

ನಿವೇಶನ, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳ ಖರೀದಿ ಪ್ರಕ್ರಿಯೆಯ ಖರ್ಚು ಬರುವ ತಿಂಗಳಿನಿಂದ ರಾಜ್ಯದಲ್ಲಿ ಹೆಚ್ಚಾಗುವುದು ಖಚಿತವಾಗಿದೆ. ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದರಿಂದ ಸ್ಥಿರಾಸ್ತಿ ಮುದ್ರಾಂಕ ಶುಲ್ಕಗಳು ಹಾಗೂ ನೋಂದಣಿ ವೆಚ್ಚ ಹೆಚ್ಚಾಗಲಿದೆ. ಮುದ್ರಾಂಕ ಶುಲ್ಕದ ಹೆಚ್ಚಳವು ಸಾರ್ವಜನಿಕರ ಮೇಲೆ ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದವರ ಮೇಲೆ ಹೊರೆ ಆಗಬಹುದಾದರೂ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ನೆರವಾಗುವ, ಹೆಚ್ಚಿನ ಮೊತ್ತದ ಸಾಲ ಪಡೆದುಕೊಳ್ಳಲು ಅನುಕೂಲವಾಗುವ ಹಾಗೂ ಕಪು್ಪ ಹಣ ವಹಿವಾಟಿನ ನಿಯಂತ್ರಣಕ್ಕೆ ಸಾಕಷ್ಟು ಕಡಿವಾಣ ಹಾಕುವ ಕ್ರಮವಾಗಲಿದೆ.
ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಸರಿಸುಮಾರು ಶೇಕಡಾ 30ರಷ್ಟು ಹೆಚ್ಚು ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಶೇಕಡಾ 10ರಷ್ಟು ಹೆಚ್ಚಳವಾದರೆ, ಇನ್ನೊಂದಿಷ್ಟು ಪ್ರದೇಶಗಳಲ್ಲಿ ಇದು ಶೇಕಡಾ 90ರವರೆಗೂ ಹೆಚ್ಚಳ ಕಾಣಬಹುದಾಗಿದೆ. ಈಗಿರುವ ಮಾರ್ಗಸೂಚಿ ದರಕ್ಕಿಂತ ವಾಸ್ತವವಾಗಿ ಮಾರುಕಟ್ಟೆಯಲ್ಲಿ ನೂರಾರು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿರುವ ಪ್ರದೇಶಗಳಲ್ಲಿ ಮುದ್ರಾಂಕ ಶುಲ್ಕವನ್ನು ಸಾಕಷ್ಟು ಹೆಚ್ಚಳ ಮಾಡುತ್ತಿರುವುದು ಸೂಕ್ತ ಕ್ರಮವಾಗಿದೆ. ಈ ಪರಿಷ್ಕರಣೆಯಿಂದಾಗಿ ಹೆಚ್ಚುವರಿಯಾಗಿ 2 ಸಾವಿರ ಕೋಟಿ ರೂಪಾಯಿ ವರಮಾನ ಶುಲ್ಕ ಸಂಗ್ರಹವಾಗಬಹುದಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಂದಾಜಿಸಿದ್ದಾರೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ರಾಜ್ಯ ಬಜೆಟ್ನಲ್ಲಿ 25 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ದೊಡ್ಡ ಹೊಣೆಯನ್ನೇ ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗುತ್ತದೆ. ಆದರೆ, 2019ರ ನಂತರ ಇದುವರೆಗೂ ಪರಿಷ್ಕರಣೆ ಮಾಡಲಾಗಿಲ್ಲ. 2020 ಹಾಗೂ 2021ನೇ ಇಸ್ವಿಯಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಿಸಿ ಆರ್ಥಿಕ ಹಿನ್ನಡೆಯಾದ ಕಾರಣ ಹಿಂದಿನ ಸರ್ಕಾರವು ಪರಿಷ್ಕರಣೆಗೆ ಮುಂದಾಗಿರಲಿಲ್ಲ. ನಾಲ್ಕು ವರ್ಷಗಳ ನಂತರ ಪರಿಷ್ಕರಣೆ ಮಾಡಲು ನಿರ್ಧರಿಸಿರುವ ಪ್ರಸ್ತುತ ಸರ್ಕಾರವು ಈ ಹಿಂದಿನ ಬಾಕಿಯನ್ನು ವಸೂಲಿ ಮಾಡುವ ರೀತಿಯಲ್ಲಿ ಹೆಚ್ಚಳ ಮಾಡಲು ಮುಂದಾಗಬಾರದು. ದೇಶದ ವಾರ್ಷಿಕ ಬೆಳವಣಿಗೆ ದರ ಸರಾಸರಿ ಶೇಕಡಾ 6ರಷ್ಟಿದ್ದು, ಇದರನ್ವಯವಾಗಿ ಶೇ. 10ರಿಂದ 15ರಷ್ಟು ಹೆಚ್ಚಳ ಮಾಡುವುದು ಸೂಕ್ತ ಎನ್ನಬಹುದಾಗಿದೆ.
ಇನ್ನು ಮಾರ್ಗಸೂಚಿ ದರ ಹೆಚ್ಚಳ ಮಾಡುವುದು ಬ್ಯಾಂಕ್ಗಳಿಂದ ಯೋಗ್ಯ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದುಕೊಳ್ಳಲು ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮಾರ್ಗಸೂಚಿ ದರ ಹೆಚ್ಚಳವಾದರೆ ಆಸ್ತಿ ಖರೀದಿ ವಹಿವಾಟಿನಲ್ಲಿ ಅಧಿಕೃತವಾಗಿ ಹೆಚ್ಚಿನ ಮೊತ್ತವನ್ನು ದಾಖಲಿಸಬೇಕಾಗುತ್ತದೆ. ಈ ಮೂಲಕ ಕಪು್ಪ ವಹಿವಾಟಿಗೆ ಸಾಕಷ್ಟು ಕಡಿವಾಣ ಬೀಳುತ್ತದೆ. ದಾಖಲೆಯಲ್ಲಿ ಹೆಚ್ಚಿನ ಮೊತ್ತ ತೋರಿಸುವುದರಿಂದ ಬ್ಯಾಂಕ್ ನೀಡುವ ಸಾಲ ಪ್ರಮಾಣವೂ ಹೆಚ್ಚಾಗುತ್ತದೆ. ಬಡ ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಮೊತ್ತದ ಸಾಲ ಪಡೆದುಕೊಂಡು ಆಸ್ತಿ ಖರೀದಿಸಲು ನೆರವಾಗುತ್ತದೆ. ಈ ಮೂಲಕ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯಲು ಕಾರಣವಾಗುತ್ತದೆ.
ಇನ್ನು ಕಾವೇರಿ-2 ತಂತ್ರಾಂಶದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಉಳಿದುಕೊಂಡಿವೆ. ಕೆಲ ರೀತಿಯ ಆಸ್ತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗದೆ ಹಲವು ದಿನಗಳಿಂದ ಪರದಾಡುವಂತಾಗಿದೆ. ಇಂತಹವರು ತಮ್ಮದಲ್ಲದ ತಪ್ಪಿಗೆ ಮುಂದಿನ ತಿಂಗಳು ಹೆಚ್ಚಿನ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ, ಇಂತಹ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವವರೆಗೆ ಮುದ್ರಾಂಕ ಶುಲ್ಕ ಪರಿಷ್ಕರಣೆ ದಿನಾಂಕ ಮುಂದೂಡುವುದು ಅಪೇಕ್ಷಿತ.