

ಸರ್ಕಾರ ಮತ್ತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಕರೊನಾ ಸೋಂಕಿನ ಮೊದಲನೇ ಅಲೆಯ ಬಳಿಕ, ಎರಡನೇ ಅಲೆಯನ್ನು ಉಪೇಕ್ಷಿಸಿದ್ದರಿಂದ ಭಾರಿ ಬೆಲೆಯನ್ನೇ ತೆರಬೇಕಾಯಿತು. ಆರೋಗ್ಯ ವ್ಯವಸ್ಥೆಯಂತೂ ನಲುಗಿ ಹೋಯಿತು. ಈಗಂತೂ ಜನರು, ‘ಇನ್ನೇನು ಕರೊನಾ ಮುಗಿದು ಹೋಯಿತು’ ಎಂದು ಭಾವಿಸಿ ಸಭೆ, ಸಮಾರಂಭಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ‘ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಎಚ್ಚರಿಸಿದ್ದಾರೆ. ಅಲ್ಲದೆ, ‘ಕರೊನಾ ಸೊಂಕಿನ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕರೊನಾ ವೈರಾಣುವಿನ ಹೊಸ ತಳಿ ‘ಒಮಿಕ್ರಾನ್’ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವೈರಾಣುವನ್ನು ವಿಶ್ವ ಆರೋಗ್ಯ ಸಂಸ್ಥೆ ‘ಕಳವಳಕಾರಿ’ ಎಂದು ವರ್ಗೀಕರಿಸಿದೆ. ಅಮೆರಿಕ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಭಾರತವೂ ಈ ಹೊಸ ಸವಾಲು ಎದುರಿಸಲು, ರೂಪಾಂತರಿತ ಸೋಂಕು ಪ್ರವೇಶ ತಡೆಯಲು ಸನ್ನದ್ಧವಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರವು ಭಾನುವಾರ ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಸೋಂಕು ಪತ್ತೆಗಾಗಿ ಪರೀಕ್ಷೆ ಹೆಚ್ಚಿಸಬೇಕು, ನಿಗಾ ವ್ಯವಸ್ಥೆ ಬಲಪಡಿಸಬೇಕು ಹಾಗೂ ಲಸಿಕೆ ನೀಡಿಕೆ ವೇಗ ಹೆಚ್ಚಿಸಬೇಕು ಎಂದು ಸೂಚಿಸಿದೆ. ಕರ್ನಾಟಕದಲ್ಲಿ ವಿದ್ಯಾರ್ಥಿಗಳಲ್ಲಿ ಸೊಂಕು ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ಪರೀಕ್ಷಾ ಸಂಖ್ಯೆಯನ್ನು 60 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಮೈಸೂರು, ಧಾರವಾಡ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮಾರಂಭ ಮುಂದೂಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿರುವುದು ಸೂಕ್ತವಾಗಿಯೇ ಇದೆ. ಜನಜಂಗುಳಿಯ ಭಾಗವಾಗುವುದನ್ನು ಮೊದಲು ತಪ್ಪಿಸಬೇಕು.
ಅಲ್ಲದೆ, ಮದುವೆಗಳು ಕೂಡ ಸರಳವಾಗಿ, ಕೆಲವೇ ಜನರ ಉಪಸ್ಥಿತಿಯಲ್ಲಿ, ಸುರಕ್ಷಾ ಕ್ರಮಗಳ ಪಾಲನೆಯೊಂದಿಗೆ ನಡೆಯಬೇಕು. ಮದುವೆ ಸಮಾರಂಭಗಳಲ್ಲಿ, ಇನ್ನಿತರ ಆಯೋಜನೆಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಿದ್ದು, ಯಾರಿಂದ ಸೋಂಕು ಪ್ರಸರಣವಾಗುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಲಸಿಕೆ ಅಭಿಯಾನಕ್ಕೆ ಮತ್ತೊಮ್ಮೆ ವೇಗ ನೀಡಬೇಕಿದೆ. ತುಂಬ ಜನರು ಎರಡನೇ ಡೋಸ್ ಪಡೆದುಕೊಂಡಿಲ್ಲ. ಲಸಿಕೆ ಉಪಲಬ್ಧವಿದ್ದರೂ, ಪ್ರಕರಣಗಳು ಕಡಿಮೆ ಆಗಿವೆ ಎಂದು ಉದಾಸೀನತೆ ತೋರುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳು ಎರಡು ವರ್ಷಗಳ ಬಳಿಕ ಆರಂಭವಾಗಿವೆ. ಮಕ್ಕಳು ಈಗಷ್ಟೇ ಕಲಿಕೆಯತ್ತ ಉತ್ಸಾಹದಲ್ಲಿ ತೊಡಗಿಕೊಂಡಿದ್ದಾರೆ. ಆರ್ಥಿಕ ಚಟುವಟಿಕೆಗಳು ಕೂಡ ಇತ್ತೀಚಿನ ದಿನಗಳಲ್ಲಿ ವೇಗ ಪಡೆಯುತ್ತಿವೆ. ಆದ್ದರಿಂದ, ಇವುಗಳು ಮತ್ತೆ ತೊಂದರೆಗೆ ಸಿಲುಕಬಾರದು, ಮತ್ತೊಮ್ಮೆ ಲಾಕ್ಡೌನ್ ಸ್ಥಿತಿ ಸೃಷ್ಟಿಯಾಗಬಾರದೆಂದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕು. ಸ್ವಚ್ಛತೆ, ಸುರಕ್ಷಿತ ಅಂತರ, ಮಾಸ್ಕ್ಧಾರಣೆ ಕಡ್ಡಾಯವಾಗಿ ಪಾಲನೆಯಾಗಲಿ.