ನೇಮಕಾತಿ ಸುಗಮವಾಗಲಿ; ನ್ಯಾಯಾಂಗದ ಕೊಲಿಜಿಯಂ ವ್ಯವಸ್ಥೆ ಬಗೆಗೆ ತಕರಾರು

Editorial
Published on

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್​ಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ ಎಂಬಂಥ ಪರಿಸ್ಥಿತಿ ಕಂಡುಬರುತ್ತಿರುವುದು ಕಕ್ಷಿದಾರರ ಹಿತಾಸಕ್ತಿ ಹಾಗೂ ಒಟ್ಟಾರೆ ನ್ಯಾಯದಾನ ವ್ಯವಸ್ಥೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇನಲ್ಲ. ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳಿಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಇನ್ನೊಂದೆಡೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೊಲಿಜಿಯಂ ವ್ಯವಸ್ಥೆಯ ಬಗೆಗೆ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಕೊಲಿಜಿಯಂ ಎಂಬುದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್​ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತಿದ್ದು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ಗೆ ನ್ಯಾಯಮೂರ್ತಿಗಳ ನೇಮಕಾತಿ, ಬಡ್ತಿ ಹಾಗೂ ವರ್ಗಾವಣೆ ಮಾಡುವ ವ್ಯವಸ್ಥೆ. ಈ ಕೊಲಿಜಿಯಂ ವ್ಯವಸ್ಥೆ ಸಂವಿಧಾನದ ಮೂಲಕ ಹೊರಹೊಮ್ಮಿಲ್ಲ. ಅಲ್ಲದೆ, ಸಂಸತ್ತಿನಲ್ಲಿ ಅಂಗೀಕರಿಸಲಾದ ಶಾಸನದ ಮೂಲಕವೂ ರಚನೆಯಾಗಿಲ್ಲ. 1993ರಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಹೈಕೋರ್ಟ್​ಗಳ ನೇಮಕಾತಿಗೆ ಕೂಡ ಹೈಕೋರ್ಟ್​ಗಳಲ್ಲಿ ಕೊಲಿಜಿಯಂ ವ್ಯವಸ್ಥೆ ಇದ್ದು, ಇಲ್ಲಿ ಮಾಡಲಾದ ಶಿಫಾರಸಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಂತಿಮ ಒಪ್ಪಿಗೆ ನೀಡಿದ ನಂತರವೇ ಸರ್ಕಾರಕ್ಕೆ ಹೋಗುತ್ತದೆ.

ಈ ನೇಮಕಾತಿಗಳಲ್ಲಿ ಸರ್ಕಾರದ ಪಾತ್ರ ಸೀಮಿತವಾಗಿದೆ. ವಕೀಲರೊಬ್ಬರನ್ನು ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡ ಲಾಗಿದ್ದರೆ ಅವರ ಕುರಿತಂತೆ ಗುಪ್ತಚರ ಘಟಕದ ಮೂಲಕ ತನಿಖೆ ಮಾಡಲಾಗುತ್ತದೆ. ಕೊಲಿಜಿಯಂ ಸೂಚಿಸಿದ ಆಯ್ಕೆಗಳ ಬಗೆಗೆ ಸರ್ಕಾರವು ತಕರಾರು ಎತ್ತಿ ಸ್ಪಷ್ಟನೆ ಕೇಳಬಹುದಾಗಿದೆ. ಇದಾದ ನಂತರವೂ ಕೊಲಿಜಿಯಂ ಅದೇ ಹೆಸರುಗಳನ್ನು ಮತ್ತೆ ಶಿಫಾರಸು ಮಾಡಿದರೆ ಸರ್ಕಾರ ಅವರನ್ನೇ ನೇಮಕ ಮಾಡಬೇಕಾಗುತ್ತದೆ. ಹೀಗಾಗಿಯೇ ಈಗ ಸುಪ್ರೀಂ ಕೋರ್ಟ್ ಪೀಠವು, ಕೊಲಿಜಿಯಂ ಪುನರುಚ್ಚರಿಸಿದ ಹೆಸರುಗಳಿಗೂ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂಬುದು ವಾಸ್ತವ ಎಂಬ ಟೀಕಿಸಿದೆ. ‘ಕೊಲಿಜಿಯಂ ವ್ಯವಸ್ಥೆ ಪಾರದರ್ಶಕವಾಗಿಲ್ಲ ಮತ್ತು ಜವಾಬ್ದಾರಿಯುತವಾಗಿಲ್ಲ. ನ್ಯಾಯಾಧೀಶರು ಮತ್ತು ವಕೀಲರು ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ. ಈ ವ್ಯವಸ್ಥೆ ಬಗ್ಗೆ ತೃಪ್ತಿ ಇರದಿದ್ದರೂ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಇದರೊಂದಿಗೆ ಕೆಲಸ ಮಾಡಬೇಕಿದೆ’ ಎಂದು ರಿಜಿಜು ಹೇಳಿದ್ದಾರೆ.

ನ್ಯಾಯಾಧೀಶರು ತಮಗೆ ತಿಳಿದಿರುವವರ ನೇಮಕಾತಿ ಅಥವಾ ಉನ್ನತಿಗೆ ಮಾತ್ರ ಶಿಫಾರಸು ಮಾಡುತ್ತಾರೆ; ಇಂತಹವರು ಕೆಲಸಕ್ಕೆ ಯೋಗ್ಯ ವ್ಯಕ್ತಿಯಾಗಿರುವುದಿಲ್ಲ ಎಂದೂ ರಿಜಿಜು ಆಕ್ಷೇಪಿದ್ದಾರೆ. ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ರಾಜಕಾರಣಿಗಳು ಮತ್ತು ನಾಗರಿಕ ಸಮಾಜಕ್ಕೆ ಅಭಿಪ್ರಾಯ ಹೇಳಲು ಅವಕಾಶ ಕಲ್ಪಿಸುವಂತಹ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚನೆ (ಎನ್​ಜೆಎಸಿ) ಕಾಯ್ದೆಯನ್ನು 2015ರಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ದೇಶದಲ್ಲಿ ಕೋರ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ, ಸೂಕ್ತ ಸಂಖ್ಯೆಯಲ್ಲಿ ನ್ಯಾಯಾಧೀಶರ ನೇಮಕ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರಕರಣಗಳ ತ್ವರಿತ ವಿಲೇವಾರಿ ಅತ್ಯಗತ್ಯವಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ನ್ಯಾಯಮೂರ್ತಿಗಳ ನೇಮಕಾತಿ ಕುರಿತಂತೆ ಸಾಮರಸ್ಯ, ಹೊಂದಾಣಿಕೆ ಅಪೇಕ್ಷಣೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net