

ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೊಷಣೆ ಮಾಡಿದೆ. ಮೇ10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ಜರುಗಲಿದೆ. ಚುನಾವಣೆ ಆಯೋಗವು ರಾಜ್ಯದಾದ್ಯಂತ ಏಕಕಾಲಕ್ಕೆ ಮತದಾನ ದಿನಾಂಕ ನಿಗದಿ ಮಾಡಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತ ರೀತಿಯಿಂದ ಚುನಾವಣೆಗಳು ಜರುಗಲಿವೆ ಎಂಬ ವಿಶ್ವಾಸವು ಚುನಾವಣೆ ಆಯೋಗಕ್ಕೆ ಇರುವುದನ್ನು ಇದು ಸೂಚಿಸುತ್ತದೆ.
ಮತದಾನ ನಡೆಯುವ ಮೇ 10ನೇ ತಾರೀಖು ಬುಧವಾರವಾಗಿದೆ. ವಾರದ ಮಧ್ಯ ದಿನವಾದ ಬುಧವಾರವನ್ನೇ ಮತದಾನಕ್ಕೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ನೀಡಿರುವ ಕಾರಣವು ಆತಂಕಕಾರಿಯಾಗಿದೆ.
ಸೋಮವಾರ ಅಥವಾ ಮಂಗಳವಾರ ನಿಗದಿ ಮಾಡಿದ್ದರೆ ಶನಿವಾರ ಮತ್ತು ಭಾನುವಾರದ ವಾರಾಂತ್ಯವನ್ನು ಸೇರಿಕೊಂಡು ರಜೆ ಮೇಲೆ ತೆರಳುವವರ ಸಂಖ್ಯೆ ಹೆಚ್ಚಾಗಿ ಮತದಾನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇತ್ತು. ಹಾಗಾಗಿ ವಾರದ ಮಧ್ಯದ ಬುಧವಾರ ಆಯ್ದುಕೊಳ್ಳಲಾಗಿದೆ ಎಂದು ಹೇಳಿರುವ ಅವರು, ಹಿಂದಿನ ಎರಡು ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ವ್ಯಾಪಕವಾಗಿ ಕಡಿಮೆಯಾಗುತ್ತಿರುವ ಬಗೆಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಪ್ರಮಾಣವಾದ ಶೇ. 72.13ರಷ್ಟು ಮತದಾನವಾಗಿದೆ. 1956ರಲ್ಲಿ ನೂತನ ರಾಜ್ಯವಾಗಿ ಕರ್ನಾಟಕ ರಚನೆಗೊಂಡ ನಂತರ ಇದು ಗರಿಷ್ಠ ಶೇಕಡಾವಾರು ಮತದಾನವಾಗಿ ದಾಖಲೆ ಬರೆದಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ. 71.4ರಷ್ಟು ಹಾಗೂ 2008ರ ವಿಧಾನಸಭೆ ಚುನಾವಣೆಯಲ್ಲಿ ಶೇ. 65ರಷ್ಟು ಮತದಾನವಾಗಿತ್ತು. 2018ರಲ್ಲಿ ಇಡೀ ರಾಜ್ಯದಲ್ಲಿ ದಾಖಲೆಯ ಮತದಾನವಾಗಿದ್ದರೂ ಬೆಂಗಳೂರು ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಶೇ. 54.1ರಷ್ಟಾಗಿ ನಿರಾಸೆ ಮೂಡಿಸಿತ್ತು. 2013ರಲ್ಲಿ ಇದು ಶೇ. 52.83 ಇತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಅತಿಮುಖ್ಯವಾದ ಘಟ್ಟವಾಗಿದೆ. ಸಂವಿಧಾನದ ಅನುಸಾರವಾಗಿ ದೇಶ-ರಾಜ್ಯವನ್ನಾಳಲು ಸೂಕ್ತ ಜನಪ್ರತಿನಿಧಿಗಳನ್ನು ಐದು ವರ್ಷಗಳ ಕಾಲ ಆಯ್ಕೆ ಮಾಡುವ ಪ್ರಕ್ರಿಯೆಯೇ ಚುನಾವಣೆಯಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಬುನಾದಿಯಾಗಿರುವ ಈ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವುದು ಅತಿಅವಶ್ಯ. 2015ರಿಂದ ಮತದಾನ ಮಾಡುವಲ್ಲಿ ನೋಟಾ (ಮೇಲಿನವರಲ್ಲಿ ಯಾರೂ ಅಲ್ಲ) ಬಳಕೆಗೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿಗಳಿಗೆ ಮತ ಹಾಕುವ ಮನಸ್ಸಿಲ್ಲದವರು ಕೂಡ ಚುನಾವಣೆಯಲ್ಲಿ ನೋಟಾಗೆ ಮತದಾನ ಮಾಡುವ ಅವಕಾಶ ದೊರೆತಿದೆ. 2018ರ ಚುನಾವಣೆಯಲ್ಲಿ ನೋಟಾಕ್ಕೆ ಶೇ. 0.9ರಷ್ಟು ಮತಗಳು ದೊರೆತಿವೆ. ಕೆಲವು ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ನೋಟಾಕ್ಕೆ ದೊರೆತಿವೆ. ಒಂದು ವೇಳೆ ಎಲ್ಲ ಅಭ್ಯರ್ಥಿಗಳಿಂದ ನೋಟಾಕ್ಕೆ ಹೆಚ್ಚು ಮತ ದೊರೆತರೂ ನಂತರದ ಸ್ಥಾನದಲ್ಲಿರುವ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಹೀಗಿದ್ದರೂ ಸೋಲು-ಗೆಲುವಿನಲ್ಲಿ ನೋಟಾ ಮತಗಳು ಮಹತ್ವದ ಪಾತ್ರವನ್ನು ನಿರ್ವಹಿಸಿರುವುದು ಕಂಡುಬರುತ್ತದೆ. ರಾಜ್ಯದಲ್ಲಿ ಈಗ 5.22 ಕೋಟಿ ಮತದಾರರರಿದ್ದಾರೆ. ಇದರಲ್ಲಿ 2,62,42,561 ಪುರುಷರು ಮತ್ತು 2,59,26,319 ಮಹಿಳೆಯರು ಇದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗಲಿ, ಹೆಚ್ಚು ಯಶ ಕಾಣಲಿ ಎಂಬ ಆಶಯದೊಂದಿಗೆ ಸೂಕ್ತ ಅಭ್ಯರ್ಥಿ ಆಯ್ಕೆಯಾಗಿ ಪ್ರತಿಯೊಬ್ಬರೂ ಮತದಾನ ಮಾಡುವಂತಾಗಲಿ.