

ಚಂಡೀಗಢದಲ್ಲಿ ಆಯೋಜಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 47ನೇ ಸಭೆಯು ಬುಧವಾರ ಮುಕ್ತಾಯಗೊಂಡಿದೆ. ಸಾಕಷ್ಟು ಸರಕುಗಳ ತೆರಿಗೆ ದರ ಹೆಚ್ಚಿಸಲು ಹಾಗೂ ಒಂದಿಷ್ಟು ವಸ್ತುಗಳಿಗೆ ತೆರಿಗೆ ಕಡಿತಗೊಳಿಸಲು ಅನುಮೋದನೆ ನೀಡಲಾಗಿದೆ. ಒಟ್ಟಾರೆಯಾಗಿ, ಸಾರ್ವಜನಿಕರಿಗೆ ತೆರಿಗೆ ಭಾರ ಹೆಚ್ಚುವುದು ಖಚಿತವಾಗಿದೆ. ತೆರಿಗೆ ದರ ತರ್ಕಬದ್ಧಗೊಳಿಸುವುದು ಹಾಗೂ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಮುಂದುವರಿಸುವುದು ಸೇರಿದಂತೆ ಹಲವಾರು ಮಹತ್ವದ ಸಂಗತಿಗಳ ಕುರಿತು ವಿಸõತ ವಿಚಾರ ವಿನಿಮಯಗಳು ಎರಡು ದಿನಗಳ ಈ ಸಭೆಯಲ್ಲಿ ನಡೆದವು. ಹಲವಾರು ವರ್ಷಗಳಿಂದ ತೆರಿಗೆ ದರಗಳನ್ನು ಕಡಿತಗೊಳಿಸಿದ್ದರಿಂದ ಆದಾಯದಲ್ಲಿ ಸಾಕಷ್ಟು ಕುಸಿತವಾಗಿದೆ ಎಂಬ ಅಭಿಪ್ರಾಯಗಳನ್ನು ರಾಜ್ಯಗಳು ವ್ಯಕ್ತಪಡಿಸಿದವು. ಆದಾಯ ಕೊರತೆ ಸರಿದೂಗಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಸರಕು- ಸೇವೆಗಳ ತೆರಿಗೆ ಏರಿಕೆ ನಿರ್ಧಾರ ಹೊರಹೊಮ್ಮಿರಬಹುದಾಗಿದೆ. ಇದೇ ವೇಳೆ, ಜಿಎಸ್ಟಿ ಪರಿಹಾರವನ್ನು ಇನ್ನೈದು ವರ್ಷಗಳ ಕಾಲ ವಿಸ್ತರಿಸಬೇಕೆಂಬ ಹಲವು ರಾಜ್ಯಗಳ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿಲ್ಲ.
ಮುದ್ರಣ- ಬರೆಯುವ ಶಾಯಿ, ಚಾಕು, ಚಮಚ, ನೀರೆತ್ತುವ ಪಂಪ್ ಮುಂತಾದವುಗಳ ತೆರಿಗೆ ದರವನ್ನು ಶೇ. 12 ರಿಂದ 18ಕ್ಕೆ ಏರಿಸಲಾಗಿದೆ. ಆಹಾರ ಧಾನ್ಯಗಳನ್ನು ಶುಚಿಗೊಳಿಸುವ ಯಂತ್ರಗಳು, ಧಾನ್ಯಗಳನ್ನು ಸಂಸ್ಕರಿಸುವ ಗಿರಣಿಗಳ ಯಂತ್ರಗಳು, ವೆಟ್ ಗ್ರೖೆಂಡರ್ ತೆರಿಗೆಗಳನ್ನು ಶೇ. 5ರಿಂದ 18ಕ್ಕೆ ಏರಿಸಲಾಗಿದೆ. ಕೃಷಿ ಉತ್ಪನ್ನ, ಮೊಟ್ಟೆ, ಹಣ್ಣು ಶುಚಿಗೊಳಿಸುವ ಯಂತ್ರಗಳು, ಡೈರಿ ಯಂತ್ರಗಳು ಮುಂತಾದವುಗಳ ದರವನ್ನು ಶೇ. 12 ರಿಂದ 18ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಸಾಮಗ್ರಿಗಳ ತೆರಿಗೆ ಹೆಚ್ಚಳವು ಅಗತ್ಯ ಆಹಾರ ಧಾನ್ಯಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಜನಸಾಮಾನ್ಯರಿಗೆ ಖಂಡಿತವಾಗಿಯೂ ಹೊರೆಯಾಗಲಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಿರುವುದು ಪರಿಸರ ಸಂರಕ್ಷಣೆ ಪೂರಕ ಕ್ರಮವಾಗಿದ್ದರೆ, ಸೋಲಾರ್ ವಾಟರ್ ಹೀಟರ್ ತೆರಿಗೆ ದರವನ್ನು ಶೇ. 5ರಿಂದ 12ಕ್ಕೆ ಹೆಚ್ಚಳ ಮಾಡಲಾಗಿರುವುದು ಈ ನೀತಿಯನ್ನು ಪ್ರಶ್ನಿಸುವಂತಿದೆ.ರಸ್ತೆ, ಸೇತುವೆ, ರೈಲ್ವೆ, ಮೆಟ್ರೊ ಮುಂತಾದ ಸೇವೆಗಳ ದರವನ್ನು ಶೇ. 12ರಿಂದ 18ಕ್ಕೆ ಹೆಚ್ಚಿಸಿರುವುದು ಮೂಲಸೌಕರ್ಯ ಕ್ಷೇತ್ರಕ್ಕೆ ಹೊರೆಯಾಗಲಿದೆ. ಮೂಳೆಚಿಕಿತ್ಸೆ ಸಂಬಂಧಿ ಉಪಕರಣ, ದೇಹದ ಕೃತಕ ಅಂಗಗಳು, ಅಂಗವೈಕಲ್ಯ ಸರಿದೂಗಿಸುವ ಉಪಕರಣ, ಪಾಲಿಶ್ ಮಾಡಿದ ವಜ್ರಗಳು, ಸರಕು ಸಾಗಣೆ ವಾಹನಗಳ ಬಾಡಿಗೆ ಸೇವೆ ಮುಂತಾದವುಗಳ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದು ತೋರಿಕೆಯ ಕ್ರಮ ಎಂಬಂತಿದೆ. ಜಿಎಸ್ಟಿಗೆ ಪೆಟ್ರೋಲಿಯಂ ಉತ್ಪನ್ನಗಳ ಸೇರ್ಪಡೆ ವಿಷಯವನ್ನು ಮಂಡಳಿ ರ್ಚಚಿಸಿಲ್ಲ. ಈ ಉತ್ಪನ್ನಗಳಿಗೆ ರಾಜ್ಯಗಳಲ್ಲಿ ತೆರಿಗೆ ಪ್ರಮಾಣ ಬೇರೆ ಬೇರೆಯಾಗಿದೆ. ರಷ್ಯಾ- ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಮುಖಿಯಾದ ಕಾರಣ, ಜಿಎಸ್ಟಿ ವ್ಯಾಪ್ತಿಗೆ ಈ ಉತ್ಪನ್ನಗಳನ್ನು ತಂದು ಏಕರೂಪದ ತೆರಿಗೆ ವಿಧಿಸುವ ಮೂಲಕ ದರ ನಿಯಂತ್ರಣ ಮಾಡಬೇಕೆಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ.