

ಕೆಲವು ವರ್ಷಗಳ ಹಿಂದೆ ಅಡುಗೆ ಅನಿಲದ (ಎಲ್ಪಿಜಿ) ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಪ್ರತಿ ಸಿಲಿಂಡರ್ಗೆ 200 ರೂಪಾಯಿ ಸಬ್ಸಿಡಿಯನ್ನು ನೀಡಲು ನಿರ್ಧರಿಸಿರುವುದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತದಾರರನ್ನು ಓಲೈಸುವ ನಡೆಯೇ ಎಂಬ ಪ್ರಶ್ನೆಯನ್ನು ಮೂಡಿಸುವಂತಿದೆ. ಮಧ್ಯಪ್ರದೇಶ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಈಗಾಗಲೇ ಕಡಿಮೆ ಬೆಲೆಯಲ್ಲಿ ಎಲ್ಪಿಜಿ ಸಿಲಿಂಡರ್ ಕೊಡುವುದಾಗಿ ನೀಡಿರುವ ಭರವಸೆಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ರಾಜಕೀಯ ಲೆಕ್ಕಾಚಾರಗಳು ಏನೇ ಇದ್ದರೂ ಬೆಲೆ ಏರಿಕೆಯ ಪ್ರಸ್ತುತ ದಿನಗಳಲ್ಲಿ ಎಲ್ಪಿಜಿ ಬೆಲೆ ಇಳಿಕೆಯು ಜನತೆಗೆ ನಿರಾಳ ತರುವ ಸ್ವಾಗತಾರ್ಹ ಕ್ರಮವೇ ಆಗಿದೆ.
ಹಲವು ವರ್ಷಗಳಿಂದ ಎಲ್ಪಿಜಿ ಸಬ್ಸಿಡಿಯನ್ನು ಹಂತಹಂತವಾಗಿ ಕಡಿಮೆ ಮಾಡಿಕೊಂಡು ಬಂದಿದ್ದ ಕೇಂದ್ರ ಸರ್ಕಾರವು 2020ರ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಹೀಗಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ 14.2 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 1103 ರೂಪಾಯಿ ಇದ್ದು, ಆಗಸ್ಟ್ 30ರಿಂದ 903 ರೂಪಾಯಿಗೆ ಲಭ್ಯವಾಗಲಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂ ಯುವೈ) ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 200 ರೂಪಾಯಿಯಷ್ಟು ಸಬ್ಸಿಡಿ ನೀಡುವುದನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲು ಕಳೆದ ಮಾರ್ಚ್ನಲ್ಲಿಯೇ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ ಈಗ ಮತ್ತೆ 200 ರೂಪಾಯಿ ಸಬ್ಸಿಡಿ ನೀಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಬೆಲೆ 703 ರೂಪಾಯಿ ಆಗಲಿದೆ. ಕೇಂದ್ರ ಸಚಿವ ಸಂಪುಟ ಪುನಃ ಸಬ್ಸಿಡಿಯನ್ನು ಕೊಡುವ ನಿರ್ಧಾರ ತೆಗೆದುಕೊಂಡಿರುವುದು ಅಡುಗೆ ಅನಿಲ ಬಳಸುವ 33 ಕೋಟಿ ಭಾರತೀಯ ಕುಟುಂಬಗಳಿಗೆ ಸಂತಸ ಹಾಗೂ ನೆಮ್ಮದಿ ಮೂಡಿಸುವ ಸಂಗತಿಯಾಗಿದೆ.
ಈ ದರ ಕಡಿತದಿಂದ ವಾರ್ಷಿಕ ಅಂದಾಜು 10,000 ಕೋಟಿ ರೂ. ಆರ್ಥಿಕ ಹೊರೆಯಾಗಲಿದ್ದು, ಈ ವರ್ಷದ ಬಾಕಿ ಅವಧಿಗೆ ಈ ಹೊರೆಯು 7,680 ಕೋಟಿ ರೂಪಾಯಿ ಆಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಆದರೆ, ಇಷ್ಟೆಲ್ಲ ಹೊರೆಯ ಮಧ್ಯೆಯೇ ಅವರು ಉಜ್ವಲ ಯೋಜನೆಯಡಿ ಇನ್ನೂ 75 ಲಕ್ಷ ಮಂದಿಗೆ ಉಚಿತ ಅನಿಲ ಸಂಪರ್ಕವನ್ನು ಒದಗಿಸಲಾಗುತ್ತದೆ ಎಂದು ಪ್ರಕಟಿಸಿರುವುದು ಇನ್ನಷ್ಟು ಬಡಕುಟುಂಬಗಳಿಗೆ ನೆರವಾಗುವ ಪರಿಸರಸ್ನೇಹಿ ಕ್ರಮವಾಗಿ ಕಂಡುಬರುತ್ತದೆ. ಬಡ ಕುಟುಂಬಗಳಿಗೆ ಠೇವಣಿ ಇಲ್ಲದೆ ಸಿಲಿಂಡರ್ ಸಂಪರ್ಕ ಕಲ್ಪಿಸುವ ಈ ಯೋಜನೆಯನ್ನು 2016ರ ಮೇ ತಿಂಗಳಿನಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಈಗಾಗಲೇ ಅಂದಾಜು 9.6 ಕೋಟಿ ಫಲಾನುಭವಿ ಕುಟುಂಬಗಳು ಲಾಭ ಪಡೆದುಕೊಂಡಿವೆ.
ಚಂದ್ರಯಾನ- 3 ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವವನ್ನು ಇಸ್ರೋ ಯಶಸ್ವಿಯಾಗಿ ತಲುಪಿ ಐತಿಹಾಸಿಕ ಸಾಧನೆ ಮಾಡಿದ ದಿನವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸುವುದು ಭಾರತೀಯ ವಿಜ್ಞಾನಿಗಳಿಗೆ ಗೌರವಸೂಚಕ ಸ್ವಾಗತಾರ್ಹ ಕ್ರಮವಾಗಿದೆ. ಆಗಸ್ಟ್ 26ರಂದು ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್ಗೆ ಭೇಟಿ ನೀಡಿ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತಂತೆ ಘೋಷಣೆ ಮಾಡಿರುವುದಕ್ಕೆ ಈಗ ಸಂಪುಟ ಅನುಮೋದನೆ ನೀಡಿದೆ.