

ಹಿಂದೆಂದಿಗಿಂತಲೂ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಅನಿವಾರ್ಯತೆಯನ್ನು ಕರೊನಾ ಕಾಲಘಟ್ಟ ಸೃಷ್ಟಿಸಿದೆ. ನಗರಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಲಭ್ಯತೆ ಕೈಗೆಟಕುವಂತಿದ್ದರೆ, ಗ್ರಾಮೀಣ ಭಾಗದಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಶೋಚನೀಯ. ಕರೊನಾ ಎರಡನೇ ಅಲೆಯ ಹೊತ್ತಲ್ಲಿ ಹಳ್ಳಿಗಳಲ್ಲಿ ಸೋಂಕು ಪ್ರಸರಣ ವೇಗ ಪಡೆದಾಗ ಸೃಷ್ಟಿಯಾದ ಸಂಕಷ್ಟ, ಚಿಕಿತ್ಸೆಗೆ ಅನುಭವಿಸಿದ ಪರದಾಟವನ್ನು ಮರೆಯುವ ಹಾಗಿಲ್ಲ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿ ಆ ಹೊತ್ತಲ್ಲಿ ಅನಾವರಣಗೊಂಡಿತು. ಬಳಿಕ, ಸರ್ಕಾರ ಈ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ, ಸೂಕ್ತ ಸಿಬ್ಬಂದಿ ನೇಮಿಸುವ ಭರವಸೆ ನೀಡಿತು. ಇದರಿಂದ ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಚಿಕಿತ್ಸೆಗೂ ನಗರಗಳಿಗೆ ಅಲೆದಾಡುವುದು ತಪು್ಪತ್ತದೆ ಎಂದೂ ಹೇಳಿತ್ತು. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಬದಲಾಗಿದೆಯೇ, ಸುಧಾರಣೆಗಳು ಕಂಡುಬಂದಿವೆಯೇ ಎಂಬ ಪ್ರಶ್ನೆಗೆ ನಿರಾಸೆಯ ಉತ್ತರವೇ ದೊರೆಯುತ್ತದೆ.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್ಗೆ ಸಲ್ಲಿಸಿರುವ ಸಮಗ್ರ ವರದಿಯಲ್ಲಿ, ಹಲವು ಕಳವಳಕಾರಿ ಅಂಶಗಳು ಬೆಳಕಿಗೆ ಬಂದಿವೆ. ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಕಾನೂನು ಪ್ರಾಧಿಕಾರಿಗಳ ಸದಸ್ಯರು ಆಯ್ದ 100 ಪಿಎಚ್ಸಿಗಳು ಮತ್ತು 1 ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಈ ವರದಿ ಸಲ್ಲಿಸಿದ್ದಾರೆ. ಬಹುತೇಕ ಪಿಎಚ್ಸಿಗಳು ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದು, ಚಿಕಿತ್ಸೆ ನೀಡಲು ಬೇಕಾದ ಮೂಲಸೌಕರ್ಯಗಳೂ ಸಮರ್ಪಕ ಪ್ರಮಾಣದಲ್ಲಿ ಇಲ್ಲ. ಮಾನದಂಡದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರ 4,036ರಿಂದ 4,843 ಚದರ ಅಡಿ ವಿಸ್ತೀರ್ಣದಲ್ಲಿ ಇರಬೇಕು. ಆದರೆ, ಬಹುತೇಕ ಕಡೆ ಈ ಮಾನದಂಡ ಪಾಲನೆಯಾಗಿಲ್ಲ. 75 ಕೇಂದ್ರಗಳಲ್ಲಿ ತುರ್ತು ಆಂಬುಲೆನ್ಸ್ ಸೇವೆ, ಹೆರಿಗೆ ಕೊಠಡಿ ಇಲ್ಲ. ಕೋವಿಡ್ ಸೋಂಕಿತರಿಗೆ ಎಲ್ಲ ಪಿಎಚ್ಸಿಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗೆ ಕೊರತೆ, ಸಮಸ್ಯೆಗಳ ದೀರ್ಘ ಪಟ್ಟಿಯೇ ಇದೆ.
ಪಿಎಚ್ಸಿಗಳಲ್ಲಿ ಐಪಿಎಚ್ಎಸ್ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು. ದಿನದ 24 ಗಂಟೆ ತುರ್ತು ಸೇವೆ ಲಭ್ಯವಾಗಿಸಬೇಕು ಎಂಬುದು ಸೇರಿ ಸುಧಾರಣೆ ನಿಟ್ಟಿನಲ್ಲಿ ಪ್ರಸಕ್ತ ವರದಿ ಹಲವು ಶಿಫಾರಸುಗಳನ್ನು ಮಾಡಿದೆ. ಈ ಕೊರತೆಗಳನ್ನು ನೀಗಿಸದೆ ಗ್ರಾಮೀಣ ಆರೋಗ್ಯ ವ್ಯವಸ್ಥೆ ಶಕ್ತಿಶಾಲಿಯಾಗಲು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಸರ್ಕಾರ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಯೋಜನೆ, ಕಾರ್ಯಕ್ರಮಗಳನ್ನು ಬರೀ ಘೋಷಿಸಿ ಏನು ಫಲ? ಹಳ್ಳಿಗಳತ್ತ ವಿಶೇಷ ಗಮನ ವಹಿಸಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಜತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅಗತ್ಯ. ಈ ವಿಷಯದಲ್ಲಿ ಸ್ಥಳೀಯ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕೂಡ ಬದ್ಧತೆ ಮೆರೆಯಬೇಕಿದೆ.