

ಅಪ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿಕೊಂಡಿದೆ. ಕೆಲ ದಿನಗಳಲ್ಲೇ ತಾಲಿಬಾನ್ ಉಗ್ರರು ಸರ್ಕಾರ ರಚಿಸಲಿದ್ದಾರೆ. ಈಗಾಗಲೇ ಅದು ರೂಪಿಸಿರುವ ನಿಯಮಗಳು, ಹೊರಡಿಸುತ್ತಿರುವ ಆದೇಶಗಳು ಅಫ್ಘನ್ ದೇಶವನ್ನು ಎರಡು ದಶಕಗಳ ಹಿಂದಿನ ಸ್ಥಿತಿಗೆ ಕೊಂಡೊಯ್ಯಲಿದೆ ಎಂಬುದರ ಸಂಕೇತ ನೀಡುತ್ತಿವೆ. ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ನಿರಾಕರಿಸಲಾಗುತ್ತಿದ್ದು, ಮಹಿಳೆಯರಂತೂ ತೀವ್ರ ಆತಂಕ ಎದುರಿಸುವಂತಾಗಿದೆ. ಪಂಜಶೀರ್ ಪ್ರಾಂತ್ಯದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ರಚನೆಯ ಪ್ರಕ್ರಿಯೆ ಮುಗಿದ ಕೂಡಲೇ ತಾಲಿಬಾನ್ ನಾಯಕರು ಹಳೆಯ ಕ್ರೌರ್ಯಕ್ಕೆ ಮರಳಿದರೆ ಗತಿಯೇನು ಎಂಬ ಕಳವಳವೂ ಅಪ್ಘಾನಿಸ್ತಾನದಲ್ಲಿ ವ್ಯಾಪಕವಾಗಿದೆ. ಇಷ್ಟು ಸಾಲದೆಂಬಂತೆ ಅಮೆರಿಕ ಸೇನೆ ಬಿಟ್ಟುಹೋಗಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸಿಕ್ಕಿವೆ. ಡ್ರೋನ್, ಮದ್ದುಗುಂಡು, ದುರ್ಗಮ ಪ್ರದೇಶದಲ್ಲೂ ಹಾರಾಟ ನಡೆಸುವಂಥ ಬ್ಲಾಕ್ಹಾಕ್ ಹೆಲಿಕಾಪ್ಟರ್ಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ಮತ್ತೊಂದೆಡೆ, ಐಸಿಸ್-ಕೆ ಉಗ್ರ ಸಂಘಟನೆಯ ದುಷ್ಕೃತ್ಯಗಳು ಮುಂದುವರಿದಿವೆ.
ಇಷ್ಟೊಂದು ಅಶಾಂತಿ, ಅಸ್ಥಿರತೆ ನೆಲೆಸಿದ್ದರೂ, ಪರಿಸ್ಥಿತಿಯ ನಿಯಂತ್ರಣಕ್ಕಾಗಿ ವಿಶ್ವಸಂಸ್ಥೆ ಏಕೆ ಮುಂದಾಗುತ್ತಿಲ್ಲ ಎಂಬ ಚರ್ಚೆಯೂ ತೀವ್ರಸ್ವರೂಪ ಪಡೆದುಕೊಂಡಿದೆ. ಅಲ್ಲದೆ, ಕೆಲ ದಿನಗಳ ಹಿಂದೆ ಕಾಬುಲ್ ಏರ್ಪೋರ್ಟ್ ಬಳಿ ನಡೆದ ಅವಳಿ ಬಾಂಬ್ ಸ್ಪೋಟದ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ತನ್ನ ಹೇಳಿಕೆಯಿಂದ ತಾಲಿಬಾನ್ ಪದದ ಉಲ್ಲೇಖವನ್ನು ಕೈಬಿಟ್ಟಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ‘ಯಾವುದೇ ದೇಶದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಅಫ್ಘನ್ ಗುಂಪುಗಳು ಬೆಂಬಲಿಸಬಾರದು’ ಎಂಬುದು ಪರಿಷ್ಕೃತ ಹೇಳಿಕೆ ಆಗಿದೆ. ಆ.16ರಂದು ಹೊರಡಿಸಲಾಗಿದ್ದ ಹೇಳಿಕೆಯಲ್ಲಿ, ‘ತಾಲಿಬಾನ್ ಅಥವಾ ಅಫ್ಘನ್ ಯಾವುದೇ ಗುಂಪು ಅಥವಾ ವ್ಯಕ್ತಿಗಳು ಅನ್ಯ ದೇಶದಲ್ಲಿ ನಡೆಯುವ ಭಯೋತ್ಪಾದನೆಯನ್ನು ಬೆಂಬಲಿಸಬಾರದು’ ಎಂದು ನಮೂದಿಸಿತ್ತು. ಹಾಗಾದರೆ, ತಾಲಿಬಾನ್ ಬಗ್ಗೆ ವಿಶ್ವಸಂಸ್ಥೆಯ ನಿಲುವು ಬದಲಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪಾಕಿಸ್ತಾನ ಮತ್ತು ಚೀನಾ ಈಗಾಗಲೇ ತಾಲಿಬಾನ್ಗೆ ಮಾನ್ಯತೆ ನೀಡಿವೆ.
1990ರ ದಶಕದಲ್ಲಿ ತಾಲಿಬಾನ್ ಆಡಳಿತಾವಧಿಯಲ್ಲಿ ಅಪ್ಘನ್ ಸ್ಥಿತಿ ಎಷ್ಟು ಶೋಚನೀಯವಾಗಿತ್ತು ಎಂಬುದನ್ನು ಜಾಗತಿಕ ವಲಯ ಗಮನಿಸಿದೆ. ಈ ಬಾರಿಯಂತೂ ತಾಲಿಬಾನ್ ನಾಯಕರು ಬಾಯಲ್ಲಿ ಶಾಂತಿಸ್ಥಾಪನೆ ಬಗ್ಗೆ ಮಾತನಾಡುತ್ತಲೇ, ಹಿಂಸೆಯನ್ನು ಹರಡುತ್ತಿದ್ದಾರೆ. ತಾಲಿಬಾನ್ನ ಮಾತು ಮತ್ತು ಕೃತಿಗೂ ತುಂಬ ವ್ಯತ್ಯಾಸವಿದೆ. ಮುಖ್ಯವಾಗಿ, ‘ಭಯೋತ್ಪಾದನೆ ವಿರುದ್ಧ ಸಮರ’ದ ಉದ್ದೇಶ ಮೃದುಧೋರಣೆಗಳಿಂದ ಸಾಕಾರವಾಗುವುದಿಲ್ಲ. ಭಯೋತ್ಪಾದನೆ ಜಾಗತಿಕ ಶಾಂತಿಗೆ ಕಂಟಕ ಎಂಬುದನ್ನು ಮರೆಯುವಂತಿಲ್ಲ. ಉಗ್ರವಾದದ ಅಪಾಯ ಬರೀ ಅಪ್ಘನ್ಗೆ ಮಾತ್ರವಲ್ಲ, ಹಲವು ದೇಶಗಳಿಗೆ ಇದೆ. ಈ ವಾಸ್ತವವನ್ನು ಮನಗಾಣಲು ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ವಿಫಲವಾದರೆ, ಅದರ ಪರಿಣಾಮ ಘೋರ. ಉಗ್ರವಾದದ ನಿಟ್ಟಿನಲ್ಲಿ ಕಠೋರ ನಿರ್ಣಯಗಳನ್ನು ತಳೆದು, ಜಾಗತಿಕ ಸಮುದಾಯ ಒಟ್ಟಾಗಿ ಹೋರಾಡಬೇಕಾದ ಕಾಲವಿದು. ಹೀಗಿರುವಾಗ ವಿಶ್ವಸಂಸ್ಥೆ ತನ್ನ ನೀತಿಯನ್ನು ಪರಾಮಶಿಸಿಕೊಂಡು, ಸಮರ್ಪಕ ನಿರ್ಧಾರಕ್ಕೆ ಬರುವುದು ಅವಶ್ಯ.