

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದೆ. ಮತ ರಾಜಕೀಯದ ಭರಾಟೆ ಸಾಗಿದೆ. ಪರಸ್ಪರ ಆರೋಪ- ಪ್ರತ್ಯಾರೋಪಗಳ ಕೆಸರೆರಚಾಟ ಜೋರಾಗತೊಡಗಿವೆ. ಆದರೆ, ಈ ಆರೋಪ, ಟೀಕೆಗಳಲ್ಲಿ ಗಾಂಭೀರ್ಯದ ಕೊರತೆ ಎದ್ದು ಕಾಣಿಸುತ್ತಿದೆ. ವೈಯಕ್ತಿಕ ಟೀಕೆಗಳಂತೂ ಸೂಕ್ಷ್ಮತೆಯ ಎಲ್ಲೆಯನ್ನು ಮೀರತೊಡಗಿವೆ. ಅನೇಕ ನಾಯಕರುಗಳು ಆಪಾದನೆ ಮಾಡುವಾಗ, ಟೀಕೆ ವ್ಯಕ್ತಪಡಿಸುವಾಗ ಬಳಸುವ ಶಬ್ದಗಳು, ವರ್ತಿಸುವ ರೀತಿಯು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ, ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಶೋಭೆ ತರುವಂತೆ ಕಂಡುಬರುತ್ತಿಲ್ಲ. ಈ ರೀತಿಯ ವರ್ತನೆಯು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ; ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳಲ್ಲೆಲ್ಲ, ಪಕ್ಷಾತೀತವಾಗಿ ಇಂತಹ ಪ್ರವೃತ್ತಿ ಕಂಡುಬರುತ್ತಿರುವುದು ಬೇಸರದ ಸಂಗತಿಯಾಗಿದೆ.
ರೌಡಿಶೀಟರ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು, ಬಿಜೆಪಿಯು ರೌಡಿ ಮೋರ್ಚಾ ತೆರೆಯಲಿ ಎಂದು ಲೇವಡಿ ಮಾಡಿದ್ದರೆ; ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯು, ‘ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೊಲೆ ಆರೋಪಿ ವಿನಯ್ ಕುಲಕರ್ಣಿ ಕಾಂಗ್ರೆಸ್ ನಾಯಕರಾಗಿದ್ದಾರೆ. ಗೂಂಡಾಗಿರಿಯ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ’ ಎಂದು ಟ್ವೀಟ್ ಮಾಡಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ತಮ್ಮ ವಿರುದ್ಧದ ಆರೋಪಗಳಿಗೆ ಯೋಗ್ಯ ರೀತಿಯಲ್ಲಿ ಸ್ಪಷ್ಟನೆ, ಸಮರ್ಥನೆ ನೀಡುವ ಬದಲಾಗಿ, ಇನ್ನೊಬ್ಬರ ಹುಳುಕನ್ನು ಎತ್ತಿ ತೋರಿಸುತ್ತಿರುವುದು. ಒಂದು ಪಕ್ಷದ ನಾಯಕರೊಬ್ಬರು ಇನ್ನೊಂದು ಪಕ್ಷದ ನಾಯಕರ ಕುರಿತು, 75 ವರ್ಷಗಳಾಗಿರುವುದಿಂದ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಹೇಳುತ್ತಾರೆ. ಆದರೆ, ತಮ್ಮ ಪಕ್ಷದಲ್ಲಿಯೂ 75 ವರ್ಷ ಮೀರಿರುವ ನಾಯಕರು ಸಾಕಷ್ಟು ಮಂದಿ ಇದ್ದಾರೆ ಎಂಬ ಸಂಗತಿಯು ಅವರಿಗೆ ಗೊತ್ತಲ್ಲವೆಂದೇನಲ್ಲ. ಘನತೆ, ಗಾಂಭೀರ್ಯ, ತೂಕವಿಲ್ಲದೆ ಪರಸ್ಪರ ಕೆಸರೆರಚಾಟ, ವಾಗ್ದಾಳಿಯಲ್ಲಿ ತೊಡಗಿರುವುದಕ್ಕೆ ಇವೊಂದಿಷ್ಟು ಸದ್ಯದ ಉದಾಹರಣೆಗಳು ಮಾತ್ರ. ನಾಲಿಗೆಯ ಮೇಲೆ ಹಿಡಿತ ಇಲ್ಲದ ಇಂತಹ ಮಾತುಗಳಿಗೆ ಕೊರತೆಯೇನೂ ಇಲ್ಲ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಟೀಕೆಯು ತೀಕ್ಷ್ಣವಾಗಿರುತ್ತಿದ್ದರೂ ಸೌಜನ್ಯದ ಎಲ್ಲೆ ಮೀರಿರುತ್ತಿರಲಿಲ್ಲ. ‘ಇಂದಿರಾ ಗಾಂಧಿ ಕುರ್ಸಿ ಚೋಡೊ’ (ಇಂದಿರಾ ಗಾಂಧಿ ಕುರ್ಚಿ ಬಿಡು) ಎಂಬ ಶೀರ್ಷಿಕೆಯಲ್ಲಿ ಕಿರುಪುಸ್ತಕವೊಂದನ್ನು ಬಿಜೆಪಿಯವರು ಪ್ರಕಟಿಸಲು ಮುಂದಾಗಿದ್ದರು. ಆಗ ವಾಜಪೇಯಿ ಅವರು ಶೀರ್ಷಿಕೆಯನ್ನು ‘ಇಂದಿರಾ ಗಾಂಧೀಜಿ ಕುರ್ಸಿ ಚೋಡಿಯೇ’ (ಇಂದಿರಾ ಗಾಂಧಿ ಅವರೇ ಕುರ್ಚಿ ತೊರೆಯಿರಿ) ಎಂದು ಬದಲಿಸಿ ಗೌರವ ತೋರಿದ್ದರು. ‘ಬಿಜೆಪಿಯವರು ರಾಮನನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ನನ್ನ ಹೆಸರಲ್ಲೂ ರಾಮನಿದ್ದಾನೆ’ ಎಂದು ಬಿಎಸ್ಪಿ ನಾಯಕ ದಿ. ಕಾನ್ಶಿರಾಮ್ ಹೇಳಿದ್ದಕ್ಕೆ ಪ್ರತಿಯಾಗಿ ವಾಜಪೇಯಿ ಅವರು, ‘ಹರಾಮ್ ಮೇ ಭೀ ರಾಮ್ ಹೈ’ ಎಂದು ನಯವಾದ ಮಾತುಗಳಲ್ಲೇ ತೀಕ್ಷಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ರಾಜಕೀಯದಲ್ಲಿ ಟೀಕೆ-ಟಿಪ್ಪಣಿ, ಆರೋಪ- ಪ್ರತ್ಯಾರೋಪ ಸಹಜ ಹಾಗೂ ನಿರೀಕ್ಷಿತ. ಆದರೆ, ಅದು ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ, ಯೋಜನೆಗಳಲ್ಲಿ ಲೋಷ-ದೋಷಗಳಿದ್ದರೆ ಸೂಕ್ತ ರೀತಿಯಲ್ಲಿ ಎತ್ತಿ ತೋರಿಸುವಂತಿರಬೇಕು. ಲೋಕಸಭೆ, ವಿಧಾನಸಭೆಗಳಲ್ಲಿ ಶಾಸನ- ಯೋಜನೆ ರೂಪಿಸುವಾಗ ತಪು್ಪಗಳಿದ್ದರೆ ಸರಿಪಡಿಸುವಂತಿರಬೇಕು. ಭ್ರಷ್ಟಾಚಾರ ಎಸಗಿದ್ದರೆ ಸಾಕ್ಷಿ ಸಮೇತ ಮಾತನಾಡಬೇಕು. ಆದರೀಗ, ವೈಯಕ್ತಿಕ ಮಟ್ಟದ, ಕೀಳಭಿರುಚಿಯ ಮಾತಿನ ಚಕಮಕಿಗಳಿಂದ ರಾಜಕೀಯ ನಾಯಕರು ತಮ್ಮ ಗೌರವಕ್ಕೆ ತಾವೇ ಚ್ಯುತಿ ತಂದುಕೊಳ್ಳುವ ಪರಿಸ್ಥಿತಿ ತಲೆದೋರುತ್ತಿದೆ. ಟೀಕೆ ಮಾಡುವ ವಿಷಯದಲ್ಲಿ ಹುರುಳಿದ್ದರೆ ಅದನ್ನು ಸೌಜನ್ಯದ ಭಾಷೆಯಲ್ಲಿ ಹೇಳಿದರೂ ಮಹತ್ವ ಪಡೆದುಕೊಳ್ಳುತ್ತದೆ. ಇಲ್ಲದಿದ್ದರೆ, ಖಾಲಿ ಕೊಡ ಜೋರಾಗಿ ಶಬ್ದ ಮಾಡುತ್ತದೆ ಎಂದೇ ಭಾವಿಸಬೇಕಾಗುತ್ತದೆ.