ಸಿರಿಧಾನ್ಯಕ್ಕೆ ಪ್ರೋತ್ಸಾಹ; ಪ್ರಧಾನಿಯಿಂದ ಕರ್ನಾಟಕದ ಸಂಸ್ಥೆಗಳ ಯಶೋಗಾಥೆ ಪ್ರಸ್ತಾಪ

Editorial
Published on

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕರ್ನಾಟಕದ ಎರಡು ಗ್ರಾಮಗಳಲ್ಲಿನ ಸಿರಿಧಾನ್ಯ ಸಂಸ್ಥೆಗಳ ಯಶೋಗಾಥೆಯನ್ನು ಪ್ರಸ್ತಾಪಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದ ಆಳಂದ ಭೂತಾಯಿ ಸಿರಿಧಾನ್ಯ ರೈತ ಉತ್ಪಾದನಾ ಕಂಪನಿಯ ಸಾಧನೆ ಹಾಗೂ ಬೀದರ ಜಿಲ್ಲೆಯ ಹುಲಸೂರಿನ ಮಹಿಳಾ ಕಿಸಾನ್ ಮಿಲೆಟ್ಸ್ ಪ್ರೊಡ್ಯೂಸರ್ ಕಂಪನಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿರುವುದು ರೈತರನ್ನು, ಸಿರಿಧಾನ್ಯ ಬಳಕೆಯನ್ನು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುವ ಕ್ರಮವಾಗಿದೆ. ತಡಕಲ್ ಗ್ರಾಮದ ಕಂಪನಿ ಸಿರಿಧಾನ್ಯಗಳ ಹಿಟ್ಟು, ಬಿಸ್ಕತ್ ಉತ್ಪನ್ನಗಳನ್ನು ತಯಾರಿಸಿ ಮಾರುತ್ತದೆ. ಹುಲಸೂರಿನ ಕಂಪನಿಯ ಮಹಿಳೆಯರು ರಾಗಿ ಬೆಳೆಯುವ ಜತೆಗೆ, ಆರೋಗ್ಯ ಮಿತ್ರ ಬ್ರಾ್ಯಂಡ್​ನೊಂದಿಗೆ ರಾಗಿ ಹಿಟ್ಟು, ಸಾಮೆ ಅಕ್ಕಿ, ನವಣೆ, ಕುಸುಬೆ ಎಣ್ಣೆ ಸೇರಿ ವಿವಿಧ ಸಿರಿಧಾನ್ಯಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಪ್ರಸ್ತುತ ಸಿರಿಧಾನ್ಯ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ವಾರ್ಷಿಕವಾಗಿ ಅಂದಾಜು 170 ಲಕ್ಷ ಟನ್ ಸಿರಿಧಾನ್ಯವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ.

ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಳಸಲಾಗುವ ಜೋಳ, ದಕ್ಷಿಣ ಕರ್ನಾಟಕದಲ್ಲಿ ಉಪಯೋಗಿಸುವ ರಾಗಿ ಸಿರಿಧಾನ್ಯಗಳೇ ಆಗಿವೆ. ಸಿರಿಧಾನ್ಯಗಳು ಪೋಷಕಾಂಶ, ಜೀವಸತ್ವ, ಖನಿಜಗಳ ಉತ್ತಮ ಆಗರವಾಗಿವೆ. ಆರೋಗ್ಯಕಾರಿ ಪ್ರಯೋಜನಗಳಂತೂ ಹಲವಾರು. ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ನಿಯಂತ್ರಿಸಲು, ಹೃದಯರಕ್ತನಾಳದ ಆರೋಗ್ಯ ರಕ್ಷಿಸಲು. ಕರುಳಿನ ಉರಿಯೂತ ನಿರ್ವಹಿಸಲು ನೆರವಾಗುತ್ತವೆ. ಆರೋಗ್ಯಸ್ನೇಹಿಯಾಗಿರುವ ಸಿರಿಧಾನ್ಯಗಳ ಬಗೆಗೆ ಜನರಲ್ಲಿ ಇತ್ತೀಚೆಗೆ ಜಾಗೃತಿ ಹೆಚ್ಚತೊಡಗಿರುವುದು ಹಾಗೂ ಭಾರತ ಸರ್ಕಾರ, ಅದರಲ್ಲೂ ಸ್ವತಃ ಪ್ರಧಾನಿ ಮೋದಿಯವರು ಆಸಕ್ತಿ ತಳೆದಿರುವುದು ಸ್ವಾಗತಾರ್ಹ ಸಂಗತಿ.

ಮಳೆ ಆಶ್ರಿತ ಹಾಗೂ ಕಡಿಮೆ ಫಲವತ್ತಾದ ಜಮೀನಿನಲ್ಲಿ ಒಣ ಬೇಸಾಯ ಪದ್ಧತಿಯಲ್ಲಿ ಕರಾವಳಿ, ಬೆಟ್ಟ, ಬಯಲು ಹೀಗೆ ಎಲ್ಲ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. 65 ದಿನಗಳಲ್ಲಿಯೇ ಬೆಳೆ ತೆಗೆಯಬಹುದಾಗಿದೆ. ಎರಡು ವರ್ಷಗಳಿಗೂ ಅಧಿಕ ಕಾಲ ಸಂಗ್ರಹಿಸಿಡಬಹುದು. ಹೀಗೆ ಬೆಳೆಯಲು ಹಾಗೂ ಸೇವಿಸಲು ಹತ್ತು ಹಲವು ವಿಶಿಷ್ಟ ಅನುಕೂಲಗಳನ್ನು ಹೊಂದಿರುವ ಸಿರಿಧಾನ್ಯಗಳ ಉತ್ಪಾದನೆ ಪ್ರೋತ್ಸಾಹಿಸಲು ಭಾರತ ಸರ್ಕಾರವು 2018 ಅನ್ನು ರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಆಚರಿಸಿತು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ ಸಿರಿಧಾನ್ಯ ಬೆಳೆ ಪ್ರದೇಶ, ಉತ್ಪಾದನೆ ಹಾಗೂ ಇಳುವರಿ ಹೆಚ್ಚಿಸಲು ಯೋಜನೆ ರೂಪಿಸಿ ಪ್ರೋತ್ಸಾಹ ಕೂಡ ನೀಡುತ್ತಿದೆ. ಇದಲ್ಲದೆ, ಪ್ರಧಾನಿ ಮೋದಿ ಪ್ರಸ್ತಾಪವನ್ನು ವಿಶ್ವಸಂಸ್ಥೆ ಒಪ್ಪಿಸಿಕೊಂಡು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಭಾರತ ಸರ್ಕಾರವು ಭಾರತವನ್ನು ಸಿರಿಧಾನ್ಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸಲು ಮುಂದಾಗಿದೆ. ರೈತರು ಹಾಗೂ ಜನರು ಇದಕ್ಕೆ ಕೈಜೋಡಿಸಿ ಬೆಳೆಯಲು ಹಾಗೂ ಬಳಸಲು ಮುಂದಾಗುವ ಮೂಲಕ ಆರ್ಥಿಕ- ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net