

ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ನಕಾಶೆಯಲ್ಲಿ ಗುರುತಿಸಿಕೊಂಡಿರುವ ರಾಜಧಾನಿ ಬೆಂಗಳೂರು ನವೋದ್ಯಮಗಳಿಗೂ ಪೂರಕ ನಗರವಾಗಿ ಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆ. ಕೋವಿಡ್ ಸಾಂಕ್ರಾಮಿಕತೆ ಅವಧಿಯಲ್ಲೂ ದೇಶದಲ್ಲಿ ನವೋದ್ಯಮಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ 100ನೇ ಯೂನಿಕಾರ್ನ್ (ಷೇರು ಮಾರುಕಟ್ಟೆಯಲ್ಲಿ ನೂರು ಕೋಟಿ ಡಾಲರ್ ಮೌಲ್ಯ ದಾಟಿದ ಕಂಪನಿ) ಎಂಬ ಶ್ರೇಯವನ್ನು ಬೆಂಗಳೂರಿನ ಕಂಪನಿ ಪಡೆದುಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮೇ 5ರಂದು ಭಾರತದ ಯೂನಿಕಾರ್ನ್ಗಳ ಸಂಖ್ಯೆ 100 ದಾಟಿದ್ದು ಅದರ ಒಟ್ಟು ಮೌಲ್ಯ 25 ಲಕ್ಷ ಕೋಟಿ ರೂಪಾಯಿ ಆಗಿದೆ. 2021ರಲ್ಲಿ ಕೋವಿಡ್ ಸಾಂಕ್ರಾಮಿಕತೆ ನಡುವೆಯೂ ದಾಖಲೆ ಸಂಖ್ಯೆಯ 44 ಯೂನಿಕಾರ್ನ್ಗಳು ಸ್ಥಾಪನೆಯಾಗಿರುವುದು ಗಮನಾರ್ಹ. 2022ರಲ್ಲಿ 14 ಕಂಪನಿಗಳು ಶತಕೋಟಿ ಡಾಲರ್ ಮೌಲ್ಯಕ್ಕೆ ಪಾತ್ರವಾಗಿವೆ. ಒಟ್ಟಾರೆ 100 ಯೂನಿಕಾರ್ನ್ ಕಂಪನಿಗಳಲ್ಲಿ 39 ಕಂಪನಿಗಳು ಬೆಂಗಳೂರು ಮೂಲದ್ದಾಗಿವೆ ಎಂಬುದು ವಿಶೇಷ. ಕರೊನಾ ನಂತರದ ದಿನಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಬರಲು ಸಾಧ್ಯವೇ ಎಂಬ ಅನುಮಾನದ ಪ್ರಶ್ನೆಗೆ ಈಗ ಸಮಾಧಾನಕರ ಉತ್ತರ ಸಿಗುತ್ತಿದೆ.
ದೇಶದ ಮೊದಲ ಬೃಹತ್ ಸೆಮಿಕಂಡಕ್ಟರ್ ಘಟಕವೂ ಕರ್ನಾಟಕದಲ್ಲಿ ನಿರ್ವಣವಾಗಲಿದೆ. 22,900 ಕೋಟಿ ರೂಪಾಯಿ ಹೂಡಿಕೆಯ ಈ ಯೋಜನೆ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಪ್ಪಂದ ಏರ್ಪಟ್ಟಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ನೀರು, ರಸ್ತೆ, ವಿದ್ಯುತ್ ಸೇರಿ ವಿಶ್ವದರ್ಜೆಯ ಮೂಲ ಸವಲತ್ತುಗಳನ್ನು ಕಾಲಮಿತಿಯೊಳಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಪುನರುಚ್ಚರಿಸಿದೆ. ಈ ಬೆಳವಣಿಗೆಗಳು ಕೈಗಾರಿಕಾ ವಲಯ ಸೇರಿದಂತೆ ಇಡೀ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ. ಮಾನವ ಸಂಪನ್ಮೂಲ, ಕೌಶಲ, ಇತರ ಅಗತ್ಯ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿ ಹೂಡಿಕೆಸ್ನೇಹಿ ವಾತಾವರಣವನ್ನು ಕಾಯ್ದುಕೊಳ್ಳುವುದು ಅಗತ್ಯ.
ನವೋದ್ಯಮಗಳನ್ನು ಆರಂಭಿಸುವ ಕಂಪನಿ, ಸಂಸ್ಥೆಗಳು ಮುಂದೆ ಇಲ್ಲೇ ಉಳಿದುಕೊಂಡು, ಉದ್ಯಮವನ್ನು ವಿಸ್ತರಿಸಬೇಕಾದರೆ ಬೆಂಗಳೂರಿನಂಥ ಮಹಾನಗರದಲ್ಲಿ ಮೂಲಸೌಕರ್ಯಗಳು ಇನ್ನಷ್ಟು ವಿಸ್ತರಣೆಗೊಳ್ಳಬೇಕು ಎಂಬುದು ವಾಸ್ತವ. ಕೆಲವು ನವೋದ್ಯಮಗಳು ಎರಡು ಮತ್ತು ಮೂರನೇ ಹಂತದ ನಗರಗಳತ್ತ ಮುಖ ಮಾಡಿದ್ದು, ಉದ್ಯೋಗಸೃಷ್ಟಿಗೆ ಪೂರಕವಾಗಲಿದೆ. ಆದರೆ, ಅಂಥ ನಗರಗಳಲ್ಲಿ ಮೂಲಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ತುಂಬ ಕೆಲಸ ಆಗಬೇಕಿದೆ ಎಂಬುದನ್ನು ಸರ್ಕಾರ ಮರೆಯುವಂತಿಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕದ ವರ್ಚಸ್ಸು ಉದ್ಯಮ ರಂಗದಲ್ಲಿ ಹೆಚ್ಚುತ್ತಿರುವುದು ಸಂತಸದ ಸಂಗತಿ; ಜತೆಗೆ ಅಷ್ಟೇ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಈ ವರ್ಚಸ್ಸನ್ನು ಉಳಿಸಿಕೊಳ್ಳುವ ಜತೆಗೆ, ಮತ್ತಷ್ಟು ಹೆಚ್ಚಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಹಾಗಾದಾಗ ಮಾತ್ರ ಮತ್ತಷ್ಟು ನವೋದ್ಯಮಗಳು, ಹೂಡಿಕೆ ಬರಲು ಸಾಧ್ಯ.