ಸಮರ್ಪಕ ಜಾರಿ ಅಗತ್ಯ: ವಾಹನ ಗುಜರಿ ನೀತಿ ಅನುಷ್ಠಾನಕ್ಕೆ ಆದೇಶ

Scrap
Published on

ಪ್ರಯಾಣಿಕ ಸುರಕ್ಷತೆಗೆ ಆದ್ಯತೆ, ವಾಯುಮಾಲಿನ್ಯ ಉಂಟು ಮಾಡದ ಪರ್ಯಾಯ ಇಂಧನ (ಸಿಎನ್​ಜಿ, ಬಯೋ ಎಲ್​ಎನ್​ಜಿ) ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ಮತ್ತಿತರ ಆಶಯದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಗುಜರಿ ನೀತಿ ಹಲವು ದೂರಗಾಮಿ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಕೇಂದ್ರ ಮೋಟಾರು ವಾಹನಗಳ (ಮೊದಲ ತಿದ್ದುಪಡಿ) ನಿಯಮ 2023ರ ಅನ್ವಯ ನೂತನ ಗುಜರಿ ನೀತಿ ಏ.1ರಿಂದ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿರುವ ಹದಿನೈದು ವರ್ಷ ಪೂರ್ಣಗೊಳಿಸಿದ 9 ಲಕ್ಷ ಸರ್ಕಾರಿ ಬಳಕೆಯ ವಾಹನಗಳು ಗುಜರಿಗೆ ಸೇರಲಿವೆ. ರಾಜ್ಯ ಸರ್ಕಾರವೂ ‘ನೋಂದಾಯಿತ ವಾಹನ ಗುಜರಿ ನೀತಿ ಕರ್ನಾಟಕ-2022’ರ ಅನುಷ್ಠಾನಕ್ಕಾಗಿ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ನೀತಿಯನ್ನು ಸೂಕ್ತ ರೀತಿಯಲ್ಲಿ ಹಾಗೂ ವೈಜ್ಞಾನಿಕವಾಗಿ ಕಾರ್ಯಾನುಷ್ಠಾನಕ್ಕೆ ತರುವುದು ಮಹತ್ವದ್ದಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಬೇಕು ಎಂದು ಘೊಷಿಸಿದ ತಕ್ಷಣವೇ ರಾಜ್ಯ ಸರ್ಕಾರವು ಹೊರಡಿಸಿರುವ ಪ್ರಸ್ತುತ ಆದೇಶದ ಪ್ರಕಾರ 15 ವರ್ಷ ಮೇಲ್ಪಟ್ಟ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಾಗಿದೆ. ರಸ್ತೆ ಸಾರಿಗೆ ವಿಷಯವು ಸಹವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಈ ವಿಷಯದಲ್ಲಿ ಅಧಿಕಾರವಿದೆ. ಸರ್ಕಾರಿ ವಾಹನಗಳು 15 ವರ್ಷ ಆಗುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ನೋಂದಣಿ ರದ್ದುಗೊಂಡರೆ, ಖಾಸಗಿ ವಾಹನಗಳಿಗೆ ಫಿಟ್​ನೆಸ್ ಆಧರಿಸಿ ನೋಂದಣಿ ನವೀಕರಿಸಿಕೊಳ್ಳಲು ಅವಕಾಶವಿದೆ. ಹಳೆಯ ವಾಹನ ಗುಜರಿಗೆ ಹಾಕುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಅನೇಕ ತೆರಿಗೆ ರಿಯಾಯಿತಿಗಳನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ದೆಹಲಿ, ಮಹಾರಾಷ್ಟ್ರದಲ್ಲಿ 15 ವರ್ಷ ಮೀರಿದ ಎಲ್ಲ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಇದೇ ನೀತಿ ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ರಾಜ್ಯದಲ್ಲಿ 2.8 ಕೋಟಿ ವಾಹನಗಳಿದ್ದು, ಇದರಲ್ಲಿ 79 ಲಕ್ಷ ಕೋಟಿ ವಾಹನಗಳು 15 ವರ್ಷ ಮೀರಿದವು. ಒಂದು ಅಂದಾಜಿನ ಪ್ರಕಾರ ನೋಂದಣಿ, ಫಿಟ್​ನೆಸ್ ಪ್ರಮಾಣಪತ್ರ (ಎಫ್​ಸಿ) ಇಲ್ಲದಿರುವ ವಾಹನಗಳ ಸಂಖ್ಯೆ ರಾಜ್ಯದಲ್ಲಿ 14.3 ಲಕ್ಷ ಹಾಗೂ ದೇಶದಲ್ಲಿ 1.2 ಕೋಟಿ ಇದೆೆ. ಗುಜರಿ ನೀತಿ ಜಾರಿಗೊಳಿಸಲು ಮುಂದಾಗಿರುವ ಸರ್ಕಾರವು ಫಿಟ್​ನೆಸ್ ಸರ್ಟಿಫಿಕೇಟ್ ಹಾಗೂ ಮರುನೋಂದಣಿ ಇಲ್ಲದೆ ಕಾನೂನುಬಾಹಿರವಾಗಿ ಸಂಚರಿಸುವ ಹಳೆಯ ವಾಹನಗಳನ್ನು ಪತ್ತೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದುದು ಬಹುಮುಖ್ಯವಾಗಿದೆ. ಅಲ್ಲದೆ, ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪವಿದ್ದು, ಈ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ವಿಧಾನ ಅನುಸರಿಸುವ ಮೂಲಕ ಇದನ್ನು ತಡೆಗಟ್ಟುವ ಸಾಧ್ಯತೆಯತ್ತ ಸರ್ಕಾರ ಗಮನಹರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net