನದೇ ಅಪಸವ್ಯಗಳಿಂದ ಸೊರಗುತ್ತಿದೆ. ಅಭಿವೃದ್ಧಿಯ ಹಾದಿಯಿಂದ ವಿಮುಖವಾಗುತ್ತಿದೆ. ಲೆಕ್ಕಪತ್ರಗಳಲ್ಲಿ ಅವ್ಯವಹಾರ ನಡೆಯುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಹಲವು ಸಹಕಾರಿ ಬ್ಯಾಂಕುಗಳು, ಸಂಘಗಳು ಮೂಲಉದ್ದೇಶವನ್ನು ಗಾಳಿಗೆ ತೂರಿ, ಅನರ್ಹ ವ್ಯಕ್ತಿ/ಸಂಸ್ಥೆಗಳಿಗೆ ಭದ್ರತೆಯಿಲ್ಲದೆ ಸಾಲ ನೀಡಿರುವುದು ರಹಸ್ಯವೇನಲ್ಲ.
ಸ್ವಜನಪಕ್ಷಪಾತ, ಅವ್ಯವಹಾರ, ನಕಲಿ ಖಾತೆಗಳ ಸೃಷ್ಟಿ, ರಾಜಕೀಯ ಪ್ರಭಾವದಿಂದಾಗಿ ಅಕ್ರಮಗಳು ಹೆಚ್ಚುತ್ತಲೇ ಇವೆ. ಹೀಗಿರುವಾಗ ಠೇವಣಿದಾರರ ಗತಿ ಏನು? ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ, ಹೊಸ ಮನೆ ಕಟ್ಟಲೆಂದೋ ಅಥವಾ ಚಿಕಿತ್ಸೆಗಾಗಿಯೋ ದುಡಿದಿಟ್ಟಿದ್ದ ಹಣವನ್ನೆಲ್ಲ ಅನೇಕರು ಠೇವಣಿ ಇಟ್ಟಿರುತ್ತಾರೆ. ಬೆವರಿನ ದುಡಿಮೆಯ ಹಣದ ಪಾವಿತ್ರ್ಯವನ್ನು ಈ ಸಂಘಗಳು, ಬ್ಯಾಂಕುಗಳು ಅರ್ಥಮಾಡಿಕೊಳ್ಳಬೇಕು. ಹೀಗೆ ಠೇವಣಿದಾರರ ಹಣವನ್ನು ಬೇಕಾಬಿಟ್ಟಿ ಬಳಸಿಕೊಳ್ಳುವ ಪ್ರವೃತ್ತಿಗೆ ಕೊನೆ ಹಾಡಲು ಸೂಕ್ತ ನಿಯಮ ರೂಪಿಸಬೇಕು. ಆರ್ಬಿಐ ವಾಪ್ತಿಗೆ ಬರುವ ಸಹಕಾರ ಬ್ಯಾಂಕ್ಗಳಲ್ಲಿ ಲೆಕ್ಕಪರಿಶೋಧನೆಯನ್ನು ಸಮರ್ಪಕವಾಗಿ ನಡೆಸಬೇಕು.
ಕಳೆದ ಎರಡು ದಶಕಗಳಲ್ಲಿ ಅವ್ಯವಹಾರ, ಹಣಕಾಸು ಕೊರತೆ ಕಾರಣಗಳಿಗಾಗಿ 430 ಸಹಕಾರಿ ಬ್ಯಾಂಕ್ಗಳ ಪರವಾನಗಿ ರದ್ದುಪಡಿಸಲಾಗಿದೆ. ಅದೇನಿದ್ದರೂ, ಸಹಕಾರಿ ಬ್ಯಾಂಕುಗಳು ಮತ್ತು ಸಂಘ, ಸಂಸ್ಥೆಗಳು ಕೊರತೆ, ಭ್ರಷ್ಟಾಚಾರವನ್ನು ದೂರವಾಗಿಸಿ ಗ್ರಾಹಕರ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಮೊದಲ ಆದ್ಯತೆ ನೀಡಬೇಕು. ಠೇವಣಿದಾರರ ಹಣಕ್ಕೆ ಸೂಕ್ತ ಭದ್ರತೆಯ ವ್ಯವಸ್ಥೆ ಮಾಡಬೇಕು. ಇತರ ಕೊರತೆಗಳನ್ನು ನಿವಾರಿಸಿಕೊಂಡು ಪಾರದರ್ಶಕ ಆಡಳಿತದತ್ತ ಮುಖಮಾಡಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡಲೇ ಬಾರದು. ಆಗಲೇ, ಸಹಕಾರ ರಂಗದ ನೈಜ ಉದ್ದೇಶ, ಆಶಯ ಈಡೇರಲು, ಜನರಿಗೆ ನಿಜಾರ್ಥದಲ್ಲಿ ನೆರವಿಗೆ ಬರಲು ಸಾಧ್ಯ.